ಮುಂಬೈ : ಸದಸ್ಯ ರಾಷ್ಟ್ರ ಉಕ್ರೇನ್‌ನ ಮೇಲೆ ಆಕ್ರಮಣ ನಡೆಸಿದ್ದಕ್ಕೆ ರಷ್ಯಾದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು (ಐಒಸಿ) ಗುರುವಾರ ಅಮಾನತುಗೊಳಿಸಿದೆ.
ಹೀಗಾಗಿ, ರಷ್ಯನ್ ಒಲಿಂಪಿಕ್ ಸಮಿತಿ ಕಾರ್ಯನಿರ್ವಹಿಸುವಂತಿಲ್ಲ. ಜೊತೆಗೆ ಅದಕ್ಕೆ ಆರ್ಥಿಕ ನೆರವೂ ಸಿಗುವುದಿಲ್ಲ ಎಂದು ಐಒಸಿ ವಕ್ತಾರ ಮಾರ್ಕ್ ಆ್ಯಡಮ್ಸ್ ತಿಳಿಸಿದರು. ಐಒಸಿ ಕಾರ್ಯಕಾರಿ ಮಂಡಳಿ ಸಭೆಯ ಮೊದಲ ದಿನದ ಕಲಾಪಗಳ ನಂತರ ಅವರು ಮಾತನಾಡಿದರು.
ಆದರೆ ಮುಂದಿನ (ಪ್ಯಾರಿಸ್) ಒಲಿಂಪಿಕ್ಸ್‌ನಲ್ಲಿ ತಟಸ್ಥ ಧ್ವಜದಡಿ ರಷ್ಯಾದ ಅಥ್ಲೀಟುಗಳಿಗೆ ಭಾಗವಹಿಸಲು ಅವಕಾಶ ನೀಡುವುದಕ್ಕೆ ಐಒಸಿಯ ಗುರುವಾರದ ನಿರ್ಧಾರ ಅಡ್ಡಿಯಾಗಲಿದೆಯೇ ಎಂಬ ಬಗ್ಗೆ ಅವರು ಏನನ್ನೂ ಹೇಳಲಿಲ್ಲ.
ರಷ್ಯಾ ಪಾಸ್‌ಪೋರ್ಟ್ ಹೊಂದಿರುವ ಅಥ್ಲೀಟುಗಳಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ ಮತ್ತು ಮಿಲಾನ್‌ನಲ್ಲಿ ನಡೆಯಲಿರುವ 2026ರ ಚಳಿಗಾಲದ ಒಲಿಂಪಿಕ್ಸ್‌ಗೆ ತಟಸ್ಥ ಅಥ್ಲೀಟುಗಳಾಗಿ ಭಾಗವಹಿಸಲು ಅವಕಾಶ ನೀಡುವ ಸಂಬಂಧ ಹಕ್ಕುಗಳನ್ನು ಐಒಸಿ ಕಾದಿರಿಸಿದೆ ಎಂದು ಆ್ಯಡಮ್ಸ್ ಹೇಳಿದರು.
ಐಒಸಿ ನಿರ್ಧಾರಕ್ಕೆ ರಷ್ಯಾ ಒಲಿಂಪಿಕ್ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ‘ಐಒಸಿಯು ಮತ್ತೊಮ್ಮೆ ರಾಜಕೀಯರ ಪ್ರೇರಿತ ನಿರ್ಧಾರವನ್ನು ಕೈಗೊಂಡಿದೆ’ ಎಂದು ಸಮಿತಿ ಹೇಳಿದೆ. ಇನ್ನೊಂದೆಡೆ ಉಕ್ರೇನ್, ಐಒಸಿಯ ನಿಲುವನ್ನು ಸ್ವಾಗತಿಸಿದೆ.
ಕಳೆದ ವರ್ಷದ ಫೆಬ್ರುವರಿಯಲ್ಲಿ ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿತ್ತು. ದಾಳಿಗೆ ಬೆಂಬಲ ಘೋಷಿಸಿರುವ ಬೆಲಾರಸ್ ವಿರುದ್ಧವೂ ಐಒಸಿ ಈ ಹಿಂದೆ ನಿರ್ಬಂಧ ಹೇರಿದೆ.