ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌– ಚಿರಾಗ್‌ ಜೋಡಿಗೆ ಆಘಾತ

Published 15 ಮಾರ್ಚ್ 2024, 13:50 IST
Last Updated 15 ಮಾರ್ಚ್ 2024, 13:50 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ವಿಶ್ವದ ಅಗ್ರಮಾನ್ಯ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಗುರುವಾರ ತಡರಾತ್ರಿ ನಡೆದ ಪುರುಷರ ಡಬಲ್ಸ್‌ನ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಸಾತ್ವಿಕ್‌– ಚಿರಾಗ್‌ ಜೋಡಿಯು 16-21, 15-21 ರಲ್ಲಿ ಮೂರನೇ ಶ್ರೇಯಾಂಕದ ಮೊಹಮ್ಮದ್ ಶೋಹಿಬುಲ್ ಫಿಕ್ರಿ ಮತ್ತು ಬಗಾಸ್ ಮೌಲಾನಾ ಅವರಿಗೆ ನೇರ ಗೇಮ್‌ಗಳಿಂದ ತಲೆಬಾಗಿತು.

ಕಳೆದ ವಾರ ಫ್ರೆಂಚ್‌ ಓಪನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಭಾರತದ ಜೋಡಿಯು ಇಲ್ಲೂ ಯಶಸ್ಸಿನ ಓಟ ಮುಂದುವರಿಸಬಹುದೆಂಬ  ನಿರೀಕ್ಷೆಗಳಿದ್ದವು. ಮೊದಲ ಸುತ್ತಿನಲ್ಲಿ ಸಾತ್ವಿಕ್‌– ಚಿರಾಗ್‌ ಅವರು 21–18, 21–14 ರಿಂದ ಇಂಡೊನೇಷ್ಯಾದ ಹೆಂಡ್ರಾ ಸೆಟಿವಾನ್ ಮತ್ತು ಮೊಹಮ್ಮದ್ ಅಹ್ಸನ್ ಅವರನ್ನು ಮಣಿಸಿ ಶುಭಾರಂಭ ಮಾಡಿದ್ದರು. ಆದರೆ, 16ರ ಘಟ್ಟದ ಪಂದ್ಯದಲ್ಲಿ ಅದೇ ದೇಶದ ಜೋಡಿಯ ವಿರುದ್ಧ ಲಯ ಕಂಡುಕೊಳ್ಳಲು ವಿಫಲವಾದರು.

ಮಹಿಳೆಯರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರೂ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಮೂರು ಗೇಮ್‌ಗಳ ಹೋರಾಟದಲ್ಲಿ ಪರಾಭವಗೊಂಡರು. ಅವರು 21-11, 11-21, 11-21ರಿಂದ ಚೀನಾದ ಜಾಂಗ್ ಶು ಷಿಯಾನ್ ಮತ್ತು ಜೆಂಗ್ ಯು ಅವರಿಗೆ ಶರಣಾದರು. ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದ ಭಾರತದ ಆಟಗಾರ್ತಿಯರು ನಂತರ ಎಡವಿದರು.

ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಭರವಸೆ ಲಕ್ಷ್ಯ ಸೇನ್‌ ಅವರು ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಹಂತ ತಲುಪಿದ್ದು, ಅವರು ಮುಂದಿನ ಪಂದ್ಯದಲ್ಲಿ 2021ರ ಚಾಂಪಿಯನ್‌, ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸುವರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ ಸೇನ್‌ ಅವರು ಪ್ರಿ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ವಿಶ್ವದ 3ನೇ ಕ್ರಮಾಂಕದ ಆಟಗಾರ ಆಂಡರ್ಸ್ ಆಂಟನ್ಸೆನ್ ಅವರಿಗೆ ಆಘಾತ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT