ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಹಾಕಿ ಕ್ವಾಲಿಫೈಯರ್: ಶೂಟ್‌ಔಟ್‌ನಲ್ಲಿ ಭಾರತ ತಂಡ ಪರಾಭವ

Published 18 ಜನವರಿ 2024, 20:41 IST
Last Updated 18 ಜನವರಿ 2024, 20:41 IST
ಅಕ್ಷರ ಗಾತ್ರ

ರಾಂಚಿ : ಭಾರತ ಮಹಿಳಾ ಹಾಕಿ ತಂಡವು ಗುರುವಾರ ಇಲ್ಲಿ ನಡೆದ ಎಫ್‌ಐಎಚ್ ಒಲಿಂಪಿಕ್ ಕ್ವಾಲಿಫೈಯರ್ ಸೆಮಿಫೈನಲ್‌ನಲ್ಲಿ ಜರ್ಮನಿಯ ಎದುರು ಶೂಟ್‌ಔಟ್‌ನಲ್ಲಿ ಸೋತಿತು.

ತುರುಸಿನ ಪೈಪೋಟಿ ನಡೆದ ಸೆಮಿಫೈನಲ್ ಪಂದ್ಯದ ನಿಗದಿಯ ವೇಳೆಯಲ್ಲಿ 2–2ರಿಂದ ಟೈ ಆಯಿತು. ನಂತರ ನಡೆದ ಶೂಟೌಟ್‌ನಲ್ಲಿ ಜರ್ಮನಿ ತಂಡವು 4–3ರಿಂದ ಜಯಗಳಿಸಿತು.

ಈ ಪಂದ್ಯದಲ್ಲಿ ಜಯಿಸಿದ್ದರೆ ಭಾರತ ತಂಡವು ಪ್ಯಾರಿಸ್ ಒಲಿಂಪಿಕ್‌ ಕೂಟಕ್ಕೆ ಅರ್ಹತೆ ಗಿಟ್ಟಿಸುತ್ತಿತ್ತು. ಇದೀಗ ಒಲಿಂಪಿಕ್ ಪ್ರವೇಶಿಸಲು  ಇನ್ನೊಂದು ಅವಕಾಶ ಭಾರತಕ್ಕೆ ಉಳಿದಿದೆ. ಅದಕ್ಕಾಗಿ ಶುಕ್ರವಾರ ನಡೆಯಲಿರುವ ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧರಿಸುವ ಪಂದ್ಯದಲ್ಲಿ ಜಪಾನ್ ಎದುರು ಜಯಿಸಬೇಕು. ಟೂರ್ನಿಯಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು ಮಾತ್ರ ಪ್ಯಾರಿಸ್ ಟಿಕೆಟ್ ಪಡೆಯಲಿವೆ.

ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತದ ದೀಪಿಕಾ (15ನೇ ನಿಮಿಷ) ಮತ್ತು  ಇಷಿಕಾ ಚೌಧರಿ (59ನೇ ನಿಮಿಷ) ಗೋಲು ಗಳಿಸಿದರು. ಜರ್ಮನಿಯ ಶಾರ್ಲೊಟ್ ಸ್ಟೇಫನ್‌ಹಾಸ್ಟ್ (27ನಿ, 57ನಿ) ಎರಡು ಗೋಲು ಹೊಡೆದು ಸಮಬಲ ಸಾಧಿಸಲು ಕಾರಣರಾದರು.

ಜರ್ಮನಿ ಆಟಗಾರ್ತಿಯರು ಪಂದ್ಯದ ಆರಂಭದಿಂದಲೇ ಆಕ್ರಮಣಶೀಲ ಆಟವಾಡಿದರು. ಇದರಿಂದ ಭಾರತ ತಂಡದ ಮೇಲೆ ಒತ್ತಡ ಹೆಚ್ಚಿಸಿದರು. ಆದರೆ ಆತಿಥೇಯರು ತಮಗೆ ಲಭಿಸಿದ ಕೆಲವು ಪೆನಾಲ್ಟಿ ಕಾರ್ನರ್‌ ಗಳಲ್ಲಿ ಗೋಲು ಗಳಿಸುವ ಅವಕಾಶ ತಪ್ಪಿಸಿಕೊಂಡರು. ಶೂಟೌಟ್‌ನಲ್ಲಿ ಭಾರತದ ಗೋಲ್‌ಕೀಪರ್ ಎರಡು ಬಾರಿ ಗೋಲು ತಡೆದು ಜರ್ಮನಿ ಮೇಲೆ ಒತ್ತಡ ಹೆಚ್ಚಿಸಿದರು.  ಆದರೆ ನವನೀತ್ ಕೌರ್, ನೇಹಾ ಗೋಯಲ್, ಸಂಗೀತಾ ಕುಮಾರಿ ಮತ್ತು ಸೋನಿಕಾ ಗೋಲು ಗಳಿಕೆಯಲ್ಲಿ ಎಡವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT