ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಪ್ಟಮ್‌ಗೆ ಕಂಬನಿಯ ವಿದಾಯ: ಮ್ಯಾರಾಥಾನ್ ವಿಶ್ವದಾಖಲೆ ವೀರನ ದರ್ಶನ ಪಡೆದ ಜನಸಾಗರ

Published 23 ಫೆಬ್ರುವರಿ 2024, 16:27 IST
Last Updated 23 ಫೆಬ್ರುವರಿ 2024, 16:27 IST
ಅಕ್ಷರ ಗಾತ್ರ

ಚೆಪ್ಕೊರಿಯೊ, ಕೆನ್ಯಾ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ ಮ್ಯಾರಥಾನ್ ವಿಶ್ವದಾಖಲೆ ವೀರ, ಕೆಲ್ವಿನ್ ಕಿಪ್ಟಮ್ ಅವರಿಗೆ ಶುಕ್ರವಾರ ಕಂಬನಿಯ ವಿದಾಯ ಹೇಳಲಾಯಿತು.

ಚೆಪ್ಕೊರಿಯೊದ ರಿಫ್ಟ್ ವ್ಯಾಲಿ ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಅಧ್ಯಕ್ಷ ವಿಲಿಯಮ್ ರೂಟೊ, ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಸೆಬಾಸ್ಟಿಯನ್ ಕೋ, ಅಥ್ಲಿಟ್‌ಗಳು, ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಕುಟುಂಬದ ಸದಸ್ಯರ ಆಕ್ರಂದನ ಮನಕಲಕುವಂತಿತ್ತು. 

ಇಬ್ಬರು ಮಕ್ಕಳ ತಂದೆ, 24 ವರ್ಷದ ಕಿಪ್ಟಮ್‌ ಅವರು ಫೆ.11 ರ ತಡರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಚಿಕಾಗೋದಲ್ಲಿ ನಡೆದ ಮ್ಯಾರಾಥನ್‌ ದಾಖಲೆಯನ್ನು ಕೆಲವೇ ತಿಂಗಳ ಹಿಂದಷ್ಟೇ ಮುರಿದಿದ್ದರು.  

ಕಿಪ್ಟಮ್ ಅವರ ಪತ್ನಿ ಅಸೆನಾಥ್ ರೋಟಿಚ್ ಅವರು ಮ್ಯಾರಥಾನ್ ಪ್ರತಿಭೆಗೆ ಶ್ರದ್ಧಾಂಜಲಿಯನ್ನು  ಓದುವಾಗ ಭಾವುಕರಾದರು.

‘ನೀವು ಮತ್ತೆ ಮನೆಗೆ ಬರದೆ ಇಂದು ನಾನು ನಮ್ಮ ಪ್ರೀತಿಯ ಮಕ್ಕಳೊಂದಿಗೆ ಇರಲು ಕಲಿತಿದ್ದೇನೆ ಎಂದು ನಂಬಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ಏಪ್ರಿಲ್‌ನಲ್ಲಿ ವಿವಾಹ ವಾರ್ಷಿಕೋತ್ಸವ ನಡೆಸಲು ಯೋಜಿಸಿದ್ದರು ಎಂಬುದನ್ನು ರೋಟಿಚ್‌ ಬಹಿರಂಗಪಡಿಸಿದರು.

‘ಕಿಪ್ಟನ್ ಸಾವು ನೋವು ಉಂಟು ಮಾಡಿದೆ. ಯುವ ಕ್ರೀಡಾಪಟು ಕಡಿಮೆ ಅವಧಿಯಲ್ಲಿ ಸಾಧನೆಯ ಅತ್ಯುನ್ನತ ಶಿಖರಗಳನ್ನು ಏರಿದ್ದರು. ಕ್ರೀಡಾ ತಾರೆಯ ಸಾಧನೆಗಳು ಇತಿಹಾಸದಲ್ಲಿ ಅಮೂಲ್ಯ, ಅಳಿಸಲಾಗದ ಮತ್ತು ಎಂದಿಗೂ ಮರೆಯಲಾಗುವುದಿಲ್ಲ’ ಎಂದು ವಿಶ್ವ ಅಥ್ಲೆಟಿಕ್ಸ್ ಮುಖ್ಯಸ್ಥ ಸೆಬಾಸ್ಟಿಯನ್ ಕೋ ಹೇಳಿದರು. 

ಕೆಲವರು ಕಿಪ್ಟಮ್ ಅವರ ಚಿತ್ರವಿರುವ ಕಪ್ಪು ಟೀ ಶರ್ಟ್‌ಗಳನ್ನು ಧರಿಸಿದ್ದರು. ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು. ಗುರುವಾರ ರಾಷ್ಟ್ರ ರಾಜಧಾನಿ ನೈರೋಬಿಯಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  

ಎಲ್ಡೊರೆಟ್ ಬಳಿಯ ನೈಬೇರಿಯಲ್ಲಿ ಕಿಪ್ಟನ್ ಸಮಾಧಿ ಮಾಡಲಾಗುವುದು. ಅಲ್ಲಿ ಸರ್ಕಾರವು ಕಿಪ್ಟನ್  ಕುಟುಂಬಕ್ಕೆ ಹೊಸ ಮನೆಯನ್ನು ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT