ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್‌ಹಾಕ್‌ ಸಮಿತಿಗೆ ಕಡತಗಳನ್ನು ಹಸ್ತಾಂತರಿಸಿ: ಕುಸ್ತಿ ಫೆಡರೇಷನ್‌ಗೆ ಐಒಎಯಿಂದ ಸೂಚನೆ

Published 13 ಮೇ 2023, 19:35 IST
Last Updated 13 ಮೇ 2023, 19:35 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷ್‌ ತನ್ನ ಹಣಕಾಸಿಗೆ ಸಂಬಂಧಿಸಿದ ಲೆಕ್ಕಪತ್ರ ಮತ್ತು ಇತರ ಅಧಿಕೃತ ಕಡತಗಳನ್ನು ತಾನು ನೇಮಿಸಿರುವ ಅಡ್‌ಹಾಕ್‌ ಸಮಿತಿಗೆ ಹಸ್ತಾಂತರಿಸುವಂತೆ ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಫೆಡರೇಷನ್‌ನ ಮಹಾ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದೆ.

ಫೆಡರೇಷನ್‌ನ ದೈನಂದಿನ ಆಗುಹೋಗುಗಳಲ್ಲಿ ಇನ್ನು ಮುಂದೆ ನಿರ್ಗಮಿತ ಪದಾಧಿಕಾರಿಗಳಿಗೆ ಯಾವುದೇ ಪಾತ್ರ ಇರುವುದಿಲ್ಲ ಎಂದೂ ಐಒಎ ಸ್ಪಷ್ಟಪಡಿಸಿದೆ.  ಎಲ್ಲ ಆಡಳಿತಾತ್ಮಕ, ಹಣಕಾಸು ಮತ್ತು ಕಾನೂನಿಗೆ ಸಂಬಂಧಿಸಿದ ಪಾತ್ರಗಳನ್ನು ಅಡ್‌ಹಾಕ್‌ ಸಮಿತಿ ವಹಿಸಲಿದೆ ಎಂದು ಐಒಎ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಈಗಾಗಲೇ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದು, ಐಒಎ ಆದೇಶ ಪಾಲನೆಯಲ್ಲಿ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಫೆಡರೇಷನ್‌ ಸಹ ಹೇಳಿದೆ. ಕೆಲದಿನಗಳ ಹಿಂದೆ ಐಒಎ ಅಡ್‌ಹಾಕ್‌ ಸಮಿತಿ ರಚಿಸಿದ್ದು, ಕುಸ್ತಿ ಫೆಡರೇಷನ್‌ನ ಆಡಳಿತದ ಜವಾಬ್ದಾರಿಯನ್ನು ವಹಿಸಿತ್ತು. ಫೆಡರೇಷನ್‌ಗೆ ಚುನಾವಣೆ ನಡೆಸುವ ಹೊಣೆಯನ್ನೂ ವಹಿಸಲಾಗಿದೆ.

ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೇಶದ ಪ್ರಮುಖ ಕುಸ್ತಿಪಟುಗಳು ಜಂತರ್‌ಮಂತರ್‌ನಲ್ಲಿ ಕಳೆದ ತಿಂಗಳು ಧರಣಿ ಆರಂಭಿಸಿದ್ದರು. ಇದರ ಬಳಿಕ ಕ್ರೀಡಾ ಸಚಿವಾಲಯದ ಸೂಚನೆ ಮೇರೆಗೆ ಐಒಎ ಅಡ್‌ಹಾಕ್‌ ಸಮಿತಿ ರಚಿಸಿತ್ತು.

‘ಸಂಬಂಧಪಟ್ಟ ದಾಖಲೆಗಳನ್ನು ಐಒಎ ಸಮಿತಿ ಜೊತೆ ಹಂಚಿಕೊಳ್ಳುವಲ್ಲಿ ಯಾವುದೇ ತೊಡಕು ಇಲ್ಲ ಎಂದು ಕುಸ್ತಿ ಫೆಡರೇಷನ್‌ ಮಹಾ ಕಾರ್ಯದರ್ಶಿ ವಿ.ಎನ್‌.ಪ್ರಸೂದ್‌ ತಿಳಿಸಿದ್ದಾರೆ.

17, 23 ವರ್ಷದೊಳಗಿನವರ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ಗೆ ಭಾರತ ತಂಡಗಳನ್ನು ಆಯ್ಕೆ ಮಾಡುವ ಸಂಬಂಧ ಈಗಾಗಲೇ ನಿಯಮಗಳನ್ನು ಅಡ್‌ಹಾಕ್‌ ಸಮಿತಿ ಅಂತಿಮಗೊಳಿಸಿದೆ. ಟ್ರಯಲ್ಸ್‌ ಮೇ 17ರಿಂದ ಪಾಟಿಯಾಲಾದಲ್ಲಿ ನಡೆಯಲಿದೆ. ಈ ವಯೋವರ್ಗದ ಏಷ್ಯನ್‌ ಚಾಂಪಿಯನ್‌ಷಿಪ್‌ ಜೂನ್‌ 10 ರಿಂದ 18ರವರೆಗೆ ಬಿಷ್ಕೆಕ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT