ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಹೀಟ್ಸ್‌ನಲ್ಲಿ ಹೊರಬಿದ್ದ ಅಲ್ಡ್ರಿನ್‌, ಪಾರುಲ್

ಲಾಂಗ್‌ಜಂಪ್‌, ಸ್ಟೀಪಲ್‌ಚೇಸ್‌ನಲ್ಲಿ ನಿರಾಸೆ
Published 4 ಆಗಸ್ಟ್ 2024, 14:10 IST
Last Updated 4 ಆಗಸ್ಟ್ 2024, 14:10 IST
ಅಕ್ಷರ ಗಾತ್ರ

ಪ್ಯಾರಿಸ್‌: ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಭಾರತದ ಕಳಾಹೀನ ಪ್ರದರ್ಶನ ಮುಂದುವರಿಯಿತು. ಮಹಿಳೆಯರ 3000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌ ಚೌಧರಿ ಮತ್ತು ಲಾಂಗ್‌ಜಂಪ್‌ನಲ್ಲಿ ಜೆಸ್ವಿನ್‌ ಆಲ್ಡ್ರಿನ್‌ ಅವರು ಭಾನುವಾರ ಹೀಟ್ಸ್‌ ಹಂತದಿಂದ ಮೇಲೇರಲಿಲ್ಲ.

ಪಾರುಲ್ ತಮ್ಮ ಹೀಟ್‌ ರೇಸ್‌ನಲ್ಲಿ ಎಂಟನೇ ಸ್ಥಾನದಲ್ಲಿ ಮುಗಿಸಿದರು ಹಾಗೂ ಒಟ್ಟಾರೆ 21ನೇ ಸ್ಥಾನದ ಕಾಲಾವಧಿ ದಾಖಲಿಸಿದರು. 29 ವರ್ಷದ ಪಾರುಲ್‌, ಕ್ರೀಡೆಗಳಿಗೆ ಸಜ್ಜುಗೊಳ್ಳಲು ಕೆಲವು ತಿಂಗಳಿಂದ ಅಮೆರಿಕದ ಎತ್ತರದ ಪ್ರದೇಶದಲ್ಲಿ ತರಬೇತಿ ಪಡೆದಿದ್ದರು. ಅವರು 3000 ಮೀ.ಸ್ಟೀಪಲ್‌ಚೇಸ್‌ ಸ್ಪರ್ಧೆಯನ್ನು 9ನಿ.23.39 ಸೆ.ಗಳಲ್ಲಿ ಕ್ರಮಿಸಿದರು. ಇದು ಅವರ ಈ ವರ್ಷದ ಉತ್ತಮ ಓಟ ಎನಿಸಿತು. ಆದರೆ ಅವರ ವೈಯಕ್ತಿಕ ಶ್ರೇಷ್ಠ ಸಮಯ 9ನಿ.15.31 ಸೆ. ಮೀರಲಾಗಲಿಲ್ಲ. ಈ ಸಾಧನೆ 2023ರ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂಡಿಬಂದಿತ್ತು.

ಮೂರು ಹೀಟ್‌ ರೇಸ್‌ಗಳಲ್ಲಿ ಮೊದಲ ಐದು ಸ್ಥಾನ ಪಡೆದವರು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ಹಾಲಿ (ಟೋಕಿಯೊ ಕ್ರೀಡೆಗಳ) ಚಾಂಪಿಯನ್ ಪೆರುತ್‌ ಚೆಮುತೈ ಅವರು ಹೀಟ್ಸ್ ರೇಸ್‌ ಒಂದರಲ್ಲಿ 9ನಿ.10.51 ಸೆ. ತೆಗೆದುಕೊಂಡು ಗೆದ್ದರೆ, ಹೀಟ್‌ ರೇಸ್‌ ಎರಡರಲ್ಲಿ ಕೆನ್ಯಾದ ಫೇತ್‌ ಚೆರೊಟಿಚ್‌ 9:10.57 ಅವಧಿಯೊಡನೆ ಮತ್ತು ಮೂರನೇ ಹೀಟ್‌ ರೇಸ್‌ನಲ್ಲಿ ಜರ್ಮನಿಯ ಗೆಸಾ ಫೆಲಿಸಿಟಾಸ್‌ ಕ್ರಾಸೆ 9:10.68 ಅವಧಿಯೊನೆ ಅಗ್ರಸ್ಥಾನ ಪಡೆದರು.

5000 ಮೀ. ಓಟದಲ್ಲೂ ಪಾರುಲ್ ಹೀಟ್ಸ್‌ನಲ್ಲಿ ಹೊರಬಿದ್ದಿದ್ದರು. ಅಂಕಿತಾ ಧ್ಯಾನಿ ಕೂಡ ವಿಫಲರಾಗಿದ್ದರು.

ಸ್ಟೀಪಲ್‌ಚೇಸ್‌ನಲ್ಲಿ ಒಲಿಂಪಿಕ್ಸ್‌ ಪ್ರವೇಶಕ್ಕೆ ಬೇಕಾದ ಅರ್ಹತಾ ಮಾನದಂಡ (9:23.00) ಸಾಧಿಸಿ ಪಾರುಲ್ ನೇರವಾಗಿ ಅರ್ಹತೆ ಪಡೆದಿದ್ದರು.

ಈ ಹಿಂದೆ ಲಲಿತಾ ಬಾಬರ್ ಮಾತ್ರ ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಫೈನಲ್ ತಲುಪಿದ್ದರು. 2016ರ ರಿಯೊ ಕ್ರೀಡೆಗಳಲ್ಲಿ ಆ ಸಾಧನೆ ಮಾಡಿದ್ದರು.

ಅಲ್ಡ್ರಿನ್‌ ವಿಫಲ:

ಪುರುಷರ ಲಾಂಗ್‌ಜಂಪ್‌ನಲ್ಲಿ ಮೊದಲೆರಡು ಯತ್ನಗಳಲ್ಲಿ ಫೌಲ್‌ ಮಾಡಿದ ಜೆಸ್ವಿನ್ ಆಲ್ಡ್ರಿನ್‌, ಮೂರನೇ ಯತ್ನದಲ್ಲಿ 7.61 ಮೀ. ದೂರ ಜಿಗಿದರು. ಗ್ರೂಪ್‌ ಬಿ ಕಾಲ್ವಿಫಿಕೇಷನ್‌ನಲ್ಲಿ ಅವರು 16 ಸ್ಪರ್ಧಿಗಳ ಪೈಕಿ 13ನೇ ಸ್ಥಾನ ಪಡೆದರು. ಒಟ್ಟಾರೆ 26ನೇ ಸ್ಥಾನಕ್ಕೆ ಸರಿದರು.

8.15 ಮೀ. ಕ್ವಾಲಿಫಿಕೇಷನ್‌ ಮಾನದಂಡ ಸಾಧಿಸಿದ ಅಥವಾ 12 ಶ್ರೇಷ್ಠ ಜಿಗಿತ ದಾಖಲಿಸಿದ ಅಥ್ಲೀಟುಗಳು ಅಂತಿಮ ಸುತ್ತಿಗೆ ಮುನ್ನಡೆದರು.

22 ವರ್ಷದ ಆಲ್ಡ್ರಿನ್‌, ಈ ವರ್ಷ ಒಮ್ಮೆಯೂ 8 ಮೀ. ದೂರ ಜಿಗಿದಿಲ್ಲ. ವಿಶ್ವ ರ್‍ಯಾಂಕಿಂಗ್ ಆಧಾರದಲ್ಲಿ ಅವರು ಕೊನೆಯ ಗಳಿಗೆಯಲ್ಲಿ ಪ್ಯಾರಿಸ್‌ ಟಿಕೆಟ್ ಪಡೆದಿದ್ದರು. ಭಾರತದ ಈ ಸ್ಪರ್ಧಿಯ ಈ ವರ್ಷದ ಶ್ರೇಷ್ಠ ಸಾಧನೆ 7.99 ಮೀ. ಮತ್ತು ವೈಯಕ್ತಿಕ ಶ್ರೇಷ್ಠ ಸಾಧನೆ 8.42 ಮೀ. ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT