ಪ್ಯಾರಿಸ್: ಪುರುಷರ 57 ಕೆ.ಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನದ ಪದಕ ಜಯಿಸಿದ ರೀ ಹಿಗುಚಿ ಅವರು ತಮ್ಮದೇ ತವರಿನಲ್ಲಿ ಮೂರು ವರ್ಷಗಳ ಹಿಂದೆ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗಿದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಣಕ್ಕಿಳಿಯುವ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ಕೇವಲ 50 ಗ್ರಾಂ ಹೆಚ್ಚು ದೇಹತೂಕ ಹೊಂದಿದ್ದರು. ಅದರಿಂದಾಗಿ ಅವರನ್ನು ಅನರ್ಹಗೊಳಿಸಲಾಗಿತ್ತು.
ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ವಿನೇಶ್ ಫೋಗಟ್ ಅವರು 100 ಗ್ರಾಂ ಹೆಚ್ಚು ದೇಹ ತೂಕ ಹೊಂದಿದ್ದ ಕಾರಣಕ್ಕೆ 50 ಕೆ.ಜಿ ಕುಸ್ತಿ ಫೈನಲ್ ಬೌಟ್ ಮುನ್ನ ಅನರ್ಹಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಹಿಗುಚಿ ಅವರು. ‘ವಿನೇಶ್ , ನಿಮ್ಮ ನೋವು ನನಗೆ ಎಲ್ಲರಿಗಿಂತ ಚೆನ್ನಾಗಿ ಅರ್ಥವಾಗುತ್ತದೆ. ನಿಮ್ಮ ಸುತ್ತಲೂ ಕೇಳಿ ಬರುತ್ತಿರುವ ಮಾತುಗಳ ಬಗ್ಗೆ ಚಿಂತಿಸಬೇಡಿ. ಇಂತಹ ಹಿನ್ನಡೆಗಳಿಂದ ಮರಳಿ ಮೇಲೆದ್ದು ನಿಂತಾಗಲೇ ಬದುಕು ಸುಂದರವಾಗುತ್ತದೆ’ ಎಂದು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ಹಿಗುಚಿ ಅವರು 2016ರಲ್ಲಿ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.