ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ: ಯಾರಿಗೂ ನೇರ ಪ್ರವೇಶ ಇಲ್ಲ, ಆಗಸ್ಟ್ 25, 26 ರಂದು ಟ್ರಯಲ್ಸ್

Published 14 ಆಗಸ್ಟ್ 2023, 23:30 IST
Last Updated 14 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಆಯ್ಕೆಗೆ ಆ.25 ಮತ್ತು 26 ರಂದು ಪಟಿಯಾಲದಲ್ಲಿ ಟ್ರಯಲ್ಸ್‌ ನಡೆಯಲಿದೆ.

ಬೆಲ್‌ಗ್ರೇಡ್‌ನಲ್ಲಿ ಸೆ.16 ರಿಂದ 24ರ ವರೆಗೆ ಆಯೋಜನೆಯಾಗಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಯಾರಿಗೂ ನೇರ ಪ್ರವೇಶ ನೀಡುವುದಿಲ್ಲ ಎಂದು ಟ್ರಯಲ್ಸ್‌ ನಡೆಸಲಿರುವ ಭಾರತ ಒಲಿಂಪಿಕ್‌ ಸಮಿತಿಯ ಅಡ್‌ಹಾಕ್‌ ಸಮಿತಿ ಸ್ಪಷ್ಟಪಡಿಸಿದೆ.

ಪ್ರಮುಖ ಕುಸ್ತಿಪಟುಗಳಾದ ವಿನೇಶಾ ಫೋಗಟ್‌ ಮತ್ತು ಬಜರಂಗ್ ಪೂನಿಯಾ ಅವರಿಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯಿತಿ ನೀಡಲಾಗಿತ್ತು. ಅಡ್‌ಹಾಕ್‌ ಸಮಿತಿಯ ಈ ನಿರ್ಧಾರ ವಿವಾದಕ್ಕೆ ಕಾರಣವಾಗಿತ್ತು.

‘2022 ಮತ್ತು 2023 ರಲ್ಲಿ ನಡೆದಿದ್ದ ಅಂತರರಾಷ್ಟ್ರೀಯ/ ರ್‍ಯಾಂಕಿಂಗ್‌/ ಏಷ್ಯನ್‌/ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡವರು ಮತ್ತು ಪದಕ ಗೆದ್ದವರು ಹಾಗೂ 2022ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದವರು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬಹುದು’ ಎಂದು ಅಡ್‌ಹಾಕ್‌ ಸಮಿತಿ ಹೇಳಿದೆ.

ಬಜರಂಗ್‌ ಮತ್ತು ವಿನೇಶಾ ಅವರು ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಬೇಕೇ ಎಂಬ ಬಗ್ಗೆ ಇದುವರೆಗೂ ತೀರ್ಮಾನ ತೆಗೆದುಕೊಂಡಿಲ್ಲ. ಹಾಂಗ್‌ಝೌ ಏಷ್ಯನ್‌ ಗೇಮ್ಸ್‌ (ಸೆ.23 ರಂದು ಆರಂಭ) ಮುಂದಿರುವುದು ಇದಕ್ಕೆ ಕಾರಣ.

ಬೆಲ್‌ಗ್ರೇಡ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಕುಸ್ತಿಪಟುಗಳಿಗೆ ಮೊದಲ ಅವಕಾಶ ಎನಿಸಿಕೊಂಡಿದೆ.

‘ಒಲಿಂಪಿಕ್ಸ್‌ಗೆ ಅರ್ಹತಾ ಕೂಟವಾಗಿರುವುದರಿಂದ ಟ್ರಯಲ್ಸ್‌ಅನ್ನು ಇನ್ನಷ್ಟು ಮುಂದೂಡಲು ನಮಗೆ ಸಾಧ್ಯವಿಲ್ಲ. ಟ್ರಯಲ್ಸ್‌ ವಿಳಂಬವಾದರೆ ನಮ್ಮ ಕುಸ್ತಿಪಟುಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ಕಳೆದುಕೊಳ್ಳಬಹುದು’ ಎಂದು ಅಡ್‌ಹಾಕ್‌ ಸಮಿತಿ ಮುಖ್ಯಸ್ಥ ಭೂಪೇಂದರ್‌ ಸಿಂಗ್‌ ಬಾಜ್ವಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT