ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಾ ಶೂಟಿಂಗ್ ವಿಶ್ವಕಪ್: ಭಾರತದ ಮೋನಾ–ಆದಿತ್ಯ ಜೋಡಿಗೆ ಬೆಳ್ಳಿ

ಪ್ಯಾರಾ ಶೂಟಿಂಗ್ ವಿಶ್ವಕಪ್ ಮಿಶ್ರ ತಂಡ ವಿಭಾಗ
Published 10 ಮಾರ್ಚ್ 2024, 15:57 IST
Last Updated 10 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮೋನಾ ಅಗರವಾಲ್‌ ಮತ್ತು ಆದಿತ್ಯ ಗಿರಿ ಜೋಡಿಯು ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್‌ (ಡಬ್ಲ್ಯುಎಸ್‌ಪಿಎಸ್)  ವಿಶ್ವಕಪ್ ಸ್ಪರ್ಧೆಯಲ್ಲಿ ಭಾನುವಾರ ಮಿಶ್ರ ತಂಡ ಏರ್‌ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್‌1 ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು.

ಆತಿಥೇಯರು ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮನೀಶ್ ನರ್ವಾಲ್ ಮತ್ತು ಅವರ ಜೊತೆಗಾರ ರುಬಿನಾ ಫ್ರಾನ್ಸಿಸ್ ಅವರು ಮಿಶ್ರ ತಂಡ 10 ಮೀಟರ್‌ ಏರ್‌ ಪಿಸ್ತೂಲ್ (ಎಸ್‌ಎಚ್‌1) ಚಿನ್ನದ ಪದಕ ಪಂದ್ಯದಲ್ಲಿ ಚೀನಾದ ಲಿ ಮಿನ್ ಮತ್ತು ಯಾಂಗ್ ಚಾವೊ ವಿರುದ್ಧ 12–1 ಅಂತರದಲ್ಲಿ ಸೋತರು. 

ಇದೇ ಸ್ಪರ್ಧೆಯಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತು. ಭಕ್ತಿ ಶರ್ಮಾ ಮತ್ತು ರುದ್ರಾಂಶ್ ಖಂಡೇಲ್ವಾಲ್ ಅವರು ಕ್ಯೂಬಾ ಜೋಡಿ ಯೆನಿಗ್ಲಾಡಿಸ್ ಸೌರೆಜ್ ಮತ್ತು ಲೋರಿಗಾ ರೋಡ್ರಿಗಸ್ ಅವರನ್ನು 16-8 ರಿಂದ ಸೋಲಿಸಿದರು.

ಶನಿವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ (ಎಸ್ಎಚ್ 1ಕೆಟಗೆರಿ) ಸ್ಪರ್ಧೆಯಲ್ಲಿ ಚಿನ್ನ ಗೆದ್ದು, ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಅರ್ಹತೆ ಪಡೆದಿದ್ದ 37 ವರ್ಷದ ಮೋನಾ, ಗಿರಿ ಅವರೊಂದಿಗೆ ಜೋಡಿಯಾಗಿದ್ದರು. ಆದರೆ ಫೈನಲ್‌ನಲ್ಲಿ ಚೀನಾದ ಜೋಡಿ ಝಾಂಗ್ ಯಿಕ್ಸಿನ್ ಮತ್ತು ಡಾಂಗ್ ಚಾವೊ ವಿರುದ್ಧ 16-4 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಮತ್ತೊಂದು ಜೋಡಿ, ಟೋಕಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅವನಿ ಲೇಖಾರಾ ಮತ್ತು ಮಹಾವೀರ್ ಸ್ವರೂಪ್ ಅವರು ಉಕ್ರೇನ್ ಜೋಡಿ ಇರಿನಾ ಶೆಟ್ನಿಕ್ ಮತ್ತು ಆಂಡ್ರಿ ಡೊರೊಶೆಂಕೊ ವಿರುದ್ಧ ಅದೇ ಅಂತರದಿಂದ ಸೋತರು.

ಅರ್ಹತಾ ಸುತ್ತಿನಲ್ಲಿ ಮೋನಾ 315.4 ಅಂಕ ಗಳಿಸಿದರೆ, ಗಿರಿ 307.5 ಅಂಕ ಗಳಿಸಿದರು. ಭಾರತದ ಇತರ ಜೋಡಿ ಅವನಿ (310.9) ಮತ್ತು ಸ್ವರೂಪ್ (308.6) ಒಟ್ಟು 619.5 ಅಂಕಗಳನ್ನು ಗಳಿಸಿ ಅರ್ಹತಾ ಸುತ್ತಿನಲ್ಲಿ ಉಕ್ರೇನ್ ನಂತರ ನಾಲ್ಕನೇ ಸ್ಥಾನ ಪಡೆದರು.

ಮಿಶ್ರ ತಂಡ ಸ್ಪರ್ಧೆಗಳಲ್ಲಿ ಕೇವಲ ನಾಲ್ಕು ತಂಡಗಳು ಮಾತ್ರ ಪದಕ ಸುತ್ತಿಗೆ ಹೋಗುತ್ತವೆ. ಅಗ್ರ ಎರಡು ತಂಡಗಳು ಚಿನ್ನದ ಪದಕಕ್ಕೆ ಮತ್ತು ಕೊನೆಯ ಎರಡು ತಂಡಗಳು ಕಂಚಿನ ಪದಕಕ್ಕಾಗಿ ಸ್ಪರ್ಧಿಸುತ್ತವೆ.

ಮಿಶ್ರ ತಂಡ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ (ಎಸ್ಎಚ್ 2 ಕೆಟಗರಿ) ಸ್ಪರ್ಧೆಯಲ್ಲಿ ಭಾರತದ ಪವಾನಿ ಬಾನೋತ್ ಮತ್ತು ಸತ್ಯ ಜನಾರ್ದನ ರಾಯನಾ ಅವರು ನ್ಯೂಜಿಲೆಂಡ್‌ನ ನಟಾಲಿ ಬ್ರುನ್ಜೆಲ್ ಮತ್ತು ಕಿರಣ್ಜಿತ್ ಸಿಂಗ್ ಅವರನ್ನು 17-15 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದರು.

ಬ್ರೆಜಿಲ್‌ನ ಜೆಸ್ಸಿಕಾ ಡೈನೆ ಮೈಚಲಾಕ್ ಮತ್ತು ಬ್ರೂನೋ ಸ್ಟೋವ್ ಕೀಫರ್ ಅವರು ಅಮೆರಿಕದ ಮ್ಯಾಡಿಸನ್ ಚಾಂಪಿಯನ್ ಮತ್ತು ಬೆನ್ ಹೇಸ್ ತಂಡವನ್ನು 16-6ರಿಂದ ಸೋಲಿಸಿ ಚಿನ್ನ ಗೆದ್ದರು.

ಮಿಶ್ರ ತಂಡ 10 ಮೀಟರ್ ಏರ್ ಪಿಸ್ತೂಲ್ (ಎಸ್ಎಚ್ 1ಕೆಟಗರಿ) ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಮತ್ತು ರುಬಿನಾ ಫ್ರಾನ್ಸಿಸ್ ಜೋಡಿ 570 ಅಂಕಗಳೊಂದಿಗೆ ಅರ್ಹತಾ ವಿಶ್ವ ದಾಖಲೆಯನ್ನು (ಕ್ಯೂಡಬ್ಲ್ಯುಆರ್) ಸರಿಗಟ್ಟುವ ಮೂಲಕ ಪ್ರಾಥಮಿಕ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ನಂತರ ಚಿನ್ನದ ಪದಕಕ್ಕೆ ನೆಚ್ಚಿನ ಜೋಡಿಯಾಗಿತ್ತು. ನರ್ವಾಲ್ 284 ಅಂಕ ಗಳಿಸಿದರೆ, ರುಬಿನಾ 286 ಅಂಕ ಗಳಿಸಿದರು.

ಚೀನಾದ ಲಿ ಮಿನ್ ಮತ್ತು ಯಾಂಗ್ ಚಾವೊ ಒಟ್ಟು 562 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಆದರೆ, ಫೈನಲ್‌ನಲ್ಲಿ ಭಾರತಕ್ಕಿಂತ ಉತ್ತಮ ಆಟವಾಡಿ ಚಿನ್ನವನ್ನು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT