ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಹೋರಾಟ ಈಗಷ್ಟೇ ಆರಂಭವಾಗಿದೆ: ಕುಸ್ತಿಪಟು ವಿನೇಶ್ ಫೋಗಟ್

Published 26 ಆಗಸ್ಟ್ 2024, 2:21 IST
Last Updated 26 ಆಗಸ್ಟ್ 2024, 2:21 IST
ಅಕ್ಷರ ಗಾತ್ರ

ರೋಹ್ಟಕ್‌: 'ನನ್ನ ಹೋರಾಟ ಮುಗಿದಿಲ್ಲ, ಈಗಷ್ಟೇ ಆರಂಭವಾಗಿದೆ' ಎಂದು ಕುಸ್ತಿಪಟು ವಿನೇಶ್‌ ಫೋಗಟ್‌ ಹೇಳಿದ್ದಾರೆ.

ನಿಗದಿಗಿಂತ 100 ಗ್ರಾಂ ಅಧಿಕ ಭಾರ ಹೊಂದಿದ್ದ ಕಾರಣ ಫೋಗಟ್‌ ಅವರು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿ ಫೈನಲ್‌ನಿಂದ ಅನರ್ಹಗೊಂಡಿದ್ದರು. ಅವರಿಗೆ ಇಲ್ಲಿನ 'ಸರ್ವಖಾಪ್‌ ಪಂಚಾಯತ್‌' ವತಿಯಿಂದ ಚಿನ್ನದ ಪದಕ ನೀಡಿ ಭಾನುವಾರ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಫೋಗಟ್‌, 'ಈ ಗೌರವವು ಯಾವುದೇ ಪದಕಕ್ಕಿಂತ ದೊಡ್ಡದು. ನಾನಿದಕ್ಕೆ ಸದಾ ಋಣಿಯಾಗಿರುತ್ತೇನೆ' ಎಂದು ಭಾವುಕರಾಗಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಬ್ರಿಜ್‌ ಭೂಷಣ್‌ ಶರಣ್ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕಳೆದ ವರ್ಷ ಕೇಳಿಬಂದಿತ್ತು. ಸಿಂಗ್‌ ವಿರುದ್ಧ ಕುಸ್ತಿಪಟುಗಳು ನಡೆಸಿದ ಹೋರಾಟದ ಮುಂಚೂಣಿಯಲ್ಲಿ ವಿನೇಶ್‌ ಸಹ ಇದ್ದರು.

ಆ ಹೋರಾಟದ ಕುರಿತು, 'ನಮ್ಮ ಹೆಣ್ಣುಮಕ್ಕಳ ಗೌರವಕ್ಕಾಗಿ ಹೋರಾಟ ಈಗಷ್ಟೇ ಪ್ರಾರಂಭವಾಗಿದೆ. ಇದೇ ಮಾತನ್ನು ಧರಣಿ ಸತ್ಯಾಗ್ರಹದ ಸಂದರ್ಭದಲ್ಲೂ ಹೇಳಿದ್ದೆವು' ಎಂದು ಫೋಗಟ್‌ ಸ್ಮರಿಸಿದ್ದಾರೆ.

'ಪ್ಯಾರಿಸ್‌ನಲ್ಲಿ (ಕುಸ್ತಿ ಫೈನಲ್‌ನಲ್ಲಿ) ಸ್ಪರ್ಧಿಸಲು ಆಗದಿದ್ದಾಗ, ನಾನು ದುರದೃಷ್ಟವಂತೆ ಎಂದುಕೊಂಡಿದ್ದೆ. ಆದರೆ, ದೇಶಕ್ಕೆ ಮರಳಿದ ನಂತರ ದೊರೆತ ಪ್ರೀತಿ, ಬೆಂಬಲ ಕಂಡು ನಾನು ಅದೃಷ್ಟವಂತೆ ಎಂಬ ಭಾವ ಮೂಡಿದೆ' ಎಂದು ಹರ್ಷಿಸಿದ್ದಾರೆ.

ಈ ರೀತಿಯ ಪ್ರೋತ್ಸಾಹವು ಇತರ ಮಹಿಳಾ ಕ್ರೀಡಾಪಟುಗಳನ್ನೂ ಹುರಿದುಂಬಿಸಲಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT