ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌: ಸಾತ್ವಿಕ್‌– ಚಿರಾಗ್‌ ಮೇಲೆ ನಿರೀಕ್ಷೆಯ ಭಾರ

Published 11 ಮಾರ್ಚ್ 2024, 16:10 IST
Last Updated 11 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಫ್ರೆಂಚ್‌ ಓಪನ್‌ ಟೂರ್ನಿಯ ನೂತನ ಚಾಂಪಿಯನ್‌ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ತಮ್ಮ ಯಶಸ್ಸಿನ ಓಟವನ್ನು, ಮಂಗಳವಾರ ಆರಂಭವಾಗುವ  ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನಲ್ಲಿ ಮುಂದುವರಿಸುವ ನಿರೀಕ್ಷೆಯಿದೆ. ಅನುಭವಿ ಪಿ.ವಿ.ಸಿಂಧು ಕೂಡ ಉತ್ತಮ ಆಟ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವು 23 ವರ್ಷಗಳಿಂದ ಪ್ರಶಸ್ತಿ ಬರವನ್ನು ಎದುರಿಸುತ್ತಿದೆ. ಪ್ರಕಾಶ್ ಪಡುಕೋಣೆ (1980) ಮತ್ತು ಪುಲ್ಲೇಲ ಗೋಪಿಚಂದ್ (2001) ಅವರು ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್‌ ಪ್ರಶಸ್ತಿ ವಿಜೇತರಾಗಿದ್ದಾರೆ. ಸೈನಾ ನೆಹ್ವಾಲ್ (2015) ಮತ್ತು ಲಕ್ಷ್ಯ ಸೇನ್ (2022) ಅವರು ರನ್ನರ್‌ ಅಪ್‌ ಸ್ಥಾನ ಪಡೆದಿದ್ದಾರೆ.

ಅಂತರರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ನಾಲ್ಕು ಸೂಪರ್ 1000 ಟೂರ್ನಿಗಳಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ ಕೂಡಾ ಒಂದಾಗಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ 2001ರ ಬಳಿಕ ಭಾರತದ ಯಾವುದೇ ಆಟಗಾರ ಚಾಂಪಿಯನ್‌ ಕಿರೀಟ ಧರಿಸಿಲ್ಲ.

ಸಾತ್ವಿಕ್– ಚಿರಾಗ್ ಜೋಡಿ ಮೊದಲ ಸುತ್ತಿನಲ್ಲಿ ಇಂಡೊನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಮೂರು ಬಾರಿಯ ವಿಶ್ವ ಚಾಂಪಿಯನ್ ಹೆಂಡ್ರಾ ಸೆಟಿಯಾವಾನ್ ಜೋಡಿಯನ್ನು ಎದುರಿಸಲಿದೆ. 

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಆರಂಭಿಕ ಸುತ್ತಿನಲ್ಲಿ ಜರ್ಮನಿಯ ಯವೊನೆ ಲಿ ಅವರನ್ನು ಎದುರಿಸಲಿದ್ದಾರೆ. ಲಿ ವಿರುದ್ಧ 2–0 ಗೆಲುವಿನ ದಾಖಲೆ ಹೊಂದಿರುವ ಸಿಂಧು, ಇಲ್ಲಿ ಮುನ್ನಡೆದರೆ ಎರಡನೇ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಆನ್ ಸೆ ಯಂಗ್ (ಕೊರಿಯಾ) ಅವರ ಸವಾಲನ್ನು ಎದುರಿಸಬೇಕಾಗಬಹುದು ಎಡ ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡು ಫ್ರೆಂಚ್‌ ಓಪನ್‌ನಲ್ಲಿ ಕಣಕ್ಕೆ ಇಳಿದಿದ್ದ ಭಾರತದ ಆಟಗಾರ್ತಿ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದರು.

ಕಳೆದ ವಾರ ಫ್ರೆಂಚ್ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಲಕ್ಷ್ಯ ಸೇನ್‌ ಇಲ್ಲಿ ಮೊದಲ ಸುತ್ತಿನಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು ಎದುರಿಸುವರು. ಅವರಿಗೆ ಎರಡನೇ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಡೇನ್ ಆಂಡರ್ಸ್ ಆಂಟೊನ್‌ಸೆನ್ ಎದುರಾಗುವ ಸಾಧ್ಯತೆ ಇದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಎಚ್‌.ಎಸ್‌. ಪ್ರಣಯ್‌ ಅವರು ಚೀನಾ ತೈಪೆಯ ಸು ಲಿ ಯಾಂಗ್ ವಿರುದ್ಧ ಅಭಿಯಾನ ಆರಂಭಿಸುವರು. ಕಿದಂಬಿ ಶ್ರೀಕಾಂತ್‌ ಅವರು ಆರಂಭಿಕ ಸುತ್ತಿನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ವಿಕ್ಟರ್ ಅಕ್ಸೆಲ್ಸನ್ (ಡೆನ್ಮಾರ್ಕ್‌) ಅವರನ್ನು ಎದುರಿಸುವರು. ಭಾರತದ ಮತ್ತೊಬ್ಬ ಆಟಗಾರ ಪ್ರಿಯಾಂಶು ರಾಜಾವತ್‌ ಅವರು ಇಂಡೊನೇಷ್ಯಾದ ಚಿಕೋ ಔರಾ ದ್ವಿ ವಾರ್ಡೋಯೊ ಅವರೊಂದಿಗೆ ಮುಖಾಮುಖಿಯಾಗುವರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT