ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌: ದಿವ್ಯಾ, ಪಿಂಕಿ, ಸರಿತಾಗೆ ಚಿನ್ನ

ನಿರ್ಮಲಾ ಮಿಂಚು
Last Updated 20 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ದಿವ್ಯಾ ಕಕ್ರಾನ್‌, ಸರಿತಾ ಮೋರ್‌ ಹಾಗೂ ಪಿಂಕಿ ಅವರು ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ ಮೂರನೇ ದಿನ ಭಾರತಕ್ಕೆ ಚಿನ್ನದ ಪದಕಗಳನ್ನು ಗೆಲ್ಲಿಸಿಕೊಟ್ಟರು. ಗುರುವಾರ ಮಹಿಳೆಯರ 68 ಕೆಜಿ ವಿಭಾಗದಲ್ಲಿ ದಿವ್ಯಾ ಅಗ್ರಸ್ಥಾನ ಗಳಿಸಿದರೆ, ಪಿಂಕಿ ಹಾಗೂ ಸರಿತಾ ಕ್ರಮವಾಗಿ 55 ಕೆಜಿ ಹಾಗೂ 59 ಕೆಜಿ ವಿಭಾಗಗಳಲ್ಲಿ ಪ್ರಾಬಲ್ಯ ಮೆರೆದರು.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದ ಕೆ.ಡಿ.ಜಾಧವ್‌ ಸಭಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ 59 ಕೆಜಿ ಫೈನಲ್‌ ಹಣಾಹಣಿಯಲ್ಲಿ ಸರಿತಾ ಅವರು 3–2ರಿಂದ ಮಂಗೋಲಿಯಾದ ಬೆಟ್ಸೆಟ್‌ಸೆಗ್‌ ಅಟ್ಲಾಂಟ್‌ಸೆಟ್ಸೆಗ್‌ ಅವರನ್ನು ಚಿತ್‌ ಮಾಡಿದರು.

55 ಕೆಜಿ ವಿಭಾಗದ ಅಂತಿಮ ಹಣಾಹಣಿಯಲ್ಲಿ ಪಿಂಕಿ ಮಂಗೋ ಲಿಯಾದ ದುಲ್ಗುನ್‌ ಬೊಲೊರ್ಮಾ ಅವರ ಸವಾಲು ಮೀರಿದರು. 2–1ರಿಂದ ಗೆದ್ದ ಪಿಂಕಿ, ಟೂರ್ನಿಯ ಇತಿಹಾಸದಲ್ಲಿ ಚಿನ್ನ ಗೆದ್ದ ಭಾರತದ ಮೂರನೇ ಮಹಿಳೆ ಎನಿಸಿಕೊಂಡರು.

ಎರಡು ವರ್ಷಗಳ ಹಿಂದೆ ಜಕಾರ್ತಾ ಏಷ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ದಿವ್ಯಾ ತಮ್ಮ ವಿಭಾಗದ ಎಲ್ಲ ನಾಲ್ಕೂ ಸೆಣಸಾಟಗಳನ್ನು ಗೆದ್ದು ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.68 ಕೆ.ಜಿ. ವಿಭಾಗದಲ್ಲಿ ಐವರು ಕಣದಲ್ಲಿದ್ದು, ರೌಂಡ್‌ ರಾಬಿನ್‌ ಮಾದರಿಯಲ್ಲಿ ಸ್ಪರ್ಧೆ ನಡೆಯಿತು. ದಿವ್ಯಾ ಅಂತಿಮ ಹಣಾಹಣಿಯಲ್ಲಿ ಜಪಾನ್‌ನ ನರೂಹಾ ಮಾತ್ಸುಯುಕಿ ಅವರನ್ನು ತೀವ್ರ ಹೋರಾಟದ ನಂತರ 6–4 ರಿಂದ ಸೋಲಿಸಿದರು. ಒಂದು ಹಂತದಲ್ಲಿ ದಿವ್ಯಾ 4–0 ಮುನ್ನಡೆ ಸಾಧಿಸಿದ್ದರು. ಕೊನೆಯ ಹಂತದಲ್ಲಿ ‌ಹಾಲಿ ವಿಶ್ವ ಜೂನಿಯರ್‌ ಚಾಂಪಿಯನ್‌ ಮಾತ್ಸುಯಕಿ ಹೋರಾಟ ಪ್ರದರ್ಶಿಸಿದರು.

ಉಳಿದಂತೆ ಅಮೋಘ ಸಾಮರ್ಥ್ಯ ತೋರಿದ ಅವರು ಎದುರಾಳಿ ಕುಸ್ತಿಪಟುಗಳನ್ನು ನೆಲಕ್ಕೆ ಕೆಡವಿಯೇ ಜಯಗ ಳಿಸಿದರು. ಮೊದಲ ಎರಡು ಸುತ್ತುಗಳಲ್ಲಿ ಕಜಕಸ್ತಾನದ ಅಲ್ಬಿನಾ ಕೈಜಿಲಿನೊವಾ ಮತ್ತು ಮಂಗೋಲಿಯಾದ ಡೆಲ್ಗೆರ್ಮಾ ಎಂಕಸೈಖಾನ್‌ ಅವರನ್ನು ಸೋಲಿಸಿದರು. ಮೂರನೇ ಸುತ್ತಿನಲ್ಲಿ ಅವರು ಉಜ್ಬೇಕಿಸ್ತಾನದ ಅಝೋಡ ಎಸ್ಬೆರ್‌ಜೆನೊವಾ ಅವರನ್ನು ಸುಲಭವಾಗಿ ಸೋಲಿಸಿದರು.

ದಿವ್ಯಾ, ಕಳೆದ ವರ್ಷ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಕೊರಳಿಗೆ ಹಾಕಿಕೊಂಡಿದ್ದರು.

50 ಕೆಜಿ ವಿಭಾಗದಲ್ಲಿ ಫೈನಲ್‌ ತಲುಪಿದ್ದ ನಿರ್ಮಲಾ ದೇವಿ ಚಿನ್ನದ ಪದಕ ತಪ್ಪಿಸಿಕೊಂಡರು. ಫೈನಲ್‌ ಹಣಾಹಣಿಯಲ್ಲಿ ಅವರು 2–3ರಿಂದ ಜಪಾನ್‌ನ ಮಿಹೊ ಇಗರಾಶಿ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT