ಪ್ಯಾರಿಸ್: ಭಾರತ ತಾರಾ ಆಟಗಾರ್ತಿ ಮಣಿಕಾ ಬಾತ್ರಾ ನೇತೃತ್ವದ ಭಾರತ ತಂಡ ಪ್ಯಾರಿಸ್ ಒಲಿಂಪಿಕ್ಸ್ ಮಹಿಳಾ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕದ ರುಮೇನಿಯಾ ವಿರುದ್ಧದ ರೋಚಕ ಟೈನಲ್ಲಿ 3-2ರಿಂದ ಮೇಲುಗೈ ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಸ್ಮರಣೀಯ ಪ್ರವೇಶ ಮಾಡಿತು.
ಭಾರತ 2–0ರ ಮುನ್ನಡೆಯಲ್ಲಿದ್ದಾಗ ಪ್ರಬಲ ಪೈಪೋಟಿ ಮೂಲಕ ಹಿಂದಿರುಗಿದ ರುಮೇನಿಯಾ 2–2ರ ಸಮಬಲ ಸಾಧಿಸಿತು. ಆದರೆ ನಿರ್ಣಾಯದ ಪಂದ್ಯದಲ್ಲಿ ಮಣಿಕಾ ಭಾರತಕ್ಕೆ ಜಯ ತಂದುಕೊಟ್ಟರು.
ಡಬಲ್ಸ್ ಪಂದ್ಯದಲ್ಲಿ ಭಾರತದ ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್ ಜೋಡಿಯು 11-9 12-10 11-7ರಿಂದ ರುಮೇನಿಯಾದ ಅಡಿನಾ ಡೈಕೊನ್ ಮತ್ತು ಎಲಿಜೆಬೆಥ್ ಸಮರಾ ಜೋಡಿಯನ್ನು ಸೋಲಿಸಿ ಜಯದ ಆರಂಭ ಒದಗಿಸಿದರು.
ನಂತರ ನಡೆದ ಸಿಂಗಲ್ಸ್ ಪಂದ್ಯದಲ್ಲಿ ಮಣಿಕಾ ಬಾತ್ರಾ ಅವರು 11-5 11-7 11-7ರಿಂದ ಉನ್ನತ ಶ್ರೇಯಾಂಕದ ಬೆರ್ನಾಡೆಟ್ ಸೂಕ್ಸ್ ವಿರುದ್ಧ ಜಯ ಗಳಿಸಿದರು. ಈ ಜಯದೊಂದಿಗೆ ಭಾರತ ನಾಲ್ಕನೇ ಶ್ರೇಯಾಂಕದ ಎದುರಾಳಿಗಳ ವಿರುದ್ಧ 2–0ಯಿಂದ ಮುನ್ನಡೆ ಪಡೆಯಿತು. ಈ ಸ್ಪರ್ಧೆಯಲ್ಲಿ ಭಾರತ 11ನೇ ಶ್ರೇಯಾಂಕ ಪಡೆದಿದೆ.
ಆದಾಗ್ಯ ಎರಡನೇ ಸಿಂಗಲ್ಸ್ ಪಂದ್ಯ ಭಾರತದ ಪರವಾಗಿ ಇರಲಿಲ್ಲ. ಮೊದಲ ಗೇಮ್‌ನಲ್ಲಿ ಜಯ ಸಾಧಿಸಿದ್ದ ಶ್ರೀಜಾ ಅಕುಲಾ ಅವರು ಈ ಪಂದ್ಯದಲ್ಲಿ 2–3 (11-8 4-11 11-7 6-11 8-11)ರಿಂದ ಯುರೋಪಿಯನ್ ಚಾಂಪಿಯನ್ ಸಮರಾ ವಿರುದ್ಧ ಸೋಲನುಭವಿಸಿದರು.
ಶ್ರೀಜಾ ಸೋಲು ಸೋಲು ಅರ್ಚನಾ ಮತ್ತು ಬೆರ್ನಾಡೆಟ್ ಮುಖಾಮುಖಿಗೆ ದಾರಿಮಾಡಿಕೊಟ್ಟಿತು. 11–5ರಿಂದ ಮೊದಲ ಗೇಮ್ ಸೋತ ನಂತರ ಭಾರತದ ಆಟಗಾರ್ತಿ ಎರಡನೇ ಗೇಮ್ ಅನ್ನು 11–8ರಿಂದ ತಮ್ಮದಾಗಿಸಿಕೊಂಡರು. ಆದಾಗ್ಯೂ ಬೆರ್ನಾಡೆಟ್ ಮುಂದಿನ ಎರಡು ಗೇಮ್‌ಗಳನ್ನು 11–7, 11–9ರಿಂದ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡು ಟೈ ಅನ್ನು ನಿರ್ಣಾಯಕ ಘಟ್ಟಕ್ಕೆ ಕೊಂಡೊಯ್ದದರು.
ನಂತರ ಮಣಿಕಾ ಬಾತ್ರಾ 3-0 (11-5 11-9 11-9)ರಿಂದ ಅಡಿನಾ ವಿರುದ್ಧ ಗೆದ್ದು, ಟೈಅನ್ನು ಭಾರತದ ಪರವಾಗಿಸಿದರು.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತ ತಂಡ ಅಮೆರಿಕ ಅಥವಾ ಜರ್ಮನಿ ತಂಡವನ್ನು ಎದುರಿಸಲಿದೆ.
ಜಪಾನ್, ಪೊಲೆಂಡ್, ಫ್ರಾನ್ಸ್ ಮತ್ತು ಥಾಯ್ಲೆಂಡ್ ಕೂಡಾ ಡ್ರಾನಲ್ಲಿ ಒಂದೇ ಕಡೆ ಇವೆ.
ಕಳೆದ ವಾರ ಮಣಿಕಾ ಮತ್ತು ಶ್ರೀಜಾ ಅವರು ಒಲಿಂಪಿಕ್ಸ್ ಟೇಬಲ್ ಟೆನಿಸ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೊದಲ ಭಾರತೀಯ ಅಟಗಾರರು ಎಂಬ ಇತಿಹಾಸ ನಿರ್ಮಿಸಿದ್ದರು. ಆದಾಗ್ಯೂ, ಇಬ್ಬರು ಆಟಗಾರ್ತಿಯರು ಉನ್ನತ ಶ್ರೇಣಿಯ ಎದುರಾಳಿಗಳ ವಿರುದ್ಧ ಸೋತಿದ್ದರಿಂದ ಆ ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.