ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಸೇನ್‌, ಪ್ರಿಯಾಂಶು ನಿರ್ಗಮನ

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನಿಂಗ್ಬೋ (ಚೀನಾ): ಭಾರತದ ಲಕ್ಷ್ಯ ಸೇನ್‌ ಅವರು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ನಿರ್ಗಮಿಸಿದರು. ಅಗ್ರ ಶ್ರೇಯಾಂಕದ ಶಿ ಯು ಕಿ ಅವರಿಗೆ ನೇರ ಗೇಮ್‌ಗಳಿಂದ ಮಣಿದರು.

ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಸೇನ್ ಬುಧವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ 19-21, 15-21ರಿಂದ ಸ್ಥಳೀಯ ನೆಚ್ಚಿನ ಆಟಗಾರನ ವಿರುದ್ಧ ಮುಗ್ಗರಿಸಿದರು.

ಸೇನ್‌ ಮೊದಲ ಗೇಮ್‌ನ ಆರಂಭದಲ್ಲಿ ಅದ್ಭುತವಾಗಿ ಕೋರ್ಟ್ ಕವರೇಜ್ ಪ್ರದರ್ಶಿಸಿದರು. ಆಕರ್ಷಕ ಸ್ಮ್ಯಾಷ್‌ಗಳು ಮತ್ತು ನಿಖರ ಡ್ರಾಪ್ ಶಾಟ್‌ಗಳ ಮೂಲಕ 11-7ರಿಂದ ಮುನ್ನಡೆ ಸಾಧಿಸಿದ್ದರು. ಈ ಹಂತದಲ್ಲಿ ಲಯ ಕಂಡುಕೊಂಡ ಎದುರಾಳಿ ಆಟಗಾರ ಪುಟಿದೆದ್ದು, ದೀರ್ಘ ರ‍್ಯಾಲಿ ಮೂಲಕ ಸೇನ್‌ ಅವರನ್ನು ಸುಸ್ತಾಗಿಸಿದರು. ಸಮಬಲದಿಂದ ಸಾಗಿದ ಮೊದಲ ಗೇಮ್‌ನಲ್ಲಿ ಚೀನಾದ ಆಟಗಾರ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನ ಅರ್ಧ ದಾರಿಯವರೆಗೆ ಉಭಯ ಆಟಗಾರರು ಸಮಬಲದ ಹೋರಾಟ ತೋರಿದರು. ನಂತರದಲ್ಲಿ ಶಿ ಹಿಡಿತ ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು. ಈ ಆಟಗಾರರ ಮಧ್ಯೆ 53 ನಿಮಿಷಗಳ ಹೋರಾಟ ನಡೆಯಿತು.

ಭಾರತದ ಮತ್ತೊಬ್ಬ ಆಟಗಾರ ಪ್ರಿಯಾಂಶು ರಾಜಾವತ್‌ ಅವರೂ ನಿರಾಸೆ ಅನುಭವಿಸಿದರು. ಅವರು ಮೊದಲ ಸುತ್ತಿನ ಪಂದ್ಯದಲ್ಲಿ 9-21, 13-21 ರಿಂದ ಎಂಟನೇ ಶ್ರೇಯಾಂಕದ ಲೀ ಝಿ ಜಿಯಾ (ಮಲೇಷ್ಯಾ) ಅವರಿಗೆ ಶರಣಾದರು.

ಮಹಿಳೆಯರ ಡಬಲ್ಸ್‌ನಲ್ಲಿ ಪಾಂಡ ಸಹೋದರಿಯರಾದ ರುತುಪರ್ಣ ಮತ್ತು ಶ್ವೇತಪರ್ಣ ಅವರು ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಅವರು 8-21, 13-21 ಏಳನೇ ಶ್ರೇಯಾಂಕದ ಜಾಂಗ್ ಶು ಕ್ಸಿಯಾನ್ ಮತ್ತು ಝೆಂಗ್ ಯು ಡಬ್ಲ್ಯು (ಚೀನಾ) ಅವರಿಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT