ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paris Olympics: ರೈಫಲ್ ಫೆಡರೇಷನ್ ನೀತಿಗೆ ಜಸ್ಪಾಲ್ ರಾಣಾ ಅಸಮಾಧಾನ

Published : 18 ಆಗಸ್ಟ್ 2024, 15:20 IST
Last Updated : 18 ಆಗಸ್ಟ್ 2024, 15:20 IST
ಫಾಲೋ ಮಾಡಿ
Comments

ನವದೆಹಲಿ: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಎರಡು ಕಂಚಿನ ಪದಕ ಜಯಿಸಿದ ಶೂಟರ್ ಮನು ಭಾಕರ್ ಅವರ ಕೋಚ್ ಜಸ್ಪಾಲ್ ರಾಣಾ ಅವರು  ಭಾರತ ರಾಷ್ಟ್ರೀಯ ರೈಫಲ್ ಫೆಡರೇಷನ್ ಒಲಿಂಪಿಕ್ಸ್‌ಗಾಗಿ ನಡೆಸುವ  ಆಯ್ಕೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪದೇ ಪದೇ ಬದಲಾವಣೆ’ ಆಗುವ ಪದ್ಧತಿ ಎಂದು ಟೀಕಿಸಿದ್ದಾರೆ.

‘ಆಯ್ಕೆ ಪ್ರಕ್ರಿಯೆಯ (ಫೆಡರೇಷನ್) ನಿಯಮಗಳು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗುತ್ತವೆ. ಈ ಕುರಿತು ಕ್ರೀಡಾ ಸಚಿವರನ್ನೂ ಭೇಟಿಯಾಗಿ ಮಾತನಾಡಿದೆ. ಯಾವುದಾದರೂ ಒಂದು ಪ್ರಕ್ರಿಯೆಯನ್ನು ಸ್ಥಿರವಾಗಿಡಬೇಕು. ಅದು ತಪ್ಪೋ ಸರಿಯೋ ನಾವು ಕೇಳಲು ಹೋಗುವುದಿಲ್ಲ. ಆದರೆ ಪದೇ ಪದೇ ಬದಲಾಯಿಸುತ್ತಿದ್ದರೆ ಶೂಟರ್‌ಗಳ ಸಾಮರ್ಥ್ಯ ಮತ್ತು ಅಭ್ಯಾಸ ಮೇಲೆ ಪರಿಣಾಮ ಬೀರುತ್ತದೆ’ ಎಂದು ಪಿಟಿಐ ಮುಖ್ಯ ಕಚೇರಿಗೆ ಭೇಟಿ ನೀಡಿದ್ದ ರಾಣಾ ಅವರು ಹೇಳಿದರು. 

‘ಫೆಡರೇಷನ್ ಆಯ್ಕೆ ನೀತಿಯಿಂದಾಗಿ ಹಲವು ಪ್ರತಿಭಾವಂತ ಶೂಟರ್‌ಗಳು ಅವಕಾಶವಂಚಿತರಾಗಿದ್ದಾರೆ. ಸೌರಭ್ ಚೌಧರಿ (ಪಿಸ್ತೂಲ್ ಶೂಟರ್) ಮತ್ತು  ಜಿತು ರೈ , (ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ) ಅವರು ಎಲ್ಲಿ ಹೋದರು? ಪ್ಯಾರಿಸ್‌ನಲ್ಲಿ ಈಚೆಗೆ ನಾಲ್ಕನೇ ಸ್ಥಾನ ಪಡೆದ ಅರ್ಜುನ್ ಬಬೂತಾ (10 ಮೀ ರೈಫಲ್ ಶೂಟರ್) ಅವರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಲ್ಪ ಅಂತರದಲ್ಲಿ ಪದಕ ಅವರ ಕೈತಪ್ಪಿತು. ಅವರನ್ನು ಮರಳಿ ಲಯಕ್ಕೆ ತರುವ ಕುರಿತು ಯಾರೂ ಚಿಂತನೆ ನಡೆಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕರ್ಣಿಸಿಂಗ್ ರೇಂಜ್‌ನಲ್ಲಿ ಕೆಲವು ತಿಂಗಳುಗಳ ಹಿಂದೆ ಮನು ಭಾಕರ್ ಅವರ ತಾಲೀಮು ವೀಕ್ಷಿಸಲು ಹೋಗಿದ್ದ ರಾಣಾ ಅವರನ್ನು ಹೊರಹೋಗುವಂತೆ ಹೈಪರ್ಫಾಮೆನ್ಸ್‌ ನಿರ್ದೇಶಕ ಪಿಯರೆ ಬ್ಯೂಚಾಂಪ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಆಗಲೂ ರಾಣಾ ಅವರು ಪಿಯರೆ ಮತ್ತು ಫೆಡರೇಷನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. 

‘ನಾನು ಬದಲಾವಣೆಯ ವಿರೋಧಿಯಲ್ಲ. ಆದರೆ ವಿಶ್ವ ಶೂಟಿಂಗ್ ಮತ್ತು ಒಲಿಂಪಿಕ್ಸ್ ಪದಕವಿಜೇತರನ್ನು ಕಾಪಿಟ್ಟುಕೊಳ್ಳುವ ನಿಯಮ ಅಥವಾ ಪದ್ಧತಿ ನಮ್ಮಲ್ಲಿ ಇಲ್ಲ. ಈ ಪದಕವಿಜೇತರು ಒಂದು ಅಥವಾ ಎರಡು ಒಲಿಂಪಿಕ್ಸ್‌ ನಂತರ ನೇಪಥ್ಯಕ್ಕೆ ಸರಿದುಬಿಡುವ ಪರಿಸ್ಥಿತಿ ಇದೆ. ಮುಂದಿನ ಬಾರಿ ಮನು ರಾಷ್ಟ್ರೀಯ ಶೂಟಿಂಗ್‌ನಲ್ಲಿ ಭಾಗವಹಿಸದೇ ಹೋದರೆ  ಒಲಿಂಪಿಕ್ಸ್ ಅವಕಾಶ ಸಿಗುವುದು ಅನುಮಾನ. ಅವರಿಗೆ ಬೇರೆ ಶೂಟರ್‌ಗಳಿಗೆ ಸಿಗುವಂತಹ ಸೌಲಭ್ಯಗಳೂ ಸಿಗುವುದಿಲ್ಲ. ಈಗಾಗಲೇ ಒಲಿಂಪಿಕ್ಸ್‌ನಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿರುವ  ಶೂಟರ್‌ಗಳಿಗೆ ಎಲ್ಲ ಟ್ರಯಲ್ಸ್‌ಗಳಲ್ಲಿಯೂ ಕಣಕ್ಕಿಳಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಪ್ಯಾರಿಸ್ ಒಲಿಂಪಿಕ್ಸ್ ಕುರಿತು ಮಾತನಾಡಿದ ಅವರು, ‘ಫೆಡರೇಷನ್‌ ನನ್ನ ಮೇಲೆ ಬಹಳಷ್ಟು ನಿರ್ಬಂಧಗಳನ್ನು ಹಾಕುತ್ತ ಬಂದಿದೆ. ಆದರೆ ಅವೆಲ್ಲವೂಗಳಿಂದ ಮತ್ತಷ್ಟು ಬಲಿಷ್ಠರಾಗುತ್ತಲೇ ನಡೆದಿದ್ದೇವೆ. ನಿರ್ಬಂಧಗಳಿಗೆ ನನ್ನನ್ನು ಶೇ 1ರಷ್ಟು ವಿಚಲಿತಗೊಳಿಸಲೂ ಸಾಧ್ಯವಾಗಿಲ್ಲ. ನನ್ನ ಹಾಗೂ ಮನು  ಸಮನ್ವಯಕ್ಕೆ ಯಾವುದೇ ರೀತಿಯ ಭಂಗ ಬಂದಿಲ್ಲ. ಶೂಟಿಂಗ್ ರೇಂಜ್‌ನಿಂದ ನಾನು ಉಳಿದಿದ್ದ ಹೋಟೆಲ್ ದೂರ ಇತ್ತು.  ಅಲ್ಲಿಗೆ ನಾನು ನಡೆದುಕೊಂಡೇ ಹೋಗುತ್ತಿದ್ದೆ. ಮನು ಕೂಡ ನನ್ನೊಂದಿಗೆ ನಡೆದುಕೊಂಡೇ ಬರುತ್ತಿದ್ದರು. ಇದು ಮಾತುಕತೆಗೆ ಅವಕಾಶ ನೀಡುವುದರ ಜೊತೆಗ ಫಿಟ್‌ನೆಸ್‌ಗೂ ಸಹಕಾರಿಯಾಗಿತ್ತು’ ಎಂದರು. 

ರಾಣಾ ಅವರು ಮನುಗೆ ವೈಯಕ್ತಿಕ ಕೋಚ್ ಆಗಿದ್ದರು. ಆದ್ದರಿಂದ ಅವರಿಗೆ ಪ್ಲೇ ಅರೇನಾದಲ್ಲಿ ಪ್ರವೇಶವಿರಲಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದುಕೊಂಡೇ ಮಾರ್ಗದರ್ಶನ ನೀಡಿದ್ದರು. ಅಲ್ಲದೇ ಅವರಿಗೆ ಕ್ರೀಡಾಗ್ರಾಮದಲ್ಲಿ ವಸತಿ ಸೌಲಭ್ಯ ನೀಡಿರಲಿಲ್ಲ. ಅದರಿಂದಾಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT