ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ಈಜುಕೊಳದಲ್ಲಿ ಡ್ರೆಸೆಲ್ ಮಿಂಚಿನ ಸಂಚಲನ

ಮಹಿಳೆಯರ ವಿಭಾಗದಲ್ಲಿ ಚೀನಾದ ಪಾರಮ್ಯ; ಮಿಶ್ರ ರಿಲೆ ಆರಂಭ
Last Updated 29 ಜುಲೈ 2021, 16:08 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ/ಎಪಿ/ರಾಯಿಟರ್ಸ್): ಅಮೆರಿಕದ ಕೆಲೆಬ್ ಡ್ರೆಸೆಲ್ ಅವರ ವೇಗಕ್ಕೆ ಈಜುಕೊಳದಲ್ಲಿ ಹೊನಲು ಹರಿಯಿತು.

ಪುರುಷರ 100 ಮೀಟರ್ ಫ್ರೀಸ್ಟೈಲ್‌ನಲ್ಲಿ 47.02 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನೂತನ ದಾಖಲೆ ಬರೆದರು. ಜೊತೆಗೆ ಚಿನ್ನದ ಪದಕವನ್ನೂ ಕೊರಳಿಗೇರಿಸಿಕೊಂಡರು. ಅವರಿಗೆ ನಿಕಟ ಸ್ಪರ್ಧೆಯೊಡ್ಡಿದ್ದ ಆಸ್ಟ್ರೇಲಿಯಾದ ಕೈಲ್ ಚಾಮರ್ಸ್ ಎರಡನೇ ಸ್ಥಾನ ಪಡೆದರು. ರಷ್ಯಾದ ಕ್ಲೈಮೆಂಟ್ ಕೊಲೆನಿಕೊವ್ ಕಂಚಿನ ಪದಕ ಪಡೆದರು.

200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಆಸ್ಟ್ರೇಲಿಯಾದ ಐಜಾಕ್ ಕುಕ್ ಪಾರಮ್ಯ ಮೆರೆದರು. 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಅಮೆರಿಕದ ರಾಬರ್ಟ್‌ ಫಿಂಕ್ ಚಿನ್ನದ ಪದಕ ಗೆದ್ದರು.

ಗ್ರೆಗೊರಿಯೊಗೆ ಬೆಳ್ಳಿಯೇ ಚಿನ್ನ!

ಇಟಲಿಯ ಗ್ರೆಗೊರಿಯೊ ಪ್ಲಾಟ್ರಿನೀರಿ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಜಯಿಸಿ ಹಿರಿಹಿರಿ ಹಿಗ್ಗಿದರು. ಚಿನ್ನ ಗೆದ್ದವರಿಗಿಂತಲೂ ಹೆಚ್ಚು ಸಂಭ್ರಮಿಸಿದರು.

ಒಂದು ತಿಂಗಳು ಹಿಂದಷ್ಟೇ ಮೊನಾನುಕ್ಲೆಯೊಸಿಸಿ ಎಂಬ ಜ್ವರದಿಂದ ಬಳಲಿದ್ದ ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಖಚಿತವಿರಲಿಲ್ಲ. ಆದರೆ, ಕಾಯಿಲೆ ಗೆದ್ದು ಬಂದು ಪದಕವನ್ನೂ ಜಯಿಸಿದರು. 2016ರಲ್ಲಿ ಅವರು 1500 ಮೀಟರ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಅವರು ವಿಶ್ವ ಚಾಂಪಿಯನ್ ಕೂಡ ಆಗಿದ್ದಾರೆ.

ಚೀನಾ ಪಾರಮ್ಯ

ಮಹಿಳೆಯರ ವಿಭಾಗದಲ್ಲಿ ಚೀನಾದ ಈಜುಗಾರ್ತಿಯರು ಪಾರಮ್ಯ ಮೆರೆದರು. 200 ಮೀಟರ್ ಬಟರ್‌ಫ್ಲೈನಲ್ಲಿ ಝಾಂಗ್ ಯೂಫಿ ಚಿನ್ನದ ಪದಕ ಗಳಿಸಿದರು. 4X200 ಮೀಟರ್ ಫ್ರೀಸ್ಟೈಲ್‌ ರಿಲೆಯಲ್ಲಿಯೂ ಚೀನಾ ತಂಡವೇ ಮೇಲುಗೈ ಸಾಧಿಸಿತು. ಈ ಸ್ಪರ್ಧೆಯಲ್ಲಿ ಕೇಟಿ ಲೆಡಕಿ, ಮಿಕ್ ಲಾಫ್ಲಿನ್ ಅವರಿದ್ದ ಅಮೆರಿಕ ಮತ್ತು ಆರಿಯಾನ್ ಟಿಟ್ಮಸ್ ಅವರಿದ್ದ ಆಸ್ಟ್ರೇಲಿಯಾ ತಂಡವನ್ನು ಚೀನಾ ಹಿಂದಿಕ್ಕಿತು.

ಗಮನ ಸೆಳೆದ ಸಜನ್ ಪ್ರಕಾಶ್

ಭಾರತದ ಸಜನ್ ಪ್ರಕಾಶ್ ಪುರುಷರ 100 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಸೆಮಿಫೈನಲ್ ಅರ್ಹತೆಯನ್ನು ತಪ್ಪಿಸಿಕೊಂಡರು.

27 ವರ್ಷದ ಸಜನ್ ಪ್ರಕಾಶ್ ಹೀಟ್ಸ್‌ನಲ್ಲಿ 55 ಈಜುಪಟುಗಳಲ್ಲಿ 46ನೇ ಸ್ಥಾನ ಪಡೆದರು. ಅಗ್ರ 16 ಸ್ಪರ್ಧಿಗಳು ಮಾತ್ರ ಸೆಮಿಫೈನಲ್ ಪ್ರವೇಶಿಸಿದರು. ಇದರೊಂದಿಗೆ ಈಜು ಕ್ರೀಡೆಯಲ್ಲಿ ಭಾರತದ ಅಭಿಯಾನ ಅಂತ್ಯವಾಯಿತು.

ಜೋಸೆಫ್ ಸ್ಕೂಲಿಂಗ್ ವಿಫಲ

ಐದು ವರ್ಷಗಳ ಹಿಂದೆ ರಿಯೊ ಒಲಿಂಪಿಕ್ಸ್‌ನಲ್ಲಿ 100 ಮೀಟರ್ಸ್‌ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಅಚ್ಚರಿ ಮೂಡಿಸಿದ್ದ ಜೋಸೆಫ್ ಸ್ಕೂಲಿಂಗ್ ಈ ಬಾರಿ ವೈಫಲ್ಯ ಅನುಭವಿಸಿದರು.

ಸಿಂಗಪುರದ ಜೋಸೆಫ್ ಹೀಟ್ಸ್‌ನಲ್ಲಿ 44ನೇ ಸ್ಥಾನ ಪಡೆದರು. ಜೋಸೆಫ್ 53.12 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹೋದ ಬಾರಿ ಜೋಸೆಫ್ ಮಾಡಿದ್ದ ದಾಖಲೆ (50.39ಸೆ)ಯನ್ನು ಅಮೆರಿಕದ ಡ್ರೆಸೆಲ್ ಸರಿಗಟ್ಟಿದರು.

ಮಿಶ್ರ ರಿಲೆ ಆರಂಭ

ಒಲಿಂಪಿಕ್ಸ್ ಈಜು ಕ್ರೀಡೆಯಲ್ಲಿ ಇದೇ ಮೊದಲ ಬಾರಿಗೆ ಮಿಶ್ರ ರಿಲೆ ವಿಭಾಗಕ್ಕೆ ಚಾಲನೆ ನೀಡಲಾಯಿತು.

4X100 ಮೀ ರಿಲೆ ನಡೆಯಿತು. ಅದರಲ್ಲಿ ಬ್ರಿಟನ್‌ನ ಆ್ಯಡಂ ಪೀಟಿ ನಾಯಕತ್ವದ ತಂಡ ಮತ್ತು ವಿಶ್ವದಾಖಲೆ ಹೊಂದಿರುವ ಚೀನಾದ ತಂಡವು ಕ್ರಮವಾಗಿ ಎರಡು ಹೀಟ್‌ಗಳಲ್ಲಿ ಗೆದ್ದವು.

ಫಲಿತಾಂಶಗಳು (ಪದಕ ವಿಜೇತರು)

ಪುರುಷರು:100 ಮೀ ಫ್ರೀಸ್ಟೈಲ್: ಕೆಲೆಬ್ ಡ್ರೆಸೆಲ್ (ಅಮೆರಿಕ; 47.02 ದಾಖಲೆ)–1, ಕೈಲ್ ಚಾಮರ್ಸ್ (ಆಸ್ಟ್ರೇಲಿಯಾ; 47.08ಸೆ)–2, ಕ್ಲೈಮೆಂಟ್ ಕೊಲೆನಿಕೊವ್ (ರಷ್ಯಾ; 47.44ಸೆ)–3

200 ಮೀ ಬ್ರೆಸ್ಟ್‌ಸ್ಟ್ರೋಕ್: ಐಜಾಕ್ ಸ್ಟಬೆಲ್ಟಿ ಕುಕ್ (ಆಸ್ಟ್ರೇಲಿಯಾ; 2ನಿ,06.38ಸೆ, ದಾಖಲೆ)–1, ಅರ್ನೊ ಕಮಿಂಗಾ (ನೆದರ್ಲೆಂಡ್ಸ್; 2ನಿ,7.01ಸೆ)–2, ಮ್ಯಾಟಿ ಮ್ಯಾಟ್ಸನ್ (ಫಿನ್ಲೆಂಡ್; 2ನಿ,7.24ಸೆ)–3.

800 ಮೀ ಫ್ರೀಸ್ಟೈಲ್: ರಾಬರ್ಟ್ ಫಿಂಕ್ (ಅಮೆರಿಕ; 7ನಿ,41.87ಸೆ)–1, ಗ್ರೆಗೊರಿ ಪ್ಲ್ಯಾಟ್ರಿನೀರಿ (ಇಟಲಿ; 7ನಿ,42.11ಸೆ)–2, ಮೈಖೆಲೊ ರೊಮಾನ್ಚುಕ್ (ಉಕ್ರೇನ್; 7ನಿ,42.33ಸೆ) –3.

ಮಹಿಳೆಯರು:200 ಮೀ ಬಟರ್‌ಫ್ಲೈ: ಝಾಂಗ್ ಯೂಫಿ (ಚೀನಾ: ಕಾಲ: 2ನಿ, 3.86ಸೆ) –1, (ಒಲಿಂಪಿಕ್ ದಾಖಲೆ), ರೇಗನ್ ಸ್ಮಿತ್ (ಅಮೆರಿಕ; 2ನಿ,5.30ಸೆ) –2, ಹ್ಯಾಲಿ ಫ್ಲಿಕಿಂಗರ್ (ಅಮೆರಿಕ; 2ನಿ,5.65ಸೆ) –3.

4X200 ಮೀ ಫ್ರೀಸ್ಟೈಲ್ ರಿಲೆ: ಚೀನಾ (ಯಾಂಗ್, ಟ್ಯಾಂಗ್ ಮುಹಾನ್, ಜ್ಯಾಂಗ್ ಯೂಫೀ, ಲಿ ಬಿಂಗ್ಜಿ– 7ನಿ,40.33ಸೆ ವಿಶ್ವದಾಖಲೆ)–1, ಅಮೆರಿಕ (ಶಿಮಿಟ್, ಮೇಡನ್, ಮೆಕ್‌ಲಾಫ್ಲಿನ್, ಲೆಡಕಿ– 7ನಿ,40.73ಸೆ)–2, ಆಸ್ಟ್ರೇಲಿಯಾ (ಟಿಟ್ಮಸ್, ಮೆಕಾನ್, ವಿಲ್ಸನ್ ನೇಲ್ –7ನಿ,41.29ಸೆ)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT