ನವದೆಹಲಿ: ಜಗತ್ತಿನಾದ್ಯಂತ ಇ– ಸ್ಪೋರ್ಟ್ಸ್ ಪ್ರಚಾರ ಮಾಡುವ ಉದ್ದೇಶದಿಂದ, ಮೊದಲ ಆವೃತ್ತಿಯ ಒಲಿಂಪಿಕ್ಸ್ ಇ– ಸ್ಪೋರ್ಟ್ಸ್ ಪಂದ್ಯಾವಳಿ ಆಯೋಜನೆ ಮಾಡಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಸೌದಿ ಅರೇಬಿಯಾದ ರಾಷ್ಟ್ರೀಯ ಒಲಿಂಪಿಕ್ ಸಮತಿಯ ಜೊತೆ ಕೈ ಜೋಡಿಸಿದೆ.
ಇ– ಸ್ಪೋರ್ಟ್ಸ್ ಕ್ರೀಡೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುವಂತೆ ಒಲಿಂಪಿಕ್ಸ್ ಎಕ್ಸ್‌ಕ್ಲೂಸಿವ್ ಬೋರ್ಡ್ ನಿರ್ಧಾರ ಮಾಡಿದ ನಂತರ ಇ– ಸ್ಪೋರ್ಟ್ಸ್ ಕಡೆಗೆ ಐಒಸಿ ಒಲವು ತೋರಿಸಿದೆ.
ಯುಎನ್‌ಐವಿ ಸ್ಪೋರ್ಟ್ಸ್‌ಟೆಕ್‌ನ ಸ್ಥಾಪಕ ಹಾಗೂ ಫೆಡರೇಶನ್ ಆಫ್ ಇ– ಸ್ಪೋರ್ಟ್ಸ್ ಆಸೋಸಿಯೇಶನ್ಸ್ ಇಂಡಿಯಾ(ಎಫ್‌ಇಎಐ) ಸದಸ್ಯರಾದ ಅಭಿಷೇಕ್ ಐಸ್ಸಾರ್ ಪ್ರತಿಕ್ರಿಯಿಸಿ, ‘ಇಂದು ಜಗತ್ತಿನ ಎಲ್ಲಾ ದೇಶಗಳು ಇ– ಸ್ಪೋರ್ಟ್ಸ್‌ನಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಅವಕಾಶಕ್ಕಾಗಿ ಕಾಯುತ್ತಿವೆ. ಇದು ಉದ್ಯಮದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ’ ಎಂದು ತಿಳಿಸಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ಉತ್ತಮ ಪ್ರದರ್ಶನ ನೀಡಿದ್ದು, ಈ ಕ್ಷೇತ್ರದಲ್ಲಿನ ಬೆಳವಣಿಗೆಯು ಜಗತ್ತಿನಲ್ಲಿ ನಮ್ಮ ದೇಶದ ಪ್ರಭಾವವನ್ನು ಹೆಚ್ಚು ಮಾಡಲಿದೆ ಎಂದರು.
2021 ಹಾಗೂ 2022ರ ನಡುವೆ ಇ– ಸ್ಪೋರ್ಟ್ಸ್ ಆಟಗಾರರ ಸಂಖ್ಯೆಯು ನಾಲ್ಕು ಪಟ್ಟು ಹೆಚ್ಚಾಗಿದೆ. 2027ರ ವೇಳೆಗೆ 15 ಲಕ್ಷಕ್ಕೆ ತಲುಪಲಿದೆ ಎಂದು ತಿಳಿಸಿದರು.