ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಯೋಗ ಒಲಿಂಪಿಯಾಡ್‌: ರಾಜ್ಯಕ್ಕೆ ಕಂಚು

Published 20 ಜೂನ್ 2024, 7:40 IST
Last Updated 20 ಜೂನ್ 2024, 7:40 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ಆರ್‌ಐಇ) ಗುರುವಾರ ಮುಕ್ತಾಯಗೊಂಡ ‘ರಾಷ್ಟ್ರೀಯ ಯೋಗ ಒಲಿಂಪಿಯಾಡ್‌’ನಲ್ಲಿ ರಾಜ್ಯದ 16ವರ್ಷದೊಳಗಿನ ಬಾಲಕಿಯರ ತಂಡವು ಕಂಚಿನ ಪದಕ ಜಯಿಸಿತು.

ಕೆ.ವೈ.ಸೃಷ್ಟಿ (ಎಂಆರ್‌ಬಿ ಶಾಲೆ, ಹರಿಹರ), ಎಂ.ಸಂಧ್ಯಾ (ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಯಂಡಹಳ್ಳಿ, ಬೆಂಗಳೂರು), ಟಿ.ಆರ್‌.ಕಲ್ಲೇಶ್ವರಿ (ಇಂದಿರಾ ಗಾಂಧಿ ವಸತಿ ಶಾಲೆ, ಹರಿಹರ) ಹಾಗೂ ಆರ್‌.ಅನುಷಾ (ರಾಜೇಶ್ವರಿ ವಿದ್ಯಾಶಾಲೆ, ಕೆಂಚನಹಳ್ಳಿ, ಬೆಂಗಳೂರು) ಅವರ ತಂಡವು 1,027 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಪಡೆಯಿತು.

ಪಶ್ಚಿಮ ಬಂಗಾಳ (1,078) ಮೊದಲ ಸ್ಥಾನ ಪಡೆದರೆ, ಕೇಂದ್ರೀಯ ವಿದ್ಯಾಶಾಲೆ (1,029) ಹಾಗೂ ತಮಿಳುನಾಡು (1,010) ಕ್ರಮವಾಗಿ 2 ಹಾಗೂ 4ನೇ ಸ್ಥಾನ ಪಡೆದವು. ಪ್ರತಿ ತಂಡದ ಸದಸ್ಯರು ಪ್ರಾಣಾಯಾಮದ ಜೊತೆಗೆ ಅರ್ಧ ಮತ್ಸ್ಯೇಂದ್ರಾಸನ, ತಾಡಾಸನ, ಸರ್ವಾಂಗಾಸನ, ಉಷ್ಟ್ರಾಸನ, ಆಕರ್ಣ ಧನುರ್‌ಆಸನ, ಶೀರ್ಸಾಸನ ಪ್ರದರ್ಶಿಸಿದರು.

16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಿಐಎಸ್‌ಸಿಇ ಶಾಲೆಗಳ ತಂಡವು ಮೊದಲ ಸ್ಥಾನ ಗೆದ್ದಿದ್ದು, ತಂಡದಲ್ಲಿ ರಾಜ್ಯದ ತುಮಕೂರು ಜಿಲ್ಲೆಯ ಶಿರಾದ ಪ್ರೆಸಿಡೆಂಟ್ ಪಬ್ಲಿಕ್ ಶಾಲೆಯ ಉದಿತ್ ಬಾಲಾಜಿ ಚಿನ್ನಕ್ಕೆ ಕೊರಳೊಡ್ಡಿದರು.

14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 2ನೇ ಸ್ಥಾನ ಪಡೆದ ಸಿಐಎಸ್‌ಸಿಇ ಶಾಲೆಗಳ ತಂಡದಲ್ಲಿ ರಾಜ್ಯದ ದೊಡ್ಡಬಳ್ಳಾಪುರದಲ್ಲಿನ ಆದಿತ್ಯ ಪಬ್ಲಿಕ್ ಶಾಲೆಯ ಸಿಂಚನಾ ಹಾಗೂ ಯಶಿಕಾ, ಬಾಲಕರ ವಿಭಾಗದಲ್ಲಿ 2ನೇ ಸ್ಥಾನ ಪಡೆದ ಸಿಐಎಸ್‌ಸಿಇ ತಂಡದಲ್ಲಿ ಮೈಸೂರಿನ ಆಚಾರ್ಯ ವಿದ್ಯಾಕುಲ ಶಾಲೆಯ ಹೇಮಂತ್ ಬೆಳ್ಳಿ ಗೆದ್ದರು.

ನಾಲ್ಕೂ ವಿಭಾಗದಲ್ಲಿ ಪಶ್ಚಿಮ ಬಂಗಾಳ ತಂಡದವರು ಪಾರಮ್ಯ ಸಾಧಿಸಿ, ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡತು. ಕೇಂದ್ರ ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಕುಮಾರ್, ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ.ದಿನೇಶ್‌ ಪ್ರಸಾದ್‌ ಸಕ್ಲಾನಿ, ಆರ್‌ಐಇ ಪ್ರಾಂಶುಪಾಲ ಪ್ರೊ.ವಿ.ಶ್ರೀಕಾಂತ್‌ ಪ್ರಶಸ್ತಿ ವಿತರಿಸಿದರು.

ಒಲಿಂಪಿಯಾಡ್‌ನಲ್ಲಿ 18 ರಾಜ್ಯ, 5 ಕೇಂದ್ರಾಡಳಿತ ಪ್ರದೇಶದ 483 ಯೋಗಪಟುಗಳು ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT