ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ಜಯಭೇರಿ

ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿರುವ ಮಣಿಂದರ್‌ ಪಡೆ
Last Updated 19 ಸೆಪ್ಟೆಂಬರ್ 2019, 19:36 IST
ಅಕ್ಷರ ಗಾತ್ರ

ಪುಣೆ: ಬೆಂಗಾಲ್ ವಾರಿಯರ್ಸ್‌ ನಾಯಕ ಮಣಿಂದರ್ ಸಿಂಗ್ ಮತ್ತು ಹರಿಯಾಣ ಸ್ಟೀಲರ್ಸ್‌ನ ವಿನಯ್ ಅವರು ರೇಡಿಂಗ್‌ನಲ್ಲಿ ಮಿಂಚಿದರು. ಆಲ್‌ರೌಂಡ್ ಆಟವಾಡಿದ ಬೆಂಗಾಲ್‌ ವಾರಿಯರ್ಸ್ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಗುರುವಾರದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಲೀಗ್‌ನ 97ನೇ ಪಂದ್ಯದಲ್ಲಿ ಬೆಂಗಾಲ್ 48–36ರಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನದಲ್ಲಿ ಉಳಿಯಿತು. ಸ್ಟೀಲರ್ಸ್ ಮೂರನೇ ಸ್ಥಾನದಲ್ಲಿ ಉಳಿಯಿತು.

ಹರಿಯಾಣ ತಂಡದ ಪರ ರೇಡಿಂಗ್ ಆರಂಭಿಸಿದ ವಿಕಾಸ್ ಖಂಡೋಲ ಮೊದಲ ರೇಡ್‌ನಲ್ಲಿ ಬರಿಗೈಯಲ್ಲಿ ವಾಪಸಾದರು. ಆದರೆ ಬೆಂಗಾಲ್‌ಗೆ ವಿಕಾಸ್ ಕಾಳೆ ಪಾಯಿಂಟ್ ತಂದುಕೊಟ್ಟರು.

ಪ್ರಶಾಂತ್ ಕುಮಾರ್ ರೈ ಅವರನ್ನು ಹಿಡಿದು ಬೆಂಗಾಲ್ ಪಾಯಿಂಟ್ ಗಳಿಕೆಯನ್ನು ಹೆಚ್ಚಿಸಿತು. ಆದರೆ ವಿನಯ್ ರೇಡಿಂಗ್‌ಗೆ ಇಳಿಯುತ್ತಿದ್ದಂತೆ ಹರಿಯಾಣಕ್ಕೆ ಬಲ ಬಂತು. ಹೀಗಾಗಿ ಎರಡನೇ ನಿಮಿಷದಲ್ಲಿ ತಂಡ 2–2ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಪಟ್ಟು ಬಿಡದ ವಾರಿಯರ್ಸ್ ರೇಡಿಂಗ್ ಮತ್ತು ಟ್ಯಾಕ್ಲಿಂಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಮುನ್ನಡೆ ಗಳಿಸುತ್ತ ಸಾಗಿತು. ಆರನೇ ನಿಮಿಷದಲ್ಲಿ ವಿನಯ್ ಅವರನ್ನು ಹಿಡಿದ ಬಲದೇವ್ ಅವರು ಹರಿಯಾಣ ಆಲ್‌ ಔಟ್ ಆಗುವಂತೆ ಮಾಡಿದರು. ಆಗ ವಾರಿಯರ್ಸ್‌ನ ಮುನ್ನಡೆ 10–3ಕ್ಕೆ ಏರಿತು. ನಂತರವೂ ತಂಡದ ಆಧಿಪತ್ಯ ಮುಂದುವರಿಯಿತು. 10 ನಿಮಿಷಗಳ ಆಟ ಮುಕ್ತಾಯಗೊಂಡಾಗ ಅದರ ಮುನ್ನಡೆ 15–5ಕ್ಕೆ ಏರಿತು. ಈ ನಡುವೆ ವಿಕಾಸ್ ಖಂಡೋಲ 350ನೇ ರೇಡಿಂಗ್ ಪಾಯಿಂಟ್ ಗಳಿಸಿ ಸಂಭ್ರಮಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 8 ನಿಮಿಷಗಳು ಬಾಕಿ ಇದ್ದಾಗ ಹರಿಯಾಣವನ್ನು ಎರಡನೇ ಬಾರಿ ಆಲ್ ಔಟ್ ಮಾಡಿದ ವಾರಿಯರ್ಸ್ 22–7ರಲ್ಲಿ ಮುನ್ನಡೆಯಿತು. ಮೊದಲಾರ್ಧದ ಮುಕ್ತಾಯಕ್ಕೆ ಈ ಮುನ್ನಡೆ ಬೃಹತ್ತಾಗಿ ಬೆಳೆದು 30–14ಕ್ಕೆ ಏರಿತು.

ಮಣಿಂದರ್‌, ವಿನಯ್ ‘ಸೂಪರ್’ ಆಟ:ದ್ವಿತೀಯಾರ್ಧದ ಆರಂಭದಲ್ಲೇ ಮಣಿಂದರ್ ಸಿಂಗ್ ‘ಸೂಪರ್ ಟೆನ್’ ಪೂರೈಸಿದರು. 23ನೇ ನಿಮಿಷದಲ್ಲಿ ವಿನಯ್ ಕೂಡ ‘ಸೂಪರ್ ಟೆನ್‌’ ಸಾಧನೆ ಮಾಡಿದರು. 9 ನಿಮಿಷಗಳ ಆಟ ಬಾಕಿ ಇರುವಾಗ ವಾರಿಯರ್ಸ್ ತಂಡದ ಪಾಯಿಂಟ್ ಗಳಿಕೆ 40ಕ್ಕೆ ಏರಿದರೆ, ಹರಿಯಾಣ 26ರಲ್ಲೇ ಉಳಿಯಿತು. ನಂತರ ಹರಿಯಾಣ ಮಾಡಿದ ಪ್ರಯತ್ನಗಳು ಹಿನ್ನಡೆಯನ್ನು ತಗ್ಗಿಸಲಷ್ಟೇ ನೆರವಾದವು.

ವಾರಿಯರ್ಸ್ ಪರ ಮಣಿಂದರ್ 18 ರೇಡಿಂಗ್ ಪಾಯಿಂಟ್ ಗಳಿಸಿದರೆ, ಪ್ರಪಂಚನ್‌, ಬಲದೇವ್ ಸಿಂಗ್ ಮತ್ತು ಮೊಹಮ್ಮದ್ ನಬಿ ಭಕ್ಷ್ ಕ್ರಮವಾಗಿ 7,6 ಮತ್ತು 5 ಪಾಯಿಂಟ್ ಗಳಿಸಿದರು. ಹರಿಯಾಣ ಪರ ವಿನಯ್ 14 ಮತ್ತು ವಿಕಾಸ್ ಖಂಡೋಲ 9 ಪಾಯಿಂಟ್ ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT