ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ : ಎರಡನೇ ಸುತ್ತಿಗೆ ಸಾತ್ವಿಕ್‌–ಚಿರಾಗ್

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ
Published 18 ಜುಲೈ 2023, 16:24 IST
Last Updated 18 ಜುಲೈ 2023, 16:24 IST
ಅಕ್ಷರ ಗಾತ್ರ

ಯೋಸು, ದಕ್ಷಿಣ ಕೊರಿಯಾ: ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಕೊರಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿತು.

ಮಂಗಳವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಜೋಡಿ 21–16, 21–14 ರಿಂದ ಥಾಯ್ಲೆಂಡ್‌ನ ಸುಪಕ್ ಜೊಮ್ಕೊ– ಕಿಟಿನುಪಾಂಗ್ ಕೆಡ್ರೆನ್ ಅವರನ್ನು ಮಣಿಸಿತು.

ಮುಂದಿನ ಸುತ್ತಿನಲ್ಲಿ ಅವರು ಚೀನಾದ ಹಿ ಜಿ ತಿಂಗ್– ಝೌ ಹಾವೊ ಡಾಂಗ್‌ ಅವರನ್ನು ಎದುರಿಸುವರು. ಕಳೆದ ತಿಂಗಳು ಇಂಡೊನೇಷ್ಯಾ ಓಪನ್‌ ಟೂರ್ನಿ ಗೆದ್ದ ಬಳಿಕ ಭಾರತದ ಜೋಡಿ ಆಡುತ್ತಿರುವ ಮೊದಲ ಟೂರ್ನಿ ಇದು.

ಎಂ.ಆರ್‌.ಅರ್ಜುನ್‌ ಮತ್ತು ಧ್ರುವ್‌ ಕಪಿಲಾ ಅವರು ಚೀನಾದ ಲಿಯು ಚೆನ್‌– ಒವು ಕ್ಸುವಾನ್ ಯಿ ವಿರುದ್ಧದ ಮೊದಲ ಸುತ್ತಿನ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದರು. ಅರ್ಜುನ್‌ ಅವರು ಬೆನ್ನುನೋವಿನಿಂದ ಬಳಲಿದ್ದು ಇದಕ್ಕೆ ಕಾರಣ. ಈ ವೇಳೆ ಭಾರತದ ಜೋಡಿ ಮೊದಲ ಗೇಮ್‌ನಲ್ಲಿ 5–6 ರಲ್ಲಿ ಹಿನ್ನಡೆಯಲ್ಲಿತ್ತು.

ಹರ್ಷಿತ್‌ ಅಗರವಾಲ್‌ ಮತ್ತು ಶಾಶ್ವತ್‌ ದಲಾಲ್‌ ಅವರು ಪುರುಷರ ಸಿಂಗಲ್ಸ್‌ ವಿಭಾಗದ ಪ್ರಧಾನ ಸುತ್ತು ಪ್ರವೇಶಿಸಲು ವಿಫಲರಾದರು. ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ ಮಲೇಷ್ಯಾದ ತಾನ್‌ ಜಿಯಾ ಜಿ ಅವರನ್ನು ಮಣಿಸಿದ ಹರ್ಷಿತ್‌, ಎರಡನೇ ಪಂದ್ಯದಲ್ಲಿ 15–21, 21–10, 10–21 ರಿಂದ ಕೊರಿಯಾದ ಚೊಯ್ ಪೆಯಾಂಗ್‌ ಎದುರು ಪರಾಭವಗೊಂಡರು.

ಶಾಶ್ವತ್‌ ಅವರು ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ 14–21, 17–21 ರಿಂದ ಕೊರಿಯಾದ ಜೆಯಾಂಗ್ ಮಿನ್ ಸೆಯೊನ್ ಕೈಯಲ್ಲಿ ಸೋತರು.

ಅತಿವೇಗದ ಸ್ಮ್ಯಾಷ್:

ಸಾತ್ವಿಕ್‌ ದಾಖಲೆ ಸೊಕಾ ಜಪಾನ್ (ಪಿಟಿಐ): ಭಾರತದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಬ್ಯಾಡ್ಮಿಂಟನ್‌ನಲ್ಲಿ ಪುರುಷರ ವಿಭಾಗದಲ್ಲಿ ಅತಿವೇಗದ ಸ್ಮ್ಯಾಷ್‌ ಹೊಡೆದು ಗಿನ್ನೆಸ್‌ ದಾಖಲೆ ಮಾಡಿದ್ದು 10 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ. ಸಾತ್ವಿಕ್‌ ಅವರು ಸಿಡಿಸಿದ ಸ್ಮ್ಯಾಷ್‌ನಲ್ಲಿ ಶಟಲ್‌ಕಾಕ್ ಗಂಟೆಗೆ 565 ಕಿ.ಮೀ. ವೇಗದಲ್ಲಿ ಸಾಗಿದೆ. ಮಲೇಷ್ಯಾದ ಆಟಗಾರ ತಾನ್‌ ಬೂನ್ ಹೆಯೊಂಗ್‌ ಅವರು 2013 ರಲ್ಲಿ ಗಂಟೆಗೆ 493 ಕಿ.ಮೀ. ವೇಗದಲ್ಲಿ ಸ್ಮ್ಯಾಷ್‌ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಮಹಿಳೆಯರ ವಿಭಾಗದಲ್ಲಿ ಮಲೇಷ್ಯಾದ ತಾನ್‌ ಪರ್ಲ್ (ಗಂಟೆಗೆ 438 ಕಿ.ಮೀ ವೇಗ) ಅವರು ಹೊಸ ದಾಖಲೆ ಮಾಡಿದ್ದಾರೆ. ಪ್ರಮುಖ ಕ್ರೀಡಾ ಪರಿಕರಗಳ ಉತ್ಪಾದನಾ ಸಂಸ್ಥೆ ಜಪಾನ್‌ನ ಯೋನೆಕ್ಸ್‌ ಕಂಪನಿಯು ವೇಗದ ಸ್ಮ್ಯಾಷ್‌ ದಾಖಲಿಸಲು ನಡೆಸಿದ ಪ್ರದರ್ಶನ ಕೂಟದಲ್ಲಿ ಸಾತ್ವಿಕ್‌ ಅವರ ಸಾಧನೆ ಮೂಡಿಬಂದಿದೆ. ಜಪಾನ್‌ನ ಸೊಕಾದಲ್ಲಿರುವ ಯೋನೆಕ್ಸ್ ಜಿಮ್ನಾಶಿಯಂನಲ್ಲಿ ಇದೇ ವರ್ಷ ಏಪ್ರಿಲ್‌ 14 ರಂದು ಕೂಟ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT