ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಮಾಸ್ಟರ್ಸ್‌ ಟೂರ್ನಿ: ಭಾರತ, ಇರಾನ್‌ಗೆ ಫೈನಲ್ ಕನಸು

ಪಾಕಿಸ್ತಾನ, ದಕ್ಷಿಣ ಕೊರಿಯಾ ತಂಡಗಳಿಗೆ ಜಯದ ನಿರೀಕ್ಷೆ
Last Updated 28 ಜೂನ್ 2018, 16:41 IST
ಅಕ್ಷರ ಗಾತ್ರ

ದುಬೈ: ವಿಶ್ವ ಚಾಂಪಿಯನ್‌ ಭಾರತ ಮತ್ತು ರನ್ನರ್ ಅಪ್‌ ಇರಾನ್ ತಂಡಗಳು ಕಬಡ್ಡಿ ಮಾಸ್ಟರ್ಸ್ ಟೂರ್ನಿಯ ಫೈನಲ್‌ ಪ್ರವೇಶಿಸುವ ಕನಸಿನೊಂದಿಗೆ ಶುಕ್ರವಾರ ಕಣಕ್ಕೆ ಇಳಿಯಲಿವೆ. ಅಲ್ ವಾಸಲ್ ಕ್ರೀಡಾ ಸಂಕೀರ್ಣದ ಅಂಗಣದಲ್ಲಿ ನಡೆಯಲಿರುವ ಸೆಮಿಫೈನಲ್‌ ಪಂದ್ಯಗಳಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು ಮತ್ತು ಇರಾನ್‌, ಪಾಕಿಸ್ತಾನವನ್ನು ಎದುರಿಸಲಿದೆ.

ಬಲಿಷ್ಠ ಭಾರತ ತಂಡ ‘ಎ’ ಗುಂಪಿನ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಕೀನ್ಯಾವನ್ನು ಮಣಿಸಿ ಸೆಮಿಫೈನಲ್‌ಗೆ ಏರಿತ್ತು. ಹೀಗಾಗಿ ಸೆಮಿಫೈನಲ್‌ನಲ್ಲಿ ಸುಲಭವಾಗಿ ಎದುರಾಳಿಗಳನ್ನು ಮಣಿಸುವ ಭರವಸೆ ಹೊಂದಿದೆ. ಇನ್ನೊಂದು ಕಡೆ ಇರಾನ್ ಮತ್ತು ಪಾಕಿಸ್ತಾನದ ನಡುವಿನ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

2016ರ ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತ ಮತ್ತು ಕೊರಿಯಾ ತಂಡಗಳು ಮುಖಾಮುಖಿಯಾಗಿದ್ದವು. ಅಹಮದಾಬಾದ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ಸೋತಿತ್ತು. ಇದಕ್ಕೆ ಮುಯ್ಯಿ ತೀರಿಸಲು ಕಾಯುತ್ತಿದ್ದ ಭಾರತ ಏಷ್ಯನ್ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ 45–29ರಿಂದ ಗೆದ್ದಿತ್ತು.

ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಕೊರಿಯಾ ಶುಕ್ರವಾರ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಕೊರಿಯಾದ ಪ್ರಮುಖ ರೈಡರ್‌ ಲೀ ಡಾಂಗ್‌ ಜಿಯಾನ್‌ ಗಾಯಗೊಂಡಿದ್ದು ಸೆಮಿಫೈನಲ್‌ನಲ್ಲಿ ಆಡುವುದು ಸಂದೇಹ. ಆದ್ದರಿಂದ ತಂಡ ಆತಂಕಕ್ಕೆ ಒಳಗಾಗಿದೆ.

ಏಷ್ಯನ್‌ ಗೇಮ್ಸ್‌ಗೆ ಸಿದ್ಧವಾಗುತ್ತಿರುವ ಭಾರತಕ್ಕೆ ಈ ಟೂರ್ನಿಯ ಫಲಿತಾಂಶ ಮಹತ್ವದ್ದಾಗಿದೆ. ಟೂರ್ನಿಯಲ್ಲಿ ಈ ವರೆಗೆ ಉತ್ತಮ ಆಟ ಆಡಿರುವ ಭಾರತ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಲು ಸಿದ್ಧವಿಲ್ಲ. ಹೀಗಾಗಿ ಕೊರಿಯಾ ಎದುರಿನ ಪಂದ್ಯಕ್ಕೆ ಮಹತ್ವ ನೀಡಲಾಗಿದೆ ಎಂದು ಕೋಚ್‌ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ರಿಶಾಂಕ್‌, ಮೋನು ಮೇಲೆ ಕಣ್ಣು

ಯುವ ಆಟಗಾರರಾದ ರಿಶಾಂಕ್ ದೇವಾಡಿಗ ಮತ್ತು ಮೋನು ಗೋಯತ್ ಅವರ ಮೇಲೆ ಭಾರತ ತಂಡ ಭರವಸೆ ಇರಿಸಿದೆ. ಮೊದಲ ಬಾರಿ ಪ್ರಮುಖ ಟೂರ್ನಿಯಲ್ಲಿ ಆಡುತ್ತಿರುವ ಇವರಿಬ್ಬರು ಈ ವರೆಗೆ ಉತ್ತಮ ಸಾಮರ್ಥ್ಯ ತೋರಿಸಿದ್ದಾರೆ. ನಾಯಕ ಅಜಯ್ ಠಾಕೂರ್‌ ರೈಡಿಂಗ್‌ನಲ್ಲಿ ಮಿಂಚಿದ್ದು ಡಿಫೆಂಡರ್‌ಗಳಾದ ಸುರೇಂದ್ರ ನಾಡಾ, ಗಿರೀಶ್‌ ಮಾರುತಿ ಮತ್ತು ಸುರ್ಜೀತ್‌ ಗಮನಾರ್ಹ ಸಾಧನೆ ಮಾಡಿದ್ದಾರೆ.

ಪ್ರೊ ಕಬಡ್ಡಿಯಲ್ಲಿ ಮಿಂಚಿರುವ ಜಾಂಗ್ ಕುನ್‌ ಲೀ ಕೊರಿಯಾ ತಂಡದ ಭರವಸೆ ಎನಿಸಿದ್ದಾರೆ. ಭಾರತದ ಕಬಡ್ಡಿಪಟುಗಳ ವಿರುದ್ಧ ಆಡಿದ ಅನುಭವ ಇರುವ ಅವರು ಶುಕ್ರವಾರ ಪ್ರಭಾವಿ ಆಟ ಆಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT