ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರ ಒಲಿಂಪಿಕ್ಸ್‌ಗೆ ರಕ್ಷಿತಾ ರಾಜು

Published : 7 ಆಗಸ್ಟ್ 2024, 23:35 IST
Last Updated : 7 ಆಗಸ್ಟ್ 2024, 23:35 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಗುಡ್ಡದಹಳ್ಳಿಯ ಅಂಧ ಪ್ರತಿಭೆ ರಕ್ಷಿತಾ ರಾಜು ಅವರು ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.

ಎರಡನೇ ವಯಸ್ಸಿಗೆ ತಾಯಿ ಮತ್ತು ಹತ್ತನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ರಕ್ಷಿತಾ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಶಿಕ್ಷಕಿ ಸಿಂಥಿಯಾ ಫೆಸ್ ಅವರ ಮಾರ್ಗದರ್ಶನದಂತೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿರುವ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ಸೇರಿದರು. 

ಓದಿನ ಜತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡಿದ್ದ ರಕ್ಷಿತಾ, 2016ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಅಂಧ ಮಕ್ಕಳ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದರು. 400 ಮೀಟರ್ ಓಟದಲ್ಲಿ ಗೆದ್ದು ಬೀಗಿದ್ದರು. 

ನಂತರ 2018, 2023ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದರು. ಇದೇ ಆಗಸ್ಟ್ 26ರಿಂದ ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ 1500 ಮೀಟರ್ ಓಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. 

‘ಲೈಫ್‌ಲೈನ್ ಫೀಡ್ಸ್‌ ಸಂಸ್ಥೆಯ ಸಹಕಾರ ಮತ್ತು ತರಬೇತುದಾರರ ಪ್ರೋತ್ಸಾಹದಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದೇನೆ. ದೇಶಕ್ಕೆ ಪದಕ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ರಕ್ತಿತಾ ರಾಜು ಹೇಳಿದರು.

‘ಮೈಸೂರು ಓಪನ್‌’ ಗಾಲ್ಫ್‌ ಟೂರ್ನಿ ಇಂದಿನಿಂದ

ಮೈಸೂರು: ಪ್ರೊಫೆಷನಲ್‌ ಗಾಲ್ಫ್ ಟೂರ್ ಆಫ್‌ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್‌ ಗಾಲ್ಫ್‌ ಕ್ಲಬ್‌ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ‘ಮೈಸೂರು ಓಪನ್‌–2024’ ಪುರುಷರ ವೃತ್ತಿಪರ ಗಾಲ್ಫ್‌ ಟೂರ್ನಿಯು ಆಗಸ್ಟ್ 8ರಿಂದ 11ರವರೆಗೆ ಇಲ್ಲಿನ ಗಾಲ್ಫ್‌ ಮೈದಾನದಲ್ಲಿ ನಡೆಯಲಿದೆ. ವಿಜೇತರು ಒಟ್ಟು ₹1 ಕೋಟಿ ಮೌಲ್ಯದ ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.

‘ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಟ್ಟದ ಗಾಲ್ಫ್‌ ಟೂರ್ನಿ ನಡೆಯುತ್ತಿದೆ. 12 ವಿದೇಶಿಯರು ಸೇರಿ 126 ಆಟಗಾರರು ಸ್ಪರ್ಧೆಯಲ್ಲಿದ್ದಾರೆ. 2022ರ ಪಿಜಿಟಿಐ ಆರ್ಡರ್ ಆಫ್‌ ಮೆರಿಟ್ ಚಾಂಪಿಯನ್‌ ಮನು ಗಂಡಾಸ್‌, ಮೈಸೂರಿನವರೇ ಆದ ಯಶಸ್ ಚಂದ್ರ, ಒಲಿಂಪಿಯನ್‌ ಉದಯನ್‌ ಮಾನೆ ಪ್ರಮುಖ ಆಕರ್ಷಣೆಯಾಗಿದ್ದಾರೆ’ ಎಂದು ಪಿಜಿಟಿಐ ಸಿಇಒ ಉತ್ತಮ್ ಸಿಂಗ್‌ ಮುಂಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೆಡಬ್ಲ್ಯುಜಿಸಿ ಅಧ್ಯಕ್ಷ ಅಬ್ರಹಾಂ ಥಾಮಸ್ ‘ದ್ವಿತಿಯಾರ್ಧ ಋತುವಿನ ಮೊದಲ ಪ್ರಮುಖ ಟೂರ್ನಿ ಇದು. ಭಾರತದ ಆಟಗಾರರ ಜೊತೆಗೆ ಶ್ರೀಲಂಕಾ, ಬಾಂಗ್ಲಾದೇಶ, ಇಟಲಿ, ನೇಪಾಳ, ಕೆನಡಾ, ದಕ್ಷಿಣ ಕೊರಿಯಾ, ಜಪಾನ್‌, ಅಮೆರಿಕಾದಿಂದಲೂ ಸ್ಪರ್ಧಿಗಳು ಕಣದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಆಟಗಾರರಾದ ಮನು ಗಂಡಾಸ್ ಹಾಗೂ ಯಶಸ್ ಚಂದ್ರ ‘ಇಲ್ಲಿನ ಜೆಡಬ್ಲ್ಯುಜಿಸಿ ಗಾಲ್ಫ್‌ ಅಂಕಣ ಸುಂದರವಾದ ಭೂ ವಿನ್ಯಾಸ ಹಾಗೂ ಸವಾಲಿನ ಫೇರ್‌ವೇಗಳಿಂದ ಕೂಡಿದ್ದು, ಗಾಲ್ಫ್‌ ಆಟಗಾರರ ಕೌಶಲವನ್ನು ಪರೀಕ್ಷೆಗೆ ಒಡ್ಡಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT