ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್‌ ಪುರುಷರ ವಿಶ್ವಕಪ್‌ ಹಾಕಿ ಟೂರ್ನಿ: ಭಾರತ– ಸ್ಪೇನ್‌ ಹಣಾಹಣಿ

Published 6 ಡಿಸೆಂಬರ್ 2023, 15:01 IST
Last Updated 6 ಡಿಸೆಂಬರ್ 2023, 15:01 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಎಫ್‌ಐಎಚ್‌ ಜೂನಿಯರ್‌ ಪುರುಷರ ವಿಶ್ವಕಪ್‌ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ‌ಗೆಲುವು ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡವು, ಗುರುವಾರ ಸ್ಪೇನ್‌ ತಂಡವನ್ನು ಎದುರಿಸಲಿದೆ. 

ಮಂಗಳವಾರ ನಡೆದ ಪಂದ್ಯದಲ್ಲಿ ಉಪನಾಯಕ ಅರಿಜಿತ್‌ ಸಿಂಗ್ ಹುಂಡಲ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತವು 4–2ರಿಂದ ಕೊರಿಯಾ ತಂಡವನ್ನು ಮಣಿಸಿತ್ತು. ಎರಡನೇ ಪಂದ್ಯದಲ್ಲೂ ನಾಯಕ ಉತ್ತಮ್‌ ಸಿಂಗ್‌ ಬಳಗ ಆಕ್ರಮಣಕಾರಿ ಆಟ ಪ್ರದರ್ಶಿಸುವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯದಲ್ಲಿ ಭಾರತ ಆಟಗಾರರು ಉತ್ತಮ ಪ್ರದರ್ಶನ ನೀಡಿದರೂ ತಂಡದ ಕೋಚ್‌ ಸಿ.ಆರ್‌.ಕುಮಾರ್‌ ತೃಪ್ತಿ ಹೊಂದಿಲ್ಲ. ಎದುರಾಳಿ ತಂಡಕ್ಕೆ ಅನಗತ್ಯ ಪೆನಾಲ್ಟಿ ಕಾರ್ನರ್‌ಗಳನ್ನು ಬಿಟ್ಟುಕೊಡುವುದನ್ನು ತಪ್ಪಿಸಬೇಕು ಎಂಬುದು ಅವರ ನಿಲುವು.

‘ಕೊರಿಯಾಗೆ ಎರಡು ಗೋಲುಗಳನ್ನೂ ಪೆನಾಲ್ಟಿ ಕಾರ್ನರ್‌ಗಳಲ್ಲಿ ಬಿಟ್ಟುಕೊಟ್ಟಿದ್ದೇವೆ. ಇಂತಹ ತಪ್ಪುಗಳು ಮರುಕಳಿಸದಂತೆ ಮುಂದಿನ ಪಂದ್ಯಗಳಲ್ಲಿ ಗಮನ ಹರಿಸಬೇಕಾಗಿದೆ’ ಎಂದು ಕುಮಾರ್ ಎಚ್ಚರಿಸಿದ್ದಾರೆ.

ಉತ್ತಮ್‌ ಸಿಂಗ್‌ ಮತ್ತು ಅರಿಜಿತ್‌ ಅವರನ್ನು ಹೊರತುಪಡಿಸಿ ತಂಡದಲ್ಲಿ ಹೊಸ ಆಟಗಾರರೇ ಹೆಚ್ಚು ಇದ್ದಾರೆ. ಇವರಿಬ್ಬರೂ ಕಳೆದ ಆವೃತ್ತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ತಂಡ, ಭುವನೇಶ್ವರದಲ್ಲಿ ನಡೆದ ಕೂಟದಲ್ಲಿ ಫ್ರಾನ್ಸ್ ವಿರುದ್ಧ ಸೋತು ನಾಲ್ಕನೇ ಸ್ಥಾನ ಪಡೆದಿತ್ತು.

ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ‘ಸಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಪ್ರಬಲ ಕೆನಡಾ ವಿರುದ್ಧ ಶನಿವಾರ ಸೆಣಸಲಿದೆ.

ಟೂರ್ನಿಯಲ್ಲಿ ನಾಲ್ಕು ತಂಡಗಳಿರುವ 4 ಗುಂಪುಗಳನ್ನು ರಚಿಸಲಾಗಿದ್ದು, ಗುಂಪು ಹಂತದ ಪಂದ್ಯಗಳಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ. ಭಾರತವು ಸ್ಪೇನ್‌ ವಿರುದ್ಧ ಗೆಲುವು ಸಾಧಿಸಿದಲ್ಲಿ ಕ್ವಾರ್ಟರ್‌ ಫೈನಲ್‌ ಹಾದಿ ಸುಗಮವಾಗಲಿದೆ.

ಭಾರತ ಈ ಟೂರ್ನಿಯಲ್ಲಿ ಎರಡು ಬಾರಿ (2001, 2016) ಚಾಂಪಿಯನ್ ಆಗಿದ್ದು, ಒಮ್ಮೆ (1997) ರನ್ನರ್ಸ್‌ ಅಪ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT