ನವದೆಹಲಿ: ಭಾರತ ತಂಡದವರು ಎಫ್‌ಐಎಚ್ ಪುರುಷರ ಹಾಕಿ ಫೈವ್ಸ್ ವಿಶ್ವಕಪ್ ಟೂರ್ನಿಯಲ್ಲಿ ಈಜಿಪ್ಟ್, ಸ್ವಿಟ್ಜರ್ಲೆಂಡ್ ಮತ್ತು ಜಮೈಕಾ ತಂಡಗಳ ಜತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಚೊಚ್ಚಲ ಹಾಕಿ ಫೈವ್ಸ್ ವಿಶ್ವಕಪ್ ಟೂರ್ನಿ ಮಸ್ಕತ್‌ನಲ್ಲಿ ಮುಂದಿನ ವರ್ಷ ಜ.24 ರಿಂದ 31ರ ವರೆಗೆ ನಡೆಯಲಿದೆ. ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ತಲಾ ನಾಲ್ಕು ತಂಡಗಳನ್ನೊಳಗೊಂಡ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
ನೆದರ್ಲೆಂಡ್ಸ್ ತಂಡವು ಪಾಕಿಸ್ತಾನ, ಪೋಲೆಂಡ್ ಮತ್ತು ನೈಜೀರಿಯಾ ಜತೆ ‘ಎ’ ಗುಂಪಿನಲ್ಲಿ ಆಡಲಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಟ್ರಿನಿಡಾಡ್ ಅಂಡ್ ಟೊಬ್ಯಾಗೊ ಮತ್ತು ಕೆನ್ಯಾ ತಂಡಗಳು ‘ಸಿ’ ಗುಂಪಿನಲ್ಲಿ; ಆತಿಥೇಯ ಒಮಾನ್, ಮಲೇಷ್ಯಾ, ಅಮೆರಿಕ ಮತ್ತು ಫಿಜಿ ತಂಡಗಳು ‘ಡಿ’ ಗುಂಪಿನಲ್ಲಿ ಸ್ಥಾನ ಗಳಿಸಿವೆ.
‘ಹಾಕಿ ಫೈವ್ಸ್‘ ಮಾದರಿಯಲ್ಲಿ ಪ್ರತಿ ತಂಡದಲ್ಲಿ ತಲಾ ಐವರು ಆಟಗಾರರು ಇರುವರು. ತಲಾ 10 ನಿಮಿಷಗಳ ಎರಡು ಅವಧಿಗಳ ಆಟ ನಡೆಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.