ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿ: ಸೆಮಿಫೈನಲ್‌ಗೆ ಸಿಂಧು, ಪ್ರಣಯ್‌

ಶ್ರೀಕಾಂತ್ ಪರಾಭವ
Published 26 ಮೇ 2023, 14:02 IST
Last Updated 26 ಮೇ 2023, 14:02 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಎದುರಾಳಿಗಳ ವಿರುದ್ಧ ತೀವ್ರ ಹೋರಾಟದಲ್ಲಿ ಗೆದ್ದ ಭಾರತ ಪಿ.ವಿ.ಸಿಂಧು ಮತ್ತು ಎಚ್‌. ಎಸ್‌. ಪ್ರಣಯ್ ಅವರು ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ಸೆಮಿಫೈನಲ್‌ ಪ್ರವೇಶಿಸಿದರು. ಆದರೆ ಕಿದಂಬಿ ಶ್ರೀಕಾಂತ್ ಅವರ ಅಭಿಯಾನ ಅಂತ್ಯವಾಯಿತು.

ಆರನೇ ಶ್ರೇಯಾಂಕದ ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ 21-16, 13-21, 22-20ರಿಂದ ತನಗಿಂತ ಕೆಳ ರ‍್ಯಾಂಕಿನ ಯಿ ಮಾನ್ ಜಾಂಗ್ ಅವರನ್ನು ಮಣಿಸಿದರು. 

ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ್ತಿಗೆ ಏಳನೇ ಶ್ರೇಯಾಂಕದ ಆಟಗಾರ್ತಿ, ಇಂಡೊನೇಷ್ಯಾದ ಗ್ರೆಗರಿಯಾ ಮರಿಸ್ಕಾ ತನ್‌ಜುಂಗ್‌ ಸವಾಲು ಎದುರಾಗಿದೆ.

ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಣಯ್‌ ಅವರಿಗೆ 25-23, 18-21, 21-13ರಿಂದ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ ಜಯ ಒಲಿಯಿತು.

ಪ್ರಣಯ್‌ ನಾಲ್ಕರ ಘಟ್ಟದಲ್ಲಿ ಇಂಡೊನೇಷ್ಯಾದ ಕ್ರಿಸ್ಟಿಯನ್ ಆದಿನಾಥ ವಿರುದ್ಧ ಆಡುವರು.

ಜಿದ್ದಾಜಿದ್ದಿ ಹಣಾಹಣಿ ಗೆದ್ದ ಸಿಂಧು: ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಸಿಂಧು ಅವರು 18ನೇ ಕ್ರಮಾಂಕದಲ್ಲಿರುವ ಜಾಂಗ್‌ ವಿರುದ್ಧ ಗೆಲುವಿಗೆ ಬೆವರು ಹರಿಸಬೇಕಾಯಿತು. ಈ ಜಯದ ಮೂಲಕ ಕಳೆದ ವರ್ಷ ಆಲ್‌ ಇಂಗ್ಲೆಂಡ್‌ ಓಪನ್ ಟೂರ್ನಿಯ 32ರ ಸುತ್ತಿನಲ್ಲಿ ಅನುಭವಿಸಿದ ಸೋಲಿಗೆ ಅವರು ಮುಯ್ಯಿ ತೀರಿಸಿಕೊಂಡರು.

ಮೊದಲ ಗೇಮ್‌ನ ಆರಂಭದಲ್ಲಿ 0–5ರಿಂದ ಹಿನ್ನಡೆಯಲ್ಲಿದ್ದ ಸಿಂಧು, ಚೇತರಿಸಿಕೊಂಡು ಸ್ಕೋರ್‌ಅನ್ನು 10–10ಕ್ಕೆ ಸಮಬಲಗೊಳಿಸಿದರು. ಆ ಬಳಿಕ ಭಾರತದ ಆಟಗಾರ್ತಿ ತಿರುಗಿ ನೋಡಲಿಲ್ಲ. ಅದೇ ಲಯದೊಂದಿಗೆ ಗೇಮ್ ಕೈವಶ ಮಾಡಿಕೊಂಡರು.

ಎರಡನೇ ಗೇಮ್‌ನಲ್ಲಿ ಚೀನಾ ಆಟಗಾರ್ತಿ ಪುಟಿದೆದ್ದರು. ಆರಂಭದಲ್ಲಿ ಸ್ಕೋರ್‌ 2–2ರಿಂದ ಸಮನಾಗಿತ್ತು. ಆದರೆ ಬಳಿಕದ ಆಟದಲ್ಲಿ ಜಾಂಗ್ ಪಾರಮ್ಯ ಮೆರೆದರು.

ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಪೈಪೋಟಿ ಇನ್ನಷ್ಟು ಹೆಚ್ಚಿತು. 12ನೇ ಗೇಮ್‌ವರೆಗೆ ಇಬ್ಬರ ಮಧ್ಯೆ ಸಮಬಲದ ಆಟ ನಡೆಯಿತು. ಎರಡಕ್ಕಿಂತ ಹೆಚ್ಚು ಪಾಯಿಂಟ್‌ ಮುನ್ನಡೆಯನ್ನು ಇಬ್ಬರೂ ಬಿಟ್ಟುಕೊಡಲಿಲ್ಲ. ಒಂದು ಹಂತದಲ್ಲಿ 17–17ರಿಂದ ಗೇಮ್‌ ಸಮವಾಯಿತು. 

ಬಳಿಕ ಸತತ ಮೂರು ಪಾಯಿಂಟ್ಸ್ ಗಳಿಸಿದ ಸಿಂಧು 20–17ಕ್ಕೆ ಮುನ್ನಡೆದರು. ನಂತರ ಜಾಂಗ್‌ ಕೂಡ ಮೂರು ಪಾಯಿಂಟ್ಸ್ ಕಲೆಹಾಕಿದರು. ಕೊನೆಯಲ್ಲಿ ಒತ್ತಡವನ್ನು ಮೀರಿನಿಂತ ಭಾರತದ ಆಟಗಾರ್ತಿ ಸತತ ಎರಡು ಪಾಯಿಂಟ್ಸ್ ಗಳಿಸಿ ಗೆಲುವಿನ ನಿಟ್ಟುಸಿರು ಬಿಟ್ಟರು.

ನಿಶಿಮೊಟೊ ಎದುರಿನ ಪಂದ್ಯದಲ್ಲಿ ಪ್ರಣಯ್ ಕೂಡ ತೀವ್ರ ಸೆಣಸಾಟ ನಡೆಸಿದರು. ಮೊದಲ ಗೇಮ್‌ 25–23ರಿಂದ ಗೆದ್ದ ಅವರು, ಎರಡನೇ ಗೇಮ್‌ಅನ್ನು ಕೈಚೆಲ್ಲಿದರು. ಆದರೆ ಮೂರನೇ ಗೇಮ್‌ನಲ್ಲಿ ಸಂಪೂರ್ಣ ಪಾರಮ್ಯ ಭಾರತದ ಆಟಗಾರನದಾಯಿತು.

ಸಿಂಗಲ್ಸ್ ವಿಭಾಗದ ಮತ್ತೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ 21-16, 16-21, 11-21ರಿಂದ ಆದಿನಾಥ ಎದುರು ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT