ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ನಿಂದ ವೈರಸ್‌ ಹಬ್ಬುವ ಸಾಧ್ಯತೆ: ಜಪಾನ್‌ ಚಕ್ರವರ್ತಿಗೂ ಚಿಂತೆ

Last Updated 24 ಜೂನ್ 2021, 16:15 IST
ಅಕ್ಷರ ಗಾತ್ರ

ಟೋಕಿಯೊ: ಜನಸಮುದಾಯದ ಭಾವನೆಯ ರೀತಿಯಲ್ಲೇ ಜಪಾನ್‌ ಚಕ್ರವರ್ತಿ ನರುಹಿಟೊ ಕೂಡ ಒಲಿಂಪಿಕ್‌ ಕ್ರೀಡೆಯ ಆಯೋಜನೆಯಿಂದ ದೇಶದಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಹೆಚ್ಚಾಗಬಹುದು ಎಂಬ ಆತಂಕ ಹೊಂದಿದ್ದಾರೆ ಎಂದು ಕ್ಯೊಡೊ ನ್ಯೂಸ್‌ ವರದಿ ಮಾಡಿದೆ.

ಜಪಾನ್‌ನ ಇಂಪೀರಿಯಲ್‌ ಹೌಸ್‌ಹೋಲ್ಡ್ ಏಜನ್ಸಿ (ಐಎಚ್‌ಎ) ಅಧಿಕಾರಿಯನ್ನು ಉಲ್ಲೇಖಿಸಿ ಕ್ಯೊಡೊ ಈ ವರದಿ ಮಾಡಿದೆ. ‘ಕೊರೊನಾ ವೈರಸ್‌ ಹಾವಳಿಯ ಪ್ರಸಕ್ತ ಸ್ಥಿತಿಯ ಬಗ್ಗೆ ಚಕ್ರವರ್ತಿ ಅವರು ತೀವ್ರ ಕಳವಳ ಹೊಂದಿದ್ದಾರೆ’ ಎಂದು ಐಎಚ್‌ಎ ಗ್ರ್ಯಾಂಡ್‌ ಸ್ಟ್ಯುಅರ್ಡ್‌ ಯಶುಹಿಕೊ ನಿಶಿಮುರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವುದಾಗಿ ಕ್ಯೊಡೊ ತಿಳಿಸಿದೆ.

ಜನರ ಆತಂಕದ ನಡುವೆಯೇ, ಕ್ರೀಡೆಗಳ ಆಯೋಜನೆಯಿಂದ ವೈರಸ್‌ ಹಬ್ಬುವ ಸಾಧ್ಯತೆ ಬಗ್ಗೆ ಚಕ್ರವರ್ತಿ ನರುಹಿಟೊ ಕೂಡ ಚಿಂತಿತರಾಗಿದ್ದಾರೆ ಎಂದು ತಿಳಿಸಲಾಗಿದೆ. ನರುಹಿಟೊ ಅವರು ಟೋಕಿಯೊ 2020 ಗೇಮ್ಸ್‌ನ ಗೌರವ ಪೋಷಕರಾಗಿದ್ದಾರೆ. ಇದೇ ಜುಲೈ 23 ರಿಂದ ಆಗಸ್ಟ್‌ 9ರವರೆಗೆ ಕ್ರೀಡೆಗಳು ನಿಗದಿಯಾಗಿವೆ.

‘ಜಪಾನ್‌ ಚಕ್ರವರ್ತಿಗೆ ರಾಜಕೀಯ ಅಧಿಕಾರ ಇಲ್ಲ. ಆದರೆ ದೇಶದ ಅಲಂಕಾರಿಕ ಹುದ್ದೆಯಲ್ಲಿರುವ ಅವರ ಬಗ್ಗೆ ಜನತೆ ಗೌರವ ಹೊಂದಿದೆ. ಅವರು ಸಾರ್ವಜನಿಕವಾಗಿ ಹೇಳಿಕೆ ನೀಡುವುದೂ ಅತಿ ವಿರಳ.

‌ಸಾಂಕ್ರಾಮಿಕದ ಈ ಕಾಲದಲ್ಲಿ ಸ್ಪರ್ಧೆಗಳನ್ನು ಕಡಿಮೆ ಮಾಡಿ ಕ್ರೀಡೆಗಳನ್ನು ನಡೆಸುವ ಸಾಧ್ಯತೆಯ ಬಗ್ಗೆಯೂ ಜನರು ಅನುಮಾನ ಹೊಂದಿದ್ದಾರೆ. ವಿದೇಶಿ ಪ್ರೇಕ್ಷಕರಿಗೆ ಈಗಾಗಲೇ ನಿಷೇಧ ಹೇರಲಾಗಿದೆ. ದೇಶಿಯ ಪ್ರೇಕ್ಷಕರ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ. ಹರ್ಷೊದ್ಗಾರ, ಹೈಫೈ ಮೊದಲಾದ ಸಂಭ್ರಮ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ.

ಬೇರೆ ದೇಶಗಳನ್ನು ಕಂಗೆಡಿಸಿದ್ದ ಕೊರೊನಾ ವೈರಸ್‌, ಜಪಾನ್‌ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಂಡಿಲ್ಲ. ಆದರೆ ಅಲ್ಲಿ ಪ್ರಕರಣಗಳು ವರದಿಯಾಗುತ್ತಲೇ ಇದ್ದು, ಲಸಿಕೆ ನೀಡುವ ಪ್ರಮಾಣ ಕಳೆದ ತಿಂಗಳವರೆಗೂ ಮಂದಗತಿಯಲ್ಲಿತ್ತು. ಕೆಲವು ನಗರಗಳಲ್ಲಿ ವೈದ್ಯಕೀಯ ವ್ಯವಸ್ಥೆ ಕುಸಿದುಬೀಳುವ ಹಂತಕ್ಕೂ ತಲುಪಿದೆ.

ಜಪಾನ್‌ನ ಹಿರಿಯ ನಾಗರಿಕರಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ತಮ್ಮ ಮೊದಲ ಡೋಸ್‌ ಪೂರೈಸಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಪ್ರಸಾರ ಸಂಸ್ಥೆ ಎನ್‌ಎಚ್‌ಕೆ ಗುರುವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT