ಸಿಡ್ನಿ: ಭಾರತದ ಆಟಗಾರರಲ್ಲಿ ಅಷ್ಟೇನೂ ಪ್ರಮುಖರಲ್ಲದ ಮಿಥುನ್ ಮಂಜುನಾಥ್, ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಕೀನ್ ಯೆ ಲೊ ಅವರನ್ನು ಬಧವಾರ ನೇರ ಗೇಮ್‌ಗಳಲ್ಲಿ ಪರಾಭವಗೊಳಿಸಿ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಅಚ್ಚರಿ ಮೂಡಿಸಿದರು.
ಭಾರತದ ಪಿ.ವಿ.ಸಿಂಧು, ಎಚ್.ಎಸ್.ಪ್ರಣಯ್ ಮತ್ತು ಕಿದಂಬಿ ಶ್ರೀಕಾತ್ ಅವರೂ ಎರಡನೇ ಸುತ್ತಿಗೆ ಮುನ್ನಡೆದರು.
ಪುರುಷರ ಸಿಂಗಲ್ಸ್‌ನಲ್ಲಿ, ವಿಶ್ವ ಕ್ರಮಾಂಕದಲ್ಲಿ 50ನೇ ಸ್ಥಾನದಲ್ಲಿರುವ ಮಂಜುನಾಥ್ 21–19, 21–19ರಲ್ಲಿ ಲೊ ಅವರನ್ನು ಮುಕ್ಕಾಲು ಗಂಟೆಯೊಳಗೆ ನಿಮಿಷಗಳಲ್ಲಿ ಸೋಲಿಸಿದರು. ಅವರು ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಎದುರಿಸುವರು. ಲೀ ಝಿ ಇನ್ನೊಂದು ಪಂದ್ಯದಲ್ಲಿ ಸ್ವದೇಶದ ಲಿಯಾಂಗ್ ಜುನ್ ಹಾವೊ ಅವರನ್ನು 12–21, 21–17, 21–6 ರಿಂದ ಹಿಮ್ಮೆಟ್ಟಿಸಿದರು.
ಇನ್ನೊಂದೆಡೆ, ಲಕ್ಷ್ಯ ಸೇನ್ ಗಾಯಾಳಾದ ಕಾರಣ ಸ್ವದೇಶದ ಕಿರಣ್ ಜಾರ್ಜ್ ಎದುರಿನ ಪಂದ್ಯವನ್ನು ಮೊದಲ ಗೇಮ್‌ನಲ್ಲೇ ಬಿಟ್ಟುಕೊಟ್ಟರು. ಆಗ ಜಾರ್ಜ್ 5–0 ಯಿಂದ ಮುಂದಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನಲ್ಲಿ ಸ್ವದೇಶದ ಅಶ್ಮಿತಾ ಚಲಿಹಾ ವಿರುದ್ಧ 21–18, 21–13 ರಲ್ಲಿ ಜಯಗಳಿಸಲು ಕೇವಲ 36 ನಿಮಿಷ ತೆಗೆದುಕೊಂಡರು. ಸಿಂಧು ಈ ಋತುವಿನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಏಳು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಈಗ ಹೊಸ ಕೋಚ್ ಮುಹಮ್ಮದ್ ಹಫೀಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಭಾರತದ ಕಿದಂಬಿ ಶ್ರೀಕಾಂತ್ 21–18, 21–17 ರಲ್ಲಿ ಕೆಂಟಾ ನಿಶಿಮೊಟೊ (ಜಪಾನ್) ಅವರನ್ನು, ಆರನೇ ಶ್ರೇಯಾಂಕದ ಎಚ್.ಎಸ್. ಪ್ರಣಯ್ 21–18, 16–21, 21–15 ರಿಂದ ಚಿಯುಕ್ ಯು ಲೀ (ಹಾಂಗ್‌ಕಾಂಗ್) ಅವರನ್ನು ಮಣಿಸಿದರು.
ಉದಯೋನ್ಮುಖ ಆಟಗಾರ ಪ್ರಿಯಾಂಶು ರಾಜಾವತ್ ಕೂಡ ಯಶಸ್ಸು ಕಂಡರು. ಅವರು ಆಸ್ಟ್ರೇಲಿಯಾದ ನಥಾನ್ ಟಾಂಗ್ ಅವರನ್ನು 21–12, 21–16 ರಿಂದ ಸೋಲಿಸಿದರು.
ಮಹಿಳೆಯರ ವಿಭಾಗದಲ್ಲಿ ಆಕರ್ಷಿ ಕಶ್ಯಪ್ 21–15, 21–17 ರಿಂದ ಮಲೇಷ್ಯಾದ ಜಿನ್ ವಿ ಗೊಹ್ ಅವರನ್ನು ಹಿಮ್ಮೆಟ್ಟಿಸಿದರೆ, ಮಾಳವಿಕಾ ಬನ್ಸೋಡ್ ಹೊರಬಿದ್ದರು. ಚೀನಾ ತೈಪೆಯ ಯು ಪೊ ಪೈ 22–20, 21–11 ರಿಂದ ಮಾಳವಿಕಾ ಅವರನ್ನು ಮಣಿಸಿದರು.
ಪುರುಷರ ಮಿಕ್ಸೆಡ್ ಡಬಲ್ಸ್‌ನಲ್ಲಿ ರೋಹನ್ ಕಪೂರ್– ಸಿಕ್ಕಿ ರೆಡ್ಡಿ ಜೋಡಿ ಮೊದಲ ಸುತ್ತಿನಲ್ಲೇ ಹೊರಬಿತ್ತು. ಈ ಜೋಡಿ 14–21, 18–21ರಲ್ಲಿ ವಿಶ್ವದ ಐದನೇ ಕ್ರಮಾಂಕದ ಸಿಯುಂಗ್ ಜೆ ಸಿಯೊ– ಯು ಜಂಗ್ ಚೇ (ದಕ್ಷಿಣ ಕೊರಿಯಾ) ಎದುರು ಸೋಲನುಭವಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.