ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್‌ ನವೀಕರಣಕ್ಕೆ ಮಳೆ, ಕೋವಿಡ್ ಅಡ್ಡಿ?

ದೆಹಲಿಯ ಅಡ್ವಾನ್ಸ್‌ಡ್ ಸ್ಪೋರ್ಟ್ಸ್ ಟೆಕ್ನಾಲಜೀಸ್ ಸಂಸ್ಥೆಗೆ ಗುತ್ತಿಗೆ; 130 ದಿನಗಳ ಅವಧಿ
Last Updated 9 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾಪಟುಗಳ ಮತ್ತು ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದ್ದು ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ನವೀಕರಣಕ್ಕೆ ಸೋಮವಾರ ಚಾಲನೆ ಸಿಕ್ಕಿದೆ. ಆದರೆ ಮಳೆಗಾಲ ಆರಂಭವಾಗುವ ಮೊದಲು ಕಾಮಗಾರಿ ಪೂರ್ಣಗೊಳಿಸುವ ಒತ್ತಡ ಗುತ್ತಿಗೆದಾರರ ಮೇಲಿದೆ. ಇದೇ ವೇಳೆ ಕೋವಿಡ್‌–19 ಆತಂಕದಿಂದ ವಿದೇಶದಿಂದ ಸಮಯಕ್ಕೆ ಸರಿಯಾಗಿ ಕಚ್ಚಾ ವಸ್ತುಗಳು ಬಾರದೆ ಕಾಮಗಾರಿಗೆ ಅಡ್ಡಿಯಾಗುವ ಸಾಧ್ಯತೆ ಆತಂಕ ಮೂಡಿಸಿದೆ.

ಹತ್ತು ವರ್ಷಗಳ ಹಿಂದೆ ಅಳವಡಿಸಲಾದ ಸಿಂಥೆಟಿಕ್ ಹಾಸು ಎರಡು ವರ್ಷಗಳ ಹಿಂದೆ ಹಾಳಾಗಿತ್ತು. ಕಿತ್ತು ಹೋಗಿರುವ ಟ್ರ್ಯಾಕ್‌ನಲ್ಲೇ ಕ್ರೀಡಾಪಟುಗಳ ಅಭ್ಯಾಸ ನಡೆದಿತ್ತು. ಇದರಿಂದ ಗಾಯಗಳೂ ಆಗುತ್ತಿದ್ದವು. ಟ್ರ್ಯಾಕ್ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತ ಅಥ್ಲೆಟಿಕ್ಸ್ ಫೆಡರೇಷನ್, ರಾಷ್ಟ್ರೀಯ ಕೂಟದ ಆತಿಥ್ಯದ ಅವಕಾಶವನ್ನು ಹಿಂಪಡೆದುಕೊಂಡಿತ್ತು.

ಇದೆಲ್ಲದರ ನಡುವೆ ಟ್ರ್ಯಾಕ್ ನವೀಕರಣ ಕಾಮಗಾರಿಗೆ ಸರ್ಕಾರ ಹಸಿರು ನಿಶಾನೆ ನೀಡಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಜನವರಿ 16ರಂದೇ ಕಾಮಗಾರಿ ಆದೇಶ ಹೊರಡಿಸಲಾಗಿತ್ತು. ಹೀಗಿದ್ದೂ ಮೀನ–ಮೇಷ ಎಣಿಸಿ ಎರಡು ತಿಂಗಳು ವಿಳಂಬವಾಗಿ ಚಾಲನೆ ನೀಡಲಾಗಿದೆ.

ಕರ್ನಾಟಕ ಕ್ರೀಡಾ ಪ್ರಾಧಿಕಾರದ (ಸ್ಯಾಕ್) ಉಪಾಧ್ಯಕ್ಷಕೆ.ಪಿ.ಪುರುಷೋತ್ತಮ್ ನವೀಕರಣ ಕಾಮಗಾರಿಗೆ ಸೋಮವಾರ ಸಂಜೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ಮಂಗಳವಾರವೇ ಕಾಮಗಾರಿ ಆರಂಭವಾಗಲಿದೆ. 130 ದಿನಗಳ ಅವಧಿಯಲ್ಲಿ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಕಾಮಗಾರಿಗೆ ಕಚ್ಚಾವಸ್ತುಗಳುಮಲೇಷ್ಯಾದಿಂದ ಬರಬೇಕಾಗಿದ್ದು ಇನ್ನೂ ಇಲ್ಲಿಗೆ ತಲುಪಿಲ್ಲ. ಕೋವಿಡ್ –19 ಸೋಂಕಿನ ಆತಂಕದಿಂದ ವಸ್ತುಗಳು ಸಕಾಲಕ್ಕೆ ತಲುಪಲು ಅಡ್ಡಿಯಾಗುವ ಆತಂಕವಿದೆ’ ಎಂದು ಹೇಳಿದರು.

ತಜ್ಞರ ಪ್ರಕಾರ, ಹಾಳಾಗಿರುವ ಈಗಿನ ಸಿಂಥೆಟಿಕ್ ಹಾಸು ತೆಗೆಯಲು 20 ದಿನಗಳು ಬೇಕು. ನಂತರ ಹೊಸ ಹಾಸು ಅಳವಡಿಸಬೇಕು. ಈ ಹಂತದಲ್ಲಿ ಮಳೆ ಬಂದರೆ ಒಳಗೆ ಹಾಕುವ ಗಮ್ ಪರಿಣಾಮ ಬೀರದೆ ಸಿಂಥೆಟಿಕ್ ಹಾಸು ಎದ್ದು ಹೋಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಜೂನ್‌ಗಿಂತ ಮೊದಲೇ ಮಳೆ ಆರಂಭವಾಗುವುದು ವಾಡಿಕೆ.

‘ಮಳೆ ಆರಂಭವಾಗುವ ಮೊದಲು ಕಾಮಗಾರಿ ಮುಗಿಸಬೇಕು ಎಂದು ಸೂಚಿಸಲಾಗಿದೆ. ಎಲ್ಲವೂ ಗುತ್ತಿಗೆದಾರರ ಮೇಲೆ ಅವಲಂಬಿತವಾಗಿದೆ’ ಎಂದು ಪುರುಷೋತ್ತಮ್ ಹೇಳಿದರು.

ಅಭ್ಯಾಸ ಎಲ್ಲಿ?: ಕಂಠೀರವದ 400 ಮೀಟರ್ಸ್ ಟ್ರ್ಯಾಕ್ ನವೀಕರಣ ಕಾಮಗಾರಿ ಮುಗಿಯುವ ವರೆಗೆ ಅಥ್ಲೀಟ್‌ಗಳು ಸಮೀ‍ಪದ 200 ಮೀಟರ್ಸ್ ಟ್ರ್ಯಾಕ್‌ನಲ್ಲಿ ಅಭ್ಯಾಸ ನಡೆಸಬೇಕಾಗುತ್ತದೆ.

‘130 ದಿನ ಕ್ರೀಡಾಪಟುವಿನ ಜೀವನದಲ್ಲಿ ದೊಡ್ಡ ಅವಧಿಯೇನಲ್ಲ. ಆದರೂ ಅಭ್ಯಾಸಕ್ಕೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಕ್ರೀಡಾಂಗಣದ ಆವರಣದಲ್ಲೇ ಇರುವ 200 ಮೀಟರ್ಸ್ ಟ್ರ್ಯಾಕ್ ಅಥವಾ ಸಾಯ್ ಇಲ್ಲವೇ ಬೇರೆ ಯಾವುದಾದರೂ ಸಂಸ್ಥೆಯ ಟ್ರ್ಯಾಕ್ ಬಳಸಬಹುದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT