ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಟಿಟಿ: ಸೆಮಿಫೈನಲ್‌ನಲ್ಲಿ ಮಣಿಕಾ ಬಾತ್ರಾಗೆ ಸೋಲು, ಐತಿಹಾಸಿಕ ಕಂಚಿನ ಪದಕ

Last Updated 19 ನವೆಂಬರ್ 2022, 12:48 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಒಲಿಂಪಿಯನ್‌ ಮಣಿಕಾ ಬಾತ್ರಾ ಅವರು ಐಟಿಟಿಎಫ್‌–ಎಟಿಟಿಯು ಏಷ್ಯಾಕಪ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಸಾಧನೆಗೆ ಭಾಜನರಾದರು.

ಇಲ್ಲಿ ನಡೆಯತ್ತಿರುವ ಟೂರ್ನಿಯಲ್ಲಿ ಶನಿವಾರ ಅವರು ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಈ ಶ್ರೇಯ ಪಡೆದರು.

ಶರತ್‌ ಕಮಲ್‌ ಮತ್ತು ಜಿ.ಸತ್ಯನ್ ಅವರು ಕ್ರಮವಾಗಿ 2015 ಮತ್ತು 2019ರಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಆರನೇ ಸ್ಥಾನ ಗಳಿಸಿದ್ದೇ ಭಾರತದ ಆಟಗಾರರ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಮಣಿಕಾ,ಪದಕದ ಸುತ್ತಿನಲ್ಲಿ11-6, 6-11, 11-7, 12-10, 4-11, 11-2ರಿಂದ ಜಪಾನ್ ಆಟಗಾರ್ತಿ, ಆರನೇ ರ‍್ಯಾಂಕಿನ ಹೀನಾ ಹಯಾತಾ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ₹ 8.15 ಲಕ್ಷ ಬಹುಮಾನವನ್ನು ತಮ್ಮದಾಗಿಸಿಕೊಂಡರು.

‘ಅಗ್ರ ಕ್ರಮಾಂಕದ ಆಟಗಾರ್ತಿಯರನ್ನು ಮಣಿಸಿ ಪದಕ ಜಯಿಸಿದ್ದು ದೊಡ್ಡ ಸಾಧನೆ. ಅವರ ವಿರುದ್ಧ ಆಟ ಮತ್ತು ಹೋರಾಟವನ್ನು ಆನಂದಿಸಿದೆ. ಮುಂಬರುವ ಎಲ್ಲ ಟೂರ್ನಿಗಳಲ್ಲೂ ಇದೇ ರೀತಿಯ ಪ್ರಯತ್ನ ನಡೆಸುವೆ‘ ಎಂದು ಮಣಿಕಾ ಪಂದ್ಯದ ಬಳಿಕ ಭಾವುಕರಾಗಿ ನುಡಿದರು.

ದಿನದ ಆರಂಭದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಮಣಿಕಾ8-11, 11-7, 7-11, 6-11, 11-8, 7-11ರಿಂದ ಎರಡನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಮಿಮಾ ಇಟೊ ವಿರುದ್ಧ ಸೋತಿದ್ದರು.

ಕಂಚಿನ ಪದಕದ ಸುತ್ತಿನ ಹಣಾಹಣಿಯಲ್ಲಿ ತಮ್ಮ ಅನುಭವವನ್ನು ಪಣಕ್ಕಿಟ್ಟು ಆಡಿದ ಮಣಿಕಾ, ಫೋರ್‌ಹ್ಯಾಂಡ್‌ ಹೊಡೆತಗಳಲ್ಲಿ ಪಾರಮ್ಯ ಮೆರೆದರು. ಜಪಾನ್ ಆಟಗಾರ್ತಿಯ ಕೆಲವು ಸ್ವಯಂಕೃತ ತಪ್ಪುಗಳು ಮಣಿಕಾ ಗೆಲುವಿಗೆ ಕೊಡುಗೆ ನೀಡಿದವು.

ಕಂಚು ಗೆಲ್ಲುವ ಹಾದಿಯಲ್ಲಿ ಮಣಿಕಾ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ, ಚೀನಾದ ಚೆನ್ ಷಿಂಗ್‌ಟಾಂಗ್‌, 23ನೇ ರ‍್ಯಾಂಕಿನ ಚೆನ್‌ ಜು ಯು (ಚೀನಾ ತೈಪೆ) ಅವರನ್ನು ಪರಾಭವಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT