ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಾಕಿ ಟೂರ್ನಿ: ಜರ್ಮನಿ ವಿರುದ್ಧ ಭಾರತಕ್ಕೆ ಸವಾಲಿನ ಪಂದ್ಯ

ಒಲಿಂಪಿಕ್ಸ್‌ ಮಹಿಳಾ ಅರ್ಹತಾ ಹಾಕಿ ಟೂರ್ನಿ ಸೆಮಿಫೈನಲ್ಸ್ ನಾಳೆ
Published 17 ಜನವರಿ 2024, 14:53 IST
Last Updated 17 ಜನವರಿ 2024, 14:53 IST
ಅಕ್ಷರ ಗಾತ್ರ

ರಾಂಚಿ: ಭಾರತ ಮಹಿಳಾ ಹಾಕಿ ತಂಡಕ್ಕೆ ಈ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ಇನ್ನೊಂದು ಗೆಲುವಷ್ಟೇ ಬೇಕಿದೆ. ಗುರುವಾರ ನಡೆಯುವ ಎಫ್‌ಐಎಚ್‌ ಒಲಿಂಪಿಕ್ಸ್‌ ಹಾಕಿ ಅರ್ಹತಾ ಟೂರ್ನಿಯ ಸೆಮಿಫೈನಲ್‌ನಲ್ಲಿ ತನಗಿಂತ ಒಂದು ರ‍್ಯಾಂಕ್‌ ಮೇಲಿನ ಜರ್ಮನಿ ತಂಡವನ್ನು ಸೋಲಿಸಿದರೆ ಆತಿಥೇಯರಿಗೆ ಆ ಅವಕಾಶವಿದೆ.

ಗುಂಪು ಹಂತದಲ್ಲಿ ಅಮೆರಿಕ ಎದುರು ಮೊದಲ ಪಂದ್ಯವನ್ನು ಏಕೈಕ ಗೋಲಿನಿಂದ ಸೋತಿದ್ದ ಸವಿತಾ ಪೂನಿಯಾ ಬಳಗ ನಂತರ ಪುಟಿದೆದ್ದು ನ್ಯೂಜಿಲೆಂಡ್ ಮತ್ತು ಇಟಲಿ ತಂಡಗಳನ್ನು ಸೋಲಿಸಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿತ್ತು. ಈಗ ಅದೇ ಗೆಲುವಿನ ಲಯದ ಜೊತೆ ಸಕಾರಾತ್ಮಕ ಮನೋಭಾವದಿಂದ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಯಶಸ್ಸು ಗಳಿಸಿದಲ್ಲಿ ಪ್ಯಾರಿಸ್‌ಗೆ ಟಿಕೆಟ್‌ ಕಾದಿರಿಸಬಹುದು.

ಈ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ತಂಡಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತವೆ. ಒಂದೊಮ್ಮೆ ಭಾರತ ನಾಳೆಯ ಪಂದ್ಯದಲ್ಲಿ ಹಿನ್ನಡೆ ಕಂಡರೂ ಸೆಮಿಫೈನಲ್‌ನಲ್ಲಿ ಸೋತ ತಂಡಗಳು ನಡುವೆ ಶುಕ್ರವಾರ ನಡೆಯುವ (ಮೂರು ಮತ್ತು ನಾಲ್ಕನೇ ಸ್ಥಾನ ನಿರ್ಧಾರದ ಪಂದ್ಯದಲ್ಲಿ) ಗೆದ್ದಲ್ಲಿ ಆಗಲೂ ಅವಕಾಶ ಇರಲಿದೆ.

ಭಾರತದ ರಕ್ಷಣಾ ಆಟಗಾರ್ತಿಯರು ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಎದುರಾಳಿಗಳಿಗೆ ಸರ್ಪಗಾವಲು ಹಾಕಿದ್ದರು. ನಾಯಕಿ ಸವಿತಾ, ಉದಿತಾ, ಮೋನಿಕಾ, ನಿಕ್ಕಿ ಪ್ರಧಾನ್ ಅವರಿಂದ ತಪ್ಪು ಹೆಜ್ಜೆ ಇಡಲಿಲ್ಲ. ಮಿಡ್‌ಫೀಲ್ಡ್‌ ಕೂಡ ಸುಧಾರಿತ ಪ್ರದರ್ಶನ ನೀಡಿತ್ತು. ಸಲಿಮಾ ಟೆಟೆ, ನೇಹಾ ಗೋಯಲ್ ಕ್ರಿಯಾಶೀಲರಾಗಿದ್ದರು.

ಮುಂಚೂಣಿ ಸಾಲಿನಲ್ಲಿ ಲಾಲ್‌ರೆಮ್‌ಸಿಯಾನಿ, ಸಂಗೀತಾ ಕುಮಾರಿ, ಬ್ಯೂಟಿ ಡಂಗ್‌ಡಂಗ್‌ ಮತ್ತು ನವನೀತ್‌ ಕೌರ್ ನಿರೀಕ್ಷೆಗೆ ತಕ್ಕಂತೆ ಆಡಿದ್ದರು. ನೂರನೇ ಪಂದ್ಯ ಆಡಿದ್ದ ಉದಿತಾ ಅಪತ್ಬಾಂಧವರಾಗಿದ್ದರು. ಪೆನಾಲ್ಟಿ ಕಾರ್ನರ್‌ ಅವಕಾಶಗಳ ಪರಿವರ್ತನೆ ಭಾರತ ತಂಡಕ್ಕೆ ಮೊದಲಿನಿಂದಲೂ ಸಮಸ್ಯೆಯಾಗಿದೆ. ಜರ್ಮನಿ ಎದುರಿನ ಪಂದ್ಯದಲ್ಲಿ ಇತರ ಆಟಗಾರ್ತಿಯರಿಂದಲೂ ಸ್ಪೂರ್ತಿಯುತ ಪ್ರದರ್ಶನ ಬರಬೇಕಾಗಿದೆ.

ಜರ್ಮನಿ ತಂಡ ‘ಎ’ ಗುಂಪಿನಲ್ಲಿ ಏಳು ಪಾಯಿಂಟ್‌ ಪಡೆದು ಅಗ್ರಸ್ಥಾನ ಪಡೆದಿದೆ. ಜಪಾನ್ ಕೂಡ ಅಷ್ಟೇ ಪಾಯಿಂಟ್ಸ್ ಪಡೆದರೂ, ಗೋಲು ಸರಾಸರಿಯಲ್ಲಿ ಎರಡನೇ ಸ್ಥಾನಕ್ಕೆ ಸರಿದಿತ್ತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ಆರನೇ ಸ್ಥಾನದಲ್ಲಿದ್ದರೆ, ಜರ್ಮನಿ ಐದನೇ ಸ್ಥಾನದಲ್ಲಿದೆ. 2006ರಿಂದೀಚೆಗೆ ಜರ್ಮನಿ ವಿರುದ್ಧ ಭಾರತ ಆಡಿರುವ ಏಳು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಐದರಲ್ಲಿ ಸೋತಿದೆ. ಹೀಗಾಗಿ ಜರ್ಮನಿ ಉತ್ತಮ ಮನೋಬಲದೊಡನೆ ಕಣಕ್ಕಿಳಿಯಲಿದೆ.

‘ಜರ್ಮನಿ ತಂಡ ಪ್ರಬಲವೆಂದು ಗೊತ್ತಿದೆ. ಬೇಸಿಗೆಯಲ್ಲಿ ಮತ್ತು ಸ್ಪೇನ್‌ನಲ್ಲಿ ಇತ್ತೀಚೆಗೆ ಆ ತಂಡದ ವಿರುದ್ಧ ಆಡಿದ್ದೇವೆ. ವೈಯಕ್ತಿಕ ಶ್ರೇಷ್ಠ ಆಟಗಾರ್ತಿಯರು ಆ ತಂಡದಲ್ಲಿದ್ದಾರೆ. ಆದರೆ ನಮ್ಮ ತಂಡ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದಲ್ಲಿ ಗೆಲ್ಲಬಹುದು’ ಎಂದು ತರಬೇತುಗಾರ್ತಿ ಯಾನೆಕ್‌ ಶೋಪ್‌ಮನ್ ಹೇಳಿದರು.

ಅಮೆರಿಕ ಇನ್ನೊಂದು ಸೆಮಿಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT