ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬಡತನದಲ್ಲಿಯೇ ಕಮರಿದ ಥ್ರೋಬಾಲ್ ಪ್ರತಿಭೆ

ರಾಜ್ಯ, ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಗಡಿ ಗ್ರಾಮದ ಯುವ ಕ್ರೀಡಾಪಟು
Last Updated 11 ಫೆಬ್ರುವರಿ 2023, 4:27 IST
ಅಕ್ಷರ ಗಾತ್ರ

ನಂಗಲಿ( ಮುಳಬಾಗಿಲು): ತಾಲ್ಲೂಕಿನಲ್ಲಿ ಹಲವು ಕ್ರೀಡಾ ಪ್ರತಿಭೆಗಳಿದ್ದರೂ, ಅವರಿಗೆ ಸರಿಯಾದ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ಇಲ್ಲದಿರುವುದರಿಂದ ಹಲವು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ತಾಲ್ಲೂಕಿನ ಗಡಿ ಗ್ರಾಮವಾದ ಮರಲಮೇಡು ಮೂಲದ ಯುವಕ ಎನ್. ಮೋಹನ್ ಅವರು ಥ್ರೋಬಾಲ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆಗಳನ್ನು ಮಾಡುತ್ತಿದ್ದರೂ, ಅವರಿಗೆ ಇನ್ನೂ ಸರಿಯಾದ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ಮಾತ್ರ ದಕ್ಕುತ್ತಿಲ್ಲ.

ಕೃಷಿ ಕುಟುಂಬದಲ್ಲಿ ಹುಟ್ಟಿರುವ ಅವರು ಕಡುಬಡತನದಲ್ಲೇ ಥ್ರೋಬಾಲ್ ಅನ್ನು ಕಲಿತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವು ಪ್ರತಿನಿಧಿಸುವ ತಂಡಕ್ಕೆ ಬಂಗಾರದ ಪದಕಗಳನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಅವರಿಗೆ ಹಲವು ಅವಕಾಶಗಳು ಬಂದರೂ, ಹಣಕಾಸು ಸಮಸ್ಯೆಯಿಂದಾಗಿ ವಿದೇಶಗಳಿಗೆ ಹೋಗಲಾಗದ ದುಃಸ್ಥಿತಿ ಹಾಗೂ ಮತ್ತಷ್ಟು ಉತ್ತಮ ತರಬೇತಿ ಪಡೆಯಲಾಗದೆ ಹಳ್ಳಿಯಲ್ಲೇ ಉಳಿಯುವಂತಾಗಿದೆ.

ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ ಮುಗಿಸಿರುವ ಎನ್. ಮೋಹನ್, ಕಾಲೇಜು ಹಂತದಲ್ಲೇ ವಿವಿಧ ಥ್ರೋಬಾಲ್ ಪಂದ್ಯಾವಳಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. 2021ರಲ್ಲಿ ಮೊದಲ ಬಾರಿಗೆ ಅಮೇಚರ್ ಥ್ರೋಬಾಲ್ ನ್ಯಾಷನಲ್ಸ್ ಚಾಂಪಿಯನ್ ಶಿಪ್‌ನಲ್ಲಿ ಮೊದಲ ಬಾರಿಗೆ ರಾಜ್ಯ ತಂಡವನ್ನು ಪ್ರತಿನಿಧಿಸಿ, ಈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ಭರ್ಜರಿ ಗೆಲುವು ಸಾಧಿಸಿ ಬಂಗಾರದ ಪದಕಕ್ಕೆ ಭಾಜನವಾಗಲು ಕಾರಣೀಭೂತರಾಗಿದ್ದರು.

ಅದೇ ವರ್ಷ ಇವರ ಆಟದ ವೈಖರಿಯಿಂದಾಗಿ ನಡೆದ ನ್ಯಾಷನಲ್ ಥ್ರೋಬಾಲ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪಶ್ಚಿಮ ಬಂಗಾಳದ ವಿರುದ್ಧ ಕರ್ನಾಟಕ ತಂಡ ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕ ಪಡೆದಿತ್ತು. ಆಗ ಮೋಹನ್ ಆಟ ಗಮನಿಸಿದ್ದ ದೊಡ್ಡಬಳ್ಳಾಪುರ ಮೂಲದ ತರಬೇತುದಾರ ರಂಜಿತ್ ಮೋಹನ್ ಅವರು, ಮೋಹನ್ ಅವರಿಗೆ ಉತ್ತಮ ತರಬೇತಿ ನೀಡಿ, ವಿವಿಧ ಕಡೆಗಳಲ್ಲಿ ಆಡುವ ಅವಕಾಶವನ್ನು ಕಲ್ಪಿಸಿಕೊಟ್ಟರು. ಆದರೆ, ದೇಶ, ವಿದೇಶದ ವಿವಿಧ ಭಾಗಗಳಿಗೆ ಹೋಗಲು ಹಣಕಾಸಿನ ತೊಂದರೆಯಿಂದಾಗಿ ಮೋಹನ್ ಅವರ ಬಳಿ ಪ್ರತಿಭೆಯಿದ್ದರೂ, ಅದು ಕಮರಿ ಹೋಗುವಂತಾಗಿದೆ.

2022ರಲ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ವರ್ಲ್ಡ್ ಥ್ರೋಬಾಲ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲು ಮೋಹನ್ ಅವರ ವೆಚ್ಚಗಳನ್ನು ತರಬೇತುದಾರ ರಂಜಿತ್ ಅವರೇ ಭರಿಸಿದ್ದರು. ಇದರಿಂದಾಗಿ ಭಾರತ ತಂಡವು ಮಲೇಷ್ಯಾ ವಿರುದ್ಧವೇ ಗೆದ್ದು ಬಂಗಾರದ ಪದಕ ಪಡೆಯಿತು. ಈ ಪಂದ್ಯದಲ್ಲಿ ಮೋಹನ್ ಅವರ ಸಾಧನೆಗೆ ಸ್ವರ್ಣ ಪದಕ ಅರಸಿಬಂದಿತ್ತು.

ಆರ್ಥಿಕ ನೆರವಿಗೆ ಕೋರಿಕೆ

ಇನ್ನು ತಾಲ್ಲೂಕಿನಲ್ಲಿರುವ ಅನೇಕ ಸಮಾಜ ಸೇವಕರು ಮತ್ತು ದಾನಿಗಳು ಹಲವು ಸಮಾಜ ಸೇವೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆಯಿದ್ದರೂ, ಹಣಕಾಸಿನ ತೊಂರದೆ ಎದುರಿಸುತ್ತಿರುವ ಮೋಹನ್ ಅವರ ನೆರವಿಗೆ ಸಮಾಜ ಸೇವಕರು ಮುಂದಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT