ಪ್ಯಾರಿಸ್: ಭಾರತದ ಲಕ್ಷ್ಯ ಸೇನ್ ಒಲಿಂಪಿಕ್ ಕೂಟದ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಪದಕ ಜಯಕ್ಕೆ ಮತ್ತಷ್ಟು ಸನಿಹ ಬಂದು ನಿಂತರು.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಲಕ್ಷ್ಯ 19-21, 21-15, 21-12ರಿಂದ ಚೈನಿಸ್ ತೈಪೆಯ ಚೌ ಟೀನ್ ಚೆನ್ ಅವರ ವಿರುದ್ಧ ರೋಚಕ ಜಯ ಸಾಧಿಸಿದರು. ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಯಿತು.
ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಅವರು ಮಾತ್ರ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತದಲ್ಲಿ ಗೆದ್ದ ಸಾಧನೆ ಮಾಡಿದ್ದಾರೆ. ಪುರುಷರ ವಿಭಾಗದಲ್ಲಿ ಈ ಹಿಂದೆ ಪರುಪಳ್ಳಿ ಕಶ್ಯಪ್ ಮತ್ತು ಕೆ. ಶ್ರೀಕಾಂತ್ ಅವರು ಎಂಟರ ಘಟ್ಟ ತಲುಪಿದ್ದರು.
ಆದರೆ ಉತ್ತರಾಖಂಡದ ಅಲ್ಮೋರಾದ 22 ವರ್ಷದ ಲಕ್ಷ್ಯ ಅವರಿಗೆ ನಾಲ್ಕರ ಘಟ್ಟದ ಹಾದಿಯು ಸುಲಭವಾಗಿರಲಿಲ್ಲ. ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಚೌ ಅವರು ಕಠಿಣ ಸ್ಪರ್ಧೆ ಒಡ್ಡಿದರು. ಪಂದ್ಯದ ಮೊದಲ ಗೇಮ್‌ನಲ್ಲಿ ಪಾಯಿಂಟ್ಸ್ ಕಲೆಹಾಕಲು ಲಕ್ಷ್ಯ ಬಹಳಷ್ಟು ಪ್ರಯಾಸಪಟ್ಟರು. ಆದರೆ ಕೇವಲ ಎರಡು ಅಂಕಗಳ ಅಂತರದಿಂದ ಸೋತರು. ಆದರೆ ಅವರ ಛಲದ ಹೋರಾಟ ಗಮನ ಸೆಳೆಯಿತು. ಮುಂದಿನ ಎರಡೂ ಗೇಮ್‌ಗಳಲ್ಲಿ ಅವರು ಮತ್ತಷ್ಟು ಆಕ್ರಮಣಶೈಲಿಯ ಆಟಕ್ಕಿಳಿದರು.
ಚೀನಾದ ಆಟಗಾರನಿಗೆ ತಕ್ಕ ಉತ್ತರ ಕೊಡುವಲ್ಲಿ ಯಶಸ್ವಿಯಾದರು. ಸ್ಟ್ರೇಚ್ ರಿಟರ್ನ್ಸ್, ಜಂಪ್ ಸ್ಮ್ಯಾಷ್ ಮತ್ತು ಫೋರ್‌ಹ್ಯಾಂಡ್ ಆಟದ ಮೂಲಕ ಪಾಯಿಂಟ್‌ಗಳನ್ನು ಹೆಕ್ಕಿದರು. ಎರಡನೇ ಗೇಮ್‌ನಲ್ಲಿ ಆರು ಅಂಕಗಳ ಅಂತರದಿಂದ ಗೆದ್ದು 1–1ರ ಸಮಬಲ ಸಾಧಿಸಿದರು. ಇದರಿಂದಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಲಕ್ಸ್ಯ ಕೊನೆಯ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಚುರುಕಾದ ಆಟವಾಡಿದರು.
ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಜಯಿಸುವ ಏಕೈಕ ಭರವಸೆಯಾಗಿ ಲಕ್ಷ್ಯ ಸೇನ್ ಹೊರಹೊಮ್ಮಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಜಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಅವರು ಈಗಾಗಲೇ ನಿರ್ಗಮಿಸಿದ್ದಾರೆ.
ಲಕ್ಷ್ಮ ಸೇನ್ ಅವರು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. 2021ರಲ್ಲಿ ಅವರು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ, ಎರಡು ವರ್ಷಗಳ ಹಿಂದೆ ಥಾಮಸ್ ಕಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.