ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ತೆಲುಗು ಟೈಟನ್ಸ್‌ ಪರಾಭವ, ಅಗ್ರಸ್ಥಾನಕ್ಕೆ ಪುಣೇರಿ ಪಲ್ಟನ್‌

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಪಟ್ನಾ: ಸಾಂಘಿಕ ಆಟ ಪ್ರದರ್ಶಿಸಿದ ಪುಣೇರಿ ಪಲ್ಟನ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಮಂಗಳವಾರ ತೆಲುಗು ಟೈಟನ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿ, ಪಾಯಿಂಟ್‌ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಿತು.

ಇಲ್ಲಿನ ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಲ್ಟನ್‌ ತಂಡವು 60–29ರಿಂದ ಟೈಟನ್ಸ್‌ ತಂಡವನ್ನು ಮಣಿಸಿತು. ಮಧ್ಯಂತರದ ವೇಳೆ 29–6ರಿಂದ ಮುನ್ನಡೆ ಪಡೆದ ಪಲ್ಟನ್‌ ತಂಡವು, ಉತ್ತರಾರ್ಧದಲ್ಲೂ ಎದುರಾಳಿ ತಂಡದ ಮೇಲೆ ಸವಾರಿ ಮುಂದುವರಿಸಿ 31 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿತು.

ಪಂದ್ಯ ಆರಂಭವಾದ 6ನೇ ನಿಮಿಷದಲ್ಲಿ ಎದುರಾಳಿ ತಂಡವನ್ನು ಆಲೌಟ್‌ ಮಾಡಿ 11–2ರ ಮುನ್ನಡೆ ಪಡೆದ ಪಲ್ಟರ್‌ ತಂಡವು, 14ನೇ ನಿಮಿಷದಲ್ಲಿ ಮತ್ತೆ ಅಂಗಣವನ್ನು ಖಾಲಿ ಮಾಡಿಸಿತು. ಒಟ್ಟು ನಾಲ್ಕು ಬಾರಿ ಟೈಟನ್ಸ್‌ ತಂಡವನ್ನು ಆಲೌಟ್‌ ಮಾಡಿ ಗಮನ ಸೆಳೆಯಿತು.

ಪಲ್ಟನ್‌ನ ಆಕಾಶ್‌ ಶಿಂಧೆ ಮತ್ತು ಮೋಹಿತ್ ಗೋಯತ್ ರೈಡಿಂಗ್‌ನಲ್ಲಿ ಕ್ರಮವಾಗಿ 11 ಮತ್ತು 8 ಅಂಕಗಳನ್ನು ಪಡೆದು ಮಿಂಚಿದರು. ಟ್ಯಾಕಲ್‌ನಲ್ಲಿ ಮೊಹಮ್ಮದ್ ರೇಜಾ ಶಾಡ್ಲೂಯಿ (7) ಉತ್ತಮ ಬೆಂಬಲ ನೀಡಿದರು. ಉಳಿದಂತೆ, ಅಸ್ಲಾಂ ಇನಾಮದಾರ ಮತ್ತು ಅಭಿನೇಶ್ ನಟರಾಜನ್ ತಲಾ ಐದು ಅಂಕ ಸಂಪಾದಿಸಿದರು. ಟೈಟನ್ಸ್‌ ಪರ ಸಂಜೀವಿ ಎಸ್. 8 ಪಾಯಿಂಟ್ಸ್‌ ಗಳಿಸಿದರು. 

ಆಡಿರುವ 16 ಪಂದ್ಯಗಳ ಪೈಕಿ 12ರಲ್ಲಿ ಜಯ ಸಾಧಿಸಿ 68 ಅಂಕಗಳನ್ನು ಸಂಪಾದಿಸಿರುವ ಪಲ್ಟನ್‌ ತಂಡವು, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಹಿಂದಿಕ್ಕಿತು. 17 ಪಂದ್ಯಗಳ ಪೈಕಿ 15ರಲ್ಲಿ ಸೋತಿರುವ ಟೈಟನ್ಸ್ ತಂಡವು ಕೊನೆಯ (12ನೇ) ಸ್ಥಾನದಲ್ಲಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT