ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧನ್ಯವಾದಗಳು ಶ್ರೀಜೇಶ್‌: ಹಾಕಿ ದಿಗ್ಗಜನಿಗೆ ಮೋದಿ ಪತ್ರ

Published : 11 ಸೆಪ್ಟೆಂಬರ್ 2024, 13:56 IST
Last Updated : 11 ಸೆಪ್ಟೆಂಬರ್ 2024, 13:56 IST
ಫಾಲೋ ಮಾಡಿ
Comments

ನವದೆಹಲಿ: ಹೋದ ತಿಂಗಳು ಹಾಕಿಗೆ ವಿದಾಯ ಹೇಳಿದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಶ್ ಅವರು ಈ ಆಟಕ್ಕೆ ನೀಡಿರುವ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ರಾಷ್ಟ್ರೀಯ ಜೂನಿಯರ್ ತಂಡದ ಕೋಚ್‌ ಆಗಿಯೂ ಅವರು ಪರಿಣಾಮಕಾರಿಯಾಗಿ ಸಾಮರ್ಥ್ಯ ತೋರುವರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಇತ್ತೀಚೆಗೆ ಬರೆದಿರುವ ಪತ್ರವನ್ನು ಶ್ರೀಜೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ ವೇಳೆ, ಕೇರಳದ ಈ ಹಿರಿಯ ಆಟಗಾರ 15 ವರ್ಷಗಳ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದರು. ಫ್ರಾನ್ಸ್‌ ರಾಜಧಾನಿಯಲ್ಲಿ ಭಾರತ ಸತತ ಎರಡನೇ ಸಲ ಕಂಚಿನ ಪದಕ ಗೆದ್ದುಕೊಂಡಿತ್ತು.

ಗೋಲುಗಂಬದ ಬಳಿ ನಿಂತು ತಮ್ಮ ಕೌಶಲಕ್ಕಾಗಿ ‘ದಿ ವಾಲ್‌’ ಎಂದು ಕರೆಸಿಕೊಂಡಿರುವ ಶ್ರೀಜೇಶ್‌, ಭಾರತ ತಂಡವು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ ಜೊತೆಗೆ ಎರಡು ಏಷ್ಯನ್‌ ಗೇಮ್ಸ್‌ ಚಿನ್ನ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಎರಡು ಬೆಳ್ಳಿ ಪದಕ ಅವರ ಅವಧಿಯಲ್ಲಿ ಭಾರತಕ್ಕೆ ಸಂದಿವೆ.

ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರನ್ನು ಭಾರತ ಜೂನಿಯರ್ ಹಾಕಿ ತಂಡದ ಹೆಡ್‌ ಕೋಚ್‌ ಆಗಿ ನೇಮಿಸಲಾಗಿತ್ತು.

‘ನಿಮ್ಮ ಹೊಸ ಪಾತ್ರವನ್ನು ಪರಿಣಾಮಕಾರಿಯಾಗಿ ಮತ್ತು ಸ್ಪೂರ್ತಿದಾಯಕವಾಗಿ ನಿಭಾಯಿಸುವರೆಂಬ ಭರವಸೆಯಿದೆ’ ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.

‘ಭಾರತದ ಹಾಕಿಗೆ ನೀವು ಸಲ್ಲಿಸಿರುವ ಸ್ಮರಣೀಯ ಸೇವೆಗಾಗಿ ನಿಮ್ಮನ್ನು ಅಭಿನಂದಿಸುತ್ತೇನೆ’ ಎಂದು ಆಗಸ್ಟ್ 16ರಂದು ಬರೆದ ಪತ್ರದಲ್ಲಿ ಮೋದಿ ತಿಳಿಸಿದ್ದಾರೆ.

ಶ್ರೀಜೇಶ್ ಅವರ ನಮ್ರತೆಯನ್ನೂ ಮೋದಿ ಶ್ಲಾಘಿಸಿದ್ದಾರೆ. ‘ಹಲವು ಪ್ರಶಸ್ತಿಗಳು, ರಾಷ್ಟ್ರೀಯ, ಅಂತರರಾಷ್ಟ್ರೀಯ ಪದಕಗಳು ನಿಮಗೆ ಬಂದಿದ್ದು ನೀವು ಸಾಧಿಸಿರುವ ಎತ್ತರವನ್ನು ತೋರಿಸುತ್ತವೆ. ಆದರೆ ಹಾಕಿ ಮೈದಾನದಲ್ಲಾಗಲಿ, ಹೊರಗೆಯೇ ಆಗಲಿ ನಿಮ್ಮಲ್ಲಿ ಕಂಡಿರುವ ವಿಶೇಷವೆಂದರೆ ಅದು ಸರಳತೆ ಮತ್ತು ವಿನೀತಭಾವ’ ಎಂದು ಪ್ರಧಾನಿ ಬರೆದಿದ್ದಾರೆ.

‘ನನ್ನ ನಿವೃತ್ತಿಗೆ ಸಂಬಂಧಿಸಿ ನೀವು ಬರೆದ ಆತ್ಮೀಯ ಪತ್ರ ಸ್ವೀಕರಿಸಿದ್ದೇನೆ ಮೋದಿ ಸರ್‌. ಹಾಕಿ ನನ್ನ ಜೀವನ. ನಾನು ಈ ಆಟಕ್ಕೆ ಕೊಡುಗೆ ಸಲ್ಲಿಸಿ, ಭಾರತವನ್ನು ಪ್ರಬಲ ಶಕ್ತಿಯಾಗಿ ರೂಪಿಸಲು ಶ್ರಮಿಸುತ್ತೇನೆ.  2020 ಮತ್ತು 2024ರಲ್ಲಿ ಒಲಿಂಪಿಕ್ ಪದಕಗಳ ಮೂಲಕ ಈ ಕೆಲಸ ಶುರುವಾಗಿದೆ. ನನ್ನ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಧನ್ಯವಾದಗಳು ಪಿಎಂ ಸರ್‌’ ಎಂದು ಶ್ರೀಜೇಶ್‌ ಎಕ್ಸ್‌ನಲ್ಲಿ ಪ್ರಧಾನಿ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT