ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Neeraj Chopra | ಡೈಮಂಡ್ ಲೀಗ್: ಸತತ 2ನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರಾ

Published 1 ಜುಲೈ 2023, 3:01 IST
Last Updated 1 ಜುಲೈ 2023, 3:01 IST
ಅಕ್ಷರ ಗಾತ್ರ

ಲುಸಾನ್ (ಫ್ರಾನ್ಸ್‌): ಒಲಿಂಪಿಕ್‌ ಜಾವೆಲಿನ್‌ ಚಾಂಪಿಯನ್ ನೀರಜ್‌ ಚೋಪ್ರಾ, ಪ್ರತಿಷ್ಠಿತ ಡೈಮಂಡ್‌ ಲೀಗ್‌ನಲ್ಲಿ ಸತತ ಎರಡನೇ ಚಿನ್ನ ಗೆದ್ದುಕೊಂಡರು. ಶುಕ್ರವಾರ ನಡೆದ ಈ ಕೂಟದಲ್ಲಿ ಅವರು 87.66 ಮೀಟರ್ ಸಾಧನೆಯೊಡನೆ ಅಗ್ರಸ್ಥಾನ ಪಡೆದರು.

ಆದರೆ, 90 ಮೀ. ದಾಟುವ ಅವರ ಗುರಿ ಈಡೇರಲಿಲ್ಲ. ಸ್ನಾಯು ನೋವಿನಿಂದ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ಅವರು ಇಲ್ಲಿ ತಮ್ಮ ಅತ್ಯುತ್ತಮ 10 ಥ್ರೋಗಳ ಒಳಗಿನ ಸಾಧನೆ ದಾಖಲಿಸಲಿಲ್ಲ. ಆದರೆ ಅದರಿಂದ ಚಿನ್ನ ಗೆಲ್ಲುವುದಕ್ಕೆ ಸಮಸ್ಯೆಯಾಗಲಿಲ್ಲ.

25 ವರ್ಷದ ಚೋಪ್ರಾ, ಮೇ ತಿಂಗಳಲ್ಲಿ ದೋಹಾದಲ್ಲಿ ನಡೆದ ಋತುವಿನ ಮೊದಲ ಡೈಮಂಡ್‌ ಲೀಗ್‌ನಲ್ಲಿ ತಮ್ಮ ವೃತ್ತಿಜೀವನದ ನಾಲ್ಕನೇ ಅತ್ಯುತ್ತಮ ಥ್ರೊ (88.67 ಮೀ.) ದಾಖಲಿಸಿ ಚಿನ್ನ ಗೆದ್ದಿದ್ದರು. ನಂತರ ಮೂರು ಪ್ರಮುಖ ಕೂಟಗಳಲ್ಲಿ ಪಾಲ್ಗೊಂಡಿರಲಿಲ್ಲ. 

ಆರಂಭದ ಸುತ್ತುಗಳಲ್ಲೇ ತಮ್ಮ ಉತ್ತಮ ಥ್ರೊ ದಾಖಲಿಸುವ ಚೋಪ್ರಾ, ಇಲ್ಲಿ ಲೀಡ್‌ ಪಡೆಯಲು ಐದನೇ ಯತ್ನದವರೆಗೆ ಕಾಯಬೇಕಾಯಿತು. ನಾಲ್ಕನೇ ಸುತ್ತಿನ ನಂತರ ಅವರು ಎರಡನೇ ಸ್ಥಾನದಲ್ಲಿದ್ದರು.

‘ಗಾಯಾಳಾಗಿ ಮರಳಿದ್ದರಿಂದ ಸ್ವಲ್ಪ ನರ್ವಸ್‌ ಆಗಿದ್ದೆ. ಇಲ್ಲಿ ಚಳಿಯೂ ತೀವ್ರವಾಗಿತ್ತು. ನನ್ನ ಉತ್ತಮ ಪ್ರಯತ್ನಕ್ಕಿಂತ ಕೆಳಗೆ ಇದ್ದೆ. ಆದರೆ ಹೊತ್ತುಹೋದಂತೆ ಸುಧಾರಿತ ಪ್ರದರ್ಶನ ನೀಡಿದೆ’ ಎಂದು ಗೆಲುವಿನ ಬಗ್ಗೆ ಚೋಪ್ರಾ ಪ್ರತಿಕ್ರಿಯಿಸಿದರು.

ಅವರ ಮೊದಲ ಯತ್ನ ಫೌಲ್‌ ಆಯಿತು. ನಂತರ 83.52 ಮತ್ತು 85.04 ಮೀ. ಥ್ರೊ ದಾಖಲಿಸಿದರು. ನಾಲ್ಕನೇ ಸುತ್ತಿನಲ್ಲಿ ಮತ್ತೊಮ್ಮೆ ಫೌಲ್‌ ಆಯಿತು. ಆದರೆ ಐದನೇ ಸುತ್ತಿನ 87.66 ಮೀ.ಗಳ ಎಸೆತ ಅವರಿಗೆ ಚಿನ್ನದ ಪದಕ ಖಚಿತಪಡಿಸಿತು.

ಜರ್ಮನಿಯ ಜೂಲಿಯನ್‌ ವೇಬರ್‌ 87.03 ಮೀ. ಸಾಧನೆಯೊಡನೆ ಎರಡನೇ ಸ್ಥಾನ ಪಡೆದರೆ. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ, ಈ ಋತುವಿನ ಶ್ರೇಷ್ಠ ಸಾಧನೆ ದಾಖಲಿಸಿರುವ ಜೆಕ್‌ ರಿಪಬ್ಲಿಕ್‌ನ ಯಾಕುಬ್ ವಾಡ್ಲೆಚ್ 86.13 ಮೀ. ಥ್ರೊದೊಡನೆ ಮೂರನೇ ಸ್ಥಾನ ಪಡೆದರು.

ಶ್ರೀಶಂಕರ್‌ಗೆ 5ನೇ ಸ್ಥಾನ: ಪುರುಷರ ಲಾಂಗ್‌ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್‌ ಅಷ್ಟೇನೂ ಉತ್ತಮ ಸಾಧನೆ ತೋರದೇ, 7.88 ಮೀ. ಜಿಗಿತದೊಡನೆ ಐದನೇ ಸ್ಥಾನ ಪಡೆದರು. 24 ವರ್ಷದ ಶ್ರೀಶಂಕರ್‌ ಈ ದೂರವನ್ನು ಮೂರನೇ ಸುತ್ತಿನಲ್ಲಿ ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT