ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡ್‌ ಆಡ್ತಾ ಪ್ರೀತಿ...

Last Updated 30 ಸೆಪ್ಟೆಂಬರ್ 2018, 19:45 IST
ಅಕ್ಷರ ಗಾತ್ರ

ಹೋದ ಒಂದು ವಾರದಲ್ಲಿ ಕ್ರೀಡಾ ಲೋಕದ ಮೂರು ತಾರಾ ಜೋಡಿಗಳ ಸುತ್ತಲೇ ಸಾಮಾಜಿಕ ಜಾಲತಾಣಗಳು ಗಿರಕಿ ಹೊಡೆದವು. ಆದರೆ ಆ ಮೂರು ಜೋಡಿಗಳು ತಮ್ಮ ಆಟದಲ್ಲಿ ಮಾಡಿದ ಸಾಧನೆಗಾಗಿ ಚರ್ಚೆಗೆ ಗ್ರಾಸವಾಗಿರಲಿಲ್ಲ. ತಮ್ಮ ವೈಯಕ್ತಿಕ ಜೀವನದ ಮಹತ್ವದ ಸಂದರ್ಭಗಳಿಗಾಗಿ ಸುದ್ದಿಯಾಗಿದ್ದರು.

ಟೆನಿಸ್ ತಾರೆ ಸಾನಿಯಾ ಮಿರ್ಜಾ–ಶೋಯಬ್ ಮಲಿಕ್, ಕ್ರಿಕೆಟಿಗ ವಿರಾಟ್ ಕೊಹ್ಲಿ–ಅನುಷ್ಕಾ ಶರ್ಮಾ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ –ಪರುಪಳ್ಳಿ ಕಶ್ಯಪ್ ಅವರೇ ಆ ಮೂರು ಜೋಡಿಗಳು. ಭಾರತೀಯ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಗಳೇ ಪ್ರೀತಿ, ಪ್ರೇಮದ ವಿಷಯದಲ್ಲಿ ಸಾಕಷ್ಟು ಕಷ್ಟ ನಷ್ಟ ಅನುಭವಿಸುವುದು ಸಹಜ. ಆದರೆ ಲಕ್ಷಾಂತರ ಅಭಿಮಾನಿಗಳ ಕಣ್ಮಣಿಯಾಗಿರುವ ಇಂತಹ ತಾರೆಗಳಿಗೆ ಅದೆಷ್ಟು ಕಷ್ಟ ಇರಬಹುದು ಅಲ್ಲವೇ?

ಒಂದು ಕಡೆ ತಮ್ಮ ತಾರಾಮೌಲ್ಯ ಇಳಿಮುಖವಾಗದಂತೆ ಆಟದಲ್ಲಿ ಸಾಧನೆಯನ್ನು ನಿರಂತರ ಕಾಪಾಡಿಕೊಳ್ಳುವ ಸವಾಲು,ಇನ್ನೊಂದು ಕಡೆ ವೈಯಕ್ತಿಕ ಬದುಕನ್ನು ಬಹಿರಂಗಗೊಳಿಸಿ ಜನರ ಮಾತಿಗೆ ಗ್ರಾಸವಾಗದಂತೆ ಎಚ್ಚರಿಕೆ ವಹಿಸುವ ಒತ್ತಡ. ಇದೆಲ್ಲದರ ನಡುವೆ ದೇಶಕ್ಕಾಗಿ ಪದಕ, ಪ್ರಶಸ್ತಿ ಗೆದ್ದು ತರುವ ಮಹತ್ವಾಕಾಂಕ್ಷೆ. ಎಡವಿ ಬಿದ್ದಾಗ ಟೀಕೆಗಳನ್ನು ಎದುರಿಸಬೇಕಾದ ಸಂಕಷ್ಟ. ಈ ಎಲ್ಲವನ್ನೂ ಮೀರಿ ನಿಂತವರು ಈ ಮೂರು ಜೋಡಿಗಳು.

ಹೋದ ವಾರ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆಯುವ ಮುನ್ನಾದಿನ ಟ್ವಿಟರ್‌ನಲ್ಲಿ ಒಂದಿಷ್ಟು ಪ್ರಶ್ನೆಗಳು ಹರಿದಾಡಿದವು. ‘ಸಾನಿಯಾ ಮಿರ್ಜಾ ಈಗ ಯಾರನ್ನು ಬೆಂಬಲಿಸುತ್ತಾರೆ. ತಮ್ಮ ದೇಶವನ್ನೋ (ಭಾರತ) ಅಥವಾ ಪತಿಯನ್ನೋ (ಶೋಯಬ್ ಮಲಿಕ್–ಪಾಕ್ ಕ್ರಿಕೆಟಿಗ)’ ಎಂಬ ಪ್ರಶ್ನೆಗಳು ಅವಾಗಿದ್ದವು. ಆದರೆ ಈ ಪ್ರಶ್ನೆಗಳಿಗೆ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಾನಿಯಾಗೆ ಇದೇನೂ ಹೊಸದಲ್ಲ. ಪಾಕ್ ಕ್ರಿಕೆಟಿಗ ಶೋಯಬ್ ಜೊತೆ ಮದುವೆಯಾದಾಗಿನಿಂದಲೂ ಒಂದಿಲ್ಲ ಒಂದು ಟೀಕೆಗೆ ಅವರು ಗುರಿಯಾಗುತ್ತಲೇ ಇದ್ದಾರೆ. ಆದರೆ ಅವರು ತಮ್ಮ ಮದುವೆಯ ನಂತರ ಭಾರತದ ಪರ ಟೆನಿಸ್ ಆಡಿ ಗೆದ್ದ ಪ್ರಶಸ್ತಿಗಳು ಒಂದೆರಡಲ್ಲ. ಶೋಯಬ್ ಕೂಡ ತಮ್ಮ ದೇಶದ ತಂಡಕ್ಕಾಗಿ ಆಡಿ ಸಾಧನೆ ಮಾಡುತ್ತಲೇ ಇದ್ದಾರೆ. ಆದರೆ ಅವರಿಬ್ಬರೂ ದುಬೈನಲ್ಲಿ ಮನೆ ಮಾಡಿಕೊಂಡು, ತಟಸ್ಥ ಸ್ಥಳದಲ್ಲಿ ತಮ್ಮ ಪ್ರೀತಿಗೆ ನೀರೆರೆಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆಯೂ ತಮ್ಮ ಬದ್ಧತೆ, ಸಾಧನೆಗಳ ಮೇಲಿನ ಏಕಾಗ್ರತೆಯನ್ನು ಕಾಪಾಡಿಕೊಂಡಿರುವುದು ಯುವ ಆಟಗಾರರಿಗೆ ಪಾಠವೇ ಸರಿ.

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ವಿರಾಟ್ ಮುನ್ನಡೆಸುತ್ತಿಲ್ಲ.ವಿಶ್ರಾಂತಿ ಪಡೆದಿರುವ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ರಿಲ್ಯಾಕ್ಸ್‌ ಮೂಡ್‌ನಲ್ಲಿ ಓಡಾಡುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದ ತಂಡವು ಚೆನ್ನಾಗಿಯೇ ಆಡುತ್ತಿದ್ದರೂ ಕೆಲವರು ವಿರಾಟ್ ಬಗ್ಗೆ ಗೊಣಗಿದ್ದು ಇದೆ. ಅದಕ್ಕೆಲ್ಲ ಉತ್ತರವನ್ನು ವಿರಾಟ್ ನೀಡಿದ್ದಾರೆ

‘ನನ್ನ ಜೀವನದಲ್ಲಿ ಮಹತ್ತರ ಬದಲಾವಣೆ ತಂದ ಶ್ರೇಯ ಅನುಷ್ಕಾಗೆ ಸಲ್ಲಬೇಕು. ಆಕೆಯ ಪ್ರೀತಿಯಲ್ಲಿ ನಾನು ಬದಲಾದೆ. ಮತ್ತಷ್ಟು ಸಾಧನೆಗಳನ್ನು ಮಾಡುತ್ತಿದ್ದೇನೆ’ ಎಂದು ಅವರು ಮಾಡಿರುವ ಟ್ವೀಟ್‌ ಪ್ರೀತಿಯಲ್ಲಿ ಇರುವ ಶಕ್ತಿಯನ್ನು ತೋರಿಸುತ್ತದೆ.

ಸೈನಾ–ಕಶ್ಯಪ್ ಪ್ರೇಮ: ಡಿಸೆಂಬರ್‌ನಲ್ಲಿ ಸೈನಾ ನೆಹ್ವಾಲ್ ಮತ್ತು ಪಿ. ಕಶ್ಯಪ್ ಅವರು ವಿವಾಹವಾಗಲಿರುವ ಸುದ್ದಿಯು ಅವರ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯು ತಮ್ಮ ವೃತ್ತಿ ಮತ್ತು ಸಾಧನೆಯ ಹಾದಿಯಲ್ಲಿ ಒಂಚೂರು ಎಡವಿರಲಿಲ್ಲ. ಆದರೆ ಪ್ರೀತಿಯೇ ಅವರಿಬ್ಬರ ಬೆಳವಣಿಗೆಯ ಶಕ್ತಿ ಆಗಿದ್ದು ಹೌದು. ಸೈನಾ ಒಲಿಂಪಿಕ್ ಪದಕ ಗೆದ್ದಿದ್ದು, ಮಹತ್ವದ ಟೂರ್ನಿಗಳಲ್ಲಿ ಪ್ರಶಸ್ತಿ ಸಾಧನೆ ಮಾಡಿದ್ದು, ಗಾಯವನ್ನು ಗೆದ್ದಿದ್ದು ಇದೇ ಅವಧಿಯಲ್ಲಿ. ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಇಬ್ಬರ ಕೌಟುಂಬಿಕ ಹಿನ್ನೆಲೆಯೂ ವಿಭಿನ್ನ. ಕಶ್ಯಪ್ ಗುಂಟೂರಿನವರು, ಸೈನಾ ಹರಿಯಾಣದ ಹಿಸ್ಸಾರ್‌ನವರು. ಆದರೆ ಅವರಿಬ್ಬರನ್ನು ಒಂದೇ ಸೂರಿನಡಿಗೆ ತಂದಿದ್ದು ಬ್ಯಾಡ್ಮಿಂಟನ್.

‘ಬಹಳ ವರ್ಷಗಳಿಂದ ಅವರಿಬ್ಬರೂ ಪ್ರೀತಿಸುವುದು ನಮಗೆ ಗೊತ್ತಿತ್ತು. ಆದರೆ ಸೈನಾ ಅವರು ತಮ್ಮ ಆಟದ ಕುರಿತ ಬದ್ಧತೆಯಲ್ಲಿ ಯಾವುದೇ ಲೋಪ ಮಾಡಿರಲಿಲ್ಲ. ಮದುವೆಯ ನಂತರವೂ ಅವರು ದೇಶಕ್ಕಾಗಿ ಸಾಧನೆ ಮಾಡುವುದನ್ನು ಮುಂದುವರಿಸುವ ವಿಶ್ವಾಸ ಇದೆ’ ಎಂದು ಹಿರಿಯ ಕೋಚ್ ವಿಮಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಸೈನಾ ಅವರ ಬಗ್ಗೆ ಬ್ಯಾಡ್ಮಿಂಟನ್ ವಲಯದಲ್ಲಿ ಇರುವ ವಿಶ್ವಾಸವನ್ನು ತೋರಿಸುತ್ತದೆ.

ಕ್ರೀಡಾ ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಸಚಿನ್ ತೆಂಡೂಲ್ಕರ್– ಅಂಜಲಿ, ಯುವರಾಜ್ ಸಿಂಗ್– ಹೇಜಲ್ ಕೀಚ್‌, ಒಲಿಂಪಿಯನ್ ಸಾಕ್ಷಿ ಮಲಿಕ್ ಮತ್ತು ಸತ್ಯವ್ರತ್ ಕಡಿಯಾನ್ ಅವರ ಕಥೆಯೂ ಹೀಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT