ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊನೆಯವರೆಗೂ ಬಿಟ್ಟುಕೊಡಬೇಡ | ಟಿ20 ಕ್ರಿಕೆಟ್‌ ತಂಡದಿಂದ ಪಾಠ ಕಲಿತ ಶ್ರೀಜೇಶ್‌

Published 8 ಜುಲೈ 2024, 21:10 IST
Last Updated 8 ಜುಲೈ 2024, 21:10 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕನೇ ಬಾರಿ ಹಾಗೂ ಬಹುತೇಕ ಕೊನೆಯ ಬಾರಿ ಒಲಿಂಪಿಕ್ಸ್‌ ಆಡಲು ಸಜ್ಜಾಗಿರುವ ಭಾರತ ಹಾಕಿ ತಂಡದ ಅನುಭವಿ ಗೋಲ್‌ ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರು ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದಿಂದ ಪಾಠ ಕಲಿತಿದ್ದಾರೆ– ‘ಕೊನೆಯವರೆಗೂ ಬಿಟ್ಟುಕೊಡಬೇಡ. ಬಳಿಕವಷ್ಟೇ ಸಂಭ್ರಮಿಸು...’ ಎಂಬುದು ಈ ಪಾಠ.

ಭಾರತ ಕ್ರಿಕೆಟ್‌ ತಂಡ ಕಳೆದ ತಿಂಗಳ ಕೊನೆಯಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ 15 ಓವರುಗಳ ನಂತರ ಹೆಚ್ಚುಕಮ್ಮಿ ಸೋಲಿನ ಸುಳಿಯಲ್ಲಿತ್ತು. ಆದರೆ ನಂತರ ತಿರುಗೇಟು ನೀಡಿ ದಕ್ಷಿಣ ಆಫ್ರಿಕಾ ಕೈಯಿಂದ ಗೆಲುವನ್ನು ಕಸಿಕೊಂಡಿತು. ಏಳು ರನ್‌ಗಳಿಂದ ಪಂದ್ಯ ಗೆದ್ದು 11 ವರ್ಷಗಳಿಂದ ಎದುರಿಸುತ್ತಿದ್ದ ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿತ್ತು.

‘ನಾನು ಫೈನಲ್ ಪಂದ್ಯ ನೋಡಿದ್ದೆ. ಕೊನೆಯ ಎಸೆತದವರೆಗೂ ಸಂಭ್ರಮವನ್ನಾಚರಿಸಬೇಡ ಎಂಬುದು ನಾನು ಕಲಿತ ಅತಿ ದೊಡ್ಡ ಪಾಠ. ದಕ್ಷಿಣ ಆಫ್ರಿಕಾ 15ನೇ ಓವರ್‌ವರೆಗೆ ಹೆಚ್ಚು ಕಮ್ಮಿ ಗೆಲುವಿನ ಹಾದಿಯಲ್ಲಿತ್ತು. ಆದರೆ ಭಾರತ ತಂಡ ಸುಲಭವಾಗಿ ಬಿಟ್ಟುಕೊಡಲಿಲ್ಲ. ಸೋಲಿನ ದವಡೆಯಿಂದ ಗೆಲುವನ್ನು ಪಡೆಯಿತು’ ಎಂದು ಶ್ರೀಜೇಶ್‌ ಪಿಟಿಐಗೆ ತಿಳಿಸಿದರು. ಅವರು ಭಾರತ ತಂಡದ ಪರ 328 ಪಂದ್ಯಗಳಲ್ಲಿ ಆಡಿದ್ದಾರೆ.

‘ಇದು ನಮಗಷ್ಟೇ ಅಲ್ಲ, ಒಲಿಂಪಿಕ್ಸ್‌ಗೆ ಹೋಗುತ್ತಿರುವ ಎಲ್ಲ ಕ್ರೀಡಾಪಟುಗಳು ಕ್ರಿಕೆಟ್‌ ತಂಡದಿಂದ ಕಲಿಯಬಹುದಾದ ಪಾಠ. ಬಿಟ್ಟುಕೊಡಬೇಡ. ಕೊನೆಯವರೆಗೂ ಹೋರಾಡು. ನೀವು ಸಾಧಿಸಬಹುದು. ಇದನ್ನು ಒಲಿಂಪಿಕ್ಸ್‌ನಲ್ಲೂ ನಾನು ನೆನಪಿನಲ್ಲಿಟ್ಟುಕೊಳ್ಳುವೆ’ ಎಂದರು.

‘ಭಾರತ ಹಾಕಿ ತಂಡದ ಗೋಡೆ’ ಎನಿಸಿರುವ ಶ್ರೀಜೇಶ್‌, ಭಾರತ ಕ್ರಿಕೆಟ್‌ನ ‘ಗೋಡೆ’ ಎನಿಸಿರುವ ರಾಹುಲ್ ದ್ರಾವಿಡ್ ಅವರಿಂದಲೂ ಉಪಯುಕ್ತ ಸಲಹೆ ಪಡೆದಿದ್ದಾರೆ. ‘ತುಂಬಾ ಹಿಂದೆ ದ್ರಾವಿಡ್‌ ಭಾಯ್ ಅವರನ್ನು ಭೇಟಿ ಮಾಡಿದ್ದೆ. ಅವರು ಸಹನೆಯ ಮಹತ್ವದ ಬಗ್ಗೆ ಮತ್ತು  ಅವಕಾಶಗಳಿಗೆ ಕಾಯುವಂತೆ ಸಲಹೆಯಿತ್ತರು. ಅದನ್ನೇ ನಾನು ಪಾಲಿಸಿದೆ. ನಾನು ದಿಢೀರನೇ ಒಳ್ಳೆಯ ಗೋಲ್‌ ಕೀಪರ್‌ ಆಗಲಿಲ್ಲ. ನಾನು ಅವಕಾಶಗಳಿಗೆ ಕಾದಿದ್ದೆ. ವಿನಮ್ರವಾಗಿರುವುದನ್ನೂ ನಾನು ಅವರಿಂದಲೇ ಕಲಿತಿದ್ದೆ’ ಎಂದರು.

ಬೋರ್ಡ್ ಪರೀಕ್ಷೆಗಳಲ್ಲಿ ಕೃಪಾಂಕ ಪಡೆಯುವ ಉದ್ದೇಶದಿಂದ ಹಾಕಿ ಆಡಲು ಆರಂಭಿಸಿದ್ದ ಶ್ರೀಜೇಶ್‌, ನಂತರ ಕ್ರಮಿಸಿದ ಹಾದಿ ಬಲುದೂರದ್ದು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2021) ಕಂಚಿನ ಪದಕವನ್ನೂ ಗೆದ್ದುಕೊಂಡರು. ಒಮ್ಮೆ ಅವರು ಎಫ್‌ಐಎಚ್‌ನಿಂದ ‘ವರ್ಷದ ಆಟಗಾರ’ ಗೌರವಕ್ಕೂ ಪಾತ್ರರಾಗಿದ್ದರು.

‘ಇದೊಂದು ಕನಸಿನ ಪಯಣ. ಮಂಡಳಿ ಪರೀಕ್ಷೆಗಳಲ್ಲಿ ಕೃಪಾಂಕ ಪಡೆಯುವುದಕ್ಕೆ ನಾನು ಈ ಆಟ ಆಡತೊಡಗಿದ್ದೆ. ನಾನು ಭಾರತ ತಂಡಕ್ಕೆ ಆಡುತ್ತೇನೆಂದು ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಭಾರತದ ಹಾಕಿ ದಂತಕಥೆ ಧನರಾಜ್ ಪಿಳ್ಳೆ ಬಗ್ಗೆ ತಿಳಿದುಕೊಂಡಿದ್ದೆ. ಅವರು ನಾಲ್ಕು ಒಲಿಂಪಿಕ್ಸ್‌, ನಾಲ್ಕು ವಿಶ್ವಕಪ್‌, ಚಾಂಪಿಯನ್ಸ್‌ ಟ್ರೋಫಿ, ಏಷ್ಯನ್ ಗೇಮ್ಸ್‌ನಲ್ಲಿ ಆಡಿದ್ದರು. ನಾನು ನಾಲ್ಕನೇ ಒಲಿಂಪಿಕ್ಸ್‌ ಆಡುತ್ತಿರುವ ಮೊದಲ ಗೋಲ್‌ ಕೀಪರ್‌ ಆಗಿದ್ದೇನೆ. ಇದನ್ನು ನಂಬಲು ಕಷ್ಟವಾಗುತ್ತಿದೆ’ ಎಂದು ಶ್ರೀಜೇಶ್‌ ವಿವರಿಸಿದರು.

ಟೋಕಿಯೊದಲ್ಲಿ ಹಾಕಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅವರು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ತಮ್ಮ ಮೇಲೆ ಇರುವ ನಿರೀಕ್ಷೆಗಳ ಬಗ್ಗೆಯೂ ಅರಿವು ಇದೆ. ಯುವ ಆಟಗಾರರಿಗೆ ಅವರು ಮಾರ್ಗದರ್ಶಕನ ಪಾತ್ರವನ್ನೂ ವಹಿಸುತ್ತಿದ್ದಾರೆ.

‘ಒಲಿಂಪಿಕ್ಸ್‌ನಲ್ಲಿ ಒತ್ತಡ ಅತೀವ. ಅದು ಪ್ರೆಷರ್ ಕುಕ್ಕರ್‌ ರೀತಿಯದ್ದು. ನಮ್ಮ ಪ್ರತಿ ಪಂದ್ಯದ ನಡೆಗಳನ್ನು ಮಾಧ್ಯಮಗಳು ಗಮನಿಸುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳೂ ಇವೆ. ಜನರು ಸಲಹೆಗಳನ್ನು ನೀಡಿ ಮನಸ್ಸನ್ನು ಬೇರೆಡೆ ಸೆಳೆಯುತ್ತಾರೆ. ಇಂಥ ಧ್ವನಿಗಳಿಗೆ ಕಿವಿಯಾಗದೇ ತಂಡವಾಗಿ ಆಡುವ ಕಡೆಗಷ್ಟೇ ಗಮನಹರಿಸಿ ಎಂದು ನಾನು ತಂಡಕ್ಕೆ ಹೇಳುತ್ತಿರುತ್ತೇನೆ’ ಎಂದರು.

ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಪ್ರಬಲ ‘ಬಿ’ ಗುಂಪಿನಲ್ಲಿದೆ. ಆರ್ಜೆಂಟೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ನ್ಯೂಜಿಲೆಂಡ್‌ ಮತ್ತು ಐರ್ಲೆಂಡ್‌ ಗುಂಪಿನ ಇತರ ತಂಡಗಳಾಗಿವೆ. ಆರ್ಜೆಂಟೀನಾ ಜಾಣ್ಮೆಯಿಂದ ಆಡುವ ತಂಡ, ಆಸ್ಟ್ರೇಲಿಯಾ ಪ್ರಬಲ ತಂಡ. ಬೆಲ್ಜಿಯಂ ತುಂಬಾ ಅನುಭವಿ ದಾಳಿಯ ವಿಭಾಗವನ್ನು ಹೊಂದಿದೆ. ಆದರೆ ಪಂದ್ಯದ ದಿನ ನಮ್ಮ ಅನುಭವ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT