ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಹ್ಯಾಟ್ರಿಕ್‌ ಸೋಲು

ಐದು ಟೆಸ್ಟ್‌ ಪಂದ್ಯಗಳ ಸರಣಿ
Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಪರ್ತ್‌: ಭಾರತ ಪುರುಷರ ಹಾಕಿ ತಂಡ ಮೊದಲೆರಡು ಪಂದ್ಯಕ್ಕಿಂತ ಸುಧಾರಿತ ಪ್ರದರ್ಶನದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆದ ಮೂರನೇ ಹಾಕಿ ಟೆಸ್ಟ್‌ ಪಂದ್ಯದಲ್ಲಿ 1–2 ಗೋಲುಗಳಿಂದ ಪರಾಭವಗೊಂಡಿತು.

ಮೊದಲ ಎರಡು ಟೆಸ್ಟ್‌ಗಳಲ್ಲಿ ಕ್ರಮವಾಗಿ 1-5 ಮತ್ತು 2-4 ರಿಂದ ಸೋತಿದ್ದ ಭಾರತ ತಂಡವು, ರಕ್ಷಣಾ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಹ್ಯಾಟ್ರಿಕ್‌ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆತಿಥೇಯರು 3–0ಯಿಂದ ಮೇಲುಗೈ ಸಾಧಿಸಿದ್ದಾರೆ. ಶುಕ್ರವಾರ ಇಲ್ಲಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ.

ಪಂದ್ಯದ ನಾಲ್ಕನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ ರೂಪದಲ್ಲಿ ಆತಿಥೇಯರಿಗೆ ಮುನ್ನಡೆ ಗಳಿಸುವ ಅವಕಾಶ ಇತ್ತಾದರೂ ಭಾರತದ ಅನುಭವಿ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್‌ ಆಕರ್ಷಕ ಡೈವಿಂಗ್‌ ಮೂಲಕ ತಡೆದರು. ಅದಾದ ಐದನೇ ನಿಮಿಷದಲ್ಲಿ ಆಸ್ಟ್ರೇಲಿಯಾವು ಮೂರು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದುಕೊಂಡಿತು. ಆದರೆ, ಅವುಗಳನ್ನು ಶ್ರೀಜೇಶ್‌ ತಡೆಯುವ ಮೂಲಕ ಪರಾಕ್ರಮ ತೋರಿದರು. ಈ ಮಧ್ಯೆ ಭಾರತ ತಂಡದ ನಾಯಕ ಹರ್ಮನ್‌ ಪ್ರೀತ್‌ ಸಿಂಗ್ ಅವರಿಗೆ ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತಾದರೂ ಅವರನ್ನು ಗುರಿ ಸೇರಿಸುವಲ್ಲಿ ಅವರು ವಿಫಲವಾದರು.

ಮೊದಲ ಮತ್ತು ಎರಡನೇ ಕ್ವಾರ್ಟರ್‌ನಲ್ಲಿ ಪ್ರಬಲ ಎದುರಾಳಿಗಳ ವಿರುದ್ಧ ಭಾರತದ ಆಟಗಾರರು ಸರಿಸಮನಾಗಿ ಪ್ರದರ್ಶನ ತೋರಿದರು. ಗೋಲ್‌ಕೀಪರ್‌ಗಳಾದ ಶ್ರೀಜೇಶ್ ಮತ್ತು ಕ್ರಿಶನ್ ಬಹದ್ದೂರ್ ಪಾಠಕ್ ವೀರಾವೇಶ ತೋರಿದರು. ಹೀಗಾಗಿ, ಮೊದಲಾರ್ಧದಲ್ಲಿ ಯಾವುದೇ ತಂಡಗಳಿಂದ ಗೋಲು ದಾಖಲಾಗಿಲ್ಲ.

ಹಿಂದಿನ ಪಂದ್ಯದಲ್ಲೂ ಭಾರತ ಪರ ಮಿಂಚಿದ್ದ ಜುಗರಾಜ್ ಸಿಂಗ್ ಅವರು 41ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಸಿಕ್ಕ ಅವಕಾಶವನ್ನು ಪರಿವರ್ತಿಸಿ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ, ಅದಾದ ಮೂರೇ ನಿಮಿಷದಲ್ಲಿ ಆಸ್ಟ್ರೇಲಿಯಾ ತಂಡದ ಜೆರೆಮಿ ಹೇವಾರ್ಡ್‌ (44ನೇ ನಿಮಿಷ) ಗೋಲು ದಾಖಲಿಸಿ ತಂಡಗಳ ಸ್ಕೋರ್‌ ಸಮಗೊಳಿಸಿದರು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಜೆರೆಮಿ ಮತ್ತೆ ಚೆಂಡನ್ನು ಗುರಿ ಸೇರಿಸಿ ಆತಿಥೇಯ ತಂಡಕ್ಕೆ ಮುನ್ನಡೆ ಒದಗಿಸಿದರು. ಈ ಹಿಂದಿನ ಪಂದ್ಯದಲ್ಲೂ ಎರಡು ಗೋಲು ದಾಖಲಿಸಿದ್ದ ಅವರು ಇಲ್ಲೂ ಗೆಲುವಿನ ರೂವಾರಿಯಾದರು.

ಪಂದ್ಯದಲ್ಲಿ ಆಸ್ಟ್ರೇಲಿಯಾವು ಒಟ್ಟು 12ನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆದುಕೊಂಡಿತು. ಆದರೆ, ಎರಡು ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು. ಭಾರತವು ಕೆಲವು ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಕೈಚೆಲ್ಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT