ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಥ್ರೋಬಾಲ್ ತಂಡಕ್ಕೆ ಉಷಾ

ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಜ್ಜಾಗಿರುವ ಗ್ರಾಮೀಣ ಪ್ರತಿಭಟನೆ
Published : 22 ಸೆಪ್ಟೆಂಬರ್ 2024, 6:02 IST
Last Updated : 22 ಸೆಪ್ಟೆಂಬರ್ 2024, 6:02 IST
ಫಾಲೋ ಮಾಡಿ
Comments

ಕೊಣನೂರು: ಸತತ ಪ್ರಯತ್ನದಿಂದ ಅಂತರರಾಷ್ಟ್ರೀಯ ಮಟ್ಟಕ್ಕೇರಿದ ಉಷಾ ಕೆ.ಜಿ. ಇದೀಗ ಮನೆಮಾತಾಗಿದ್ದಾರೆ. ಭಾರತದ ಸೀನಿಯರ್ ಥ್ರೋಬಾಲ್ ಮಹಿಳೆಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸದ್ಯ ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥ ಕಾಲೇಜಿಲ್ಲಿ ಮೂರನೇ ವರ್ಷದ ಬಿ.ಎ. ಕಲಿಯುತ್ತಿರುವ, ರಾಮನಾಥಪುರ ಹೋಬಳಿಯ ಕೂಡಲೂರಿನ ರೈತ ಕುಟುಂಬದ ಗಣೇಶ ಮತ್ತು ನೇತ್ರಾ ದಂಪತಿಯ ಪುತ್ರಿ ಉಷಾ, ಚಿಕ್ಕ ವಯಸ್ಸಿನಿಂದಲೂ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದರು. ಅನೇಕ ಪ್ರಯತ್ನಗಳ ನಂತರ ರಾಷ್ಟ್ರೀಯ ಥ್ರೋಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಆಗಸ್ಟ್ 29ರಿಂದ 31ರವರೆಗೆ ಮತ್ತು ಮತ್ತು ಸೆಪ್ಟೆಂಬರ್ 1 ಮತ್ತು 2ರಂದು ನೇಪಾಳದ ಪೋಕ್ರಾದಲ್ಲಿ ಜರುಗಿದ ಇಂಡೋ- ನೇಪಾಳ್ ಇಂಟರ್ ನ್ಯಾಷನಲ್ ಚಾಂಪಿಯನ್‍ಷಿಪ್ ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನ ಪಡೆದ ಭಾರತ ತಂಡದ ಆಟಗಾರ್ತಿಯಾಗಿ ಛಾಪು ಮೂಡಿಸಿದ್ದಾರೆ.

ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲೆಗಳಲ್ಲಿ ಕಲಿಯುತ್ತಿರುವ ದಿನಗಳಲ್ಲಿ ವಾಲಿಬಾಲ್ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ ಉಷಾ, ಪದವಿ ಪೂರ್ವ ಶಿಕ್ಷಣಕ್ಕಾಗಿ ರಾಮನಾಥಪುರದ ಬಾಲಕಿಯ ಪದವಿ ಪೂರ್ವ ಕಾಲೇಜು ಸೇರಿದರು. ಪರೀಕ್ಷೆ ಇದ್ದುದರಿಂದ 2021ರಲ್ಲಿ ರಾಜ್ಯ ತಂಡಕ್ಕೆ ಆಯ್ಕೆಯಾಗಲು ಬೆಂಗಳೂರಿನಲ್ಲಿ ನಡೆದ ಖೇಲೋ ಇಂಡಿಯಾ ಆಯ್ಕೆಗೆ ಭಾಗವಹಿಸಲು ಆಗಲಿಲ್ಲ. ದ್ವಿತೀಯ ಪಿಯುಸಿಯ ಭೌತ ವಿಜ್ಞಾನದಲ್ಲಿ ಅನುತ್ತೀರ್ಣರಾಗಿದ್ದರಿಂದ 2022ರ ಆಯ್ಕೆ ಪ್ರಕ್ರಿಯೆಯಲ್ಲೂ ಭಾಗವಹಿಸಲು ಆಗಲಿಲ್ಲ. ಛಲಬಿಡದೇ 2023ರಲ್ಲಿ ಮಂಡ್ಯದಲ್ಲಿ ನಡೆದ ಖೇಲೋ ಇಂಡಿಯಾ ಆಯ್ಕೆಯಲ್ಲಿ ಭಾಗವಹಿಸಿ ರಾಜ್ಯ ತಂಡದಲ್ಲಿ ಸ್ಥಾನಗಿಟ್ಟಿಸಿದರು.

ಜಾರ್ಖಂಡ್‍ನಲ್ಲಿ ನಡೆದ 47ನೇ ಸೀನಿಯರ್ ಮಹಿಳೆಯರ ರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‍ಷಿಪ್ ಪಂದ್ಯಗಳಲ್ಲಿ ಕರ್ನಾಟಕ ತಂಡವು 3ನೇ ಸ್ಥಾನ ಪಡೆದರೂ, ಉತ್ತಮ ಆಟ ಪ್ರದರ್ಶಿಸಿದ ಉಷಾ ಭಾರತ ತಂಡಕ್ಕೆ ನೇರ ಆಯ್ಕೆಯಾದರು.

ಬಾಲ್ಯದಿಂದಲೂ ಕಬಡ್ಡಿ, ವಾಲಿಬಾಲ್ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದ ಉಷಾ.ಕೆ.ಜಿ ತೂಕ ಹೆಚ್ಚಿದ್ದರಿಂದ ಕಬಡ್ಡಿಯಲ್ಲಿ ಮುಂದುವರಿಯಲಾಗಿಲಿಲ್ಲ. ಉದ್ದ ಕಡಿಮೆಯಿಂದಾಗಿ ವಾಲಿಬಾಲ್ ಕ್ರೀಡೆಯಿಂದ ವಂಚಿತ ಆಗಬೇಕಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂಬ ಮಹದಾಸೆಯಿಂದ ರಾಷ್ಟ್ರೀಯ ಥ್ರೋಬಾಲ್ ತಂಡದ ಆಟಗಾರ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಜೊತೆಗೆ ರಾಷ್ಟ್ರೀಯ ತರಬೇತುದಾರರಾಗಿ ಮುಂದುವರಿಯಲು ಉತ್ಸುಕರಾಗಿದ್ದಾರೆ.

ದೇಶಕ್ಕಾಗಿ ಆಡುತ್ತಿರುವ ಮಗಳು ‘ನಮ್ಮ ಮಗಳು ದೇಶದ ಮಟ್ಟದಲ್ಲಿ ಆಟವಾಡಿ ಬಂದಿರುವುದು ನಮಗೂ ಸಂತೋಷವಾಗಿದ್ದು ಅವಳ ಬದುಕು ಚೆನ್ನಾಗಿರಬೇಕು ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಉಷಾ ತಂದೆ–ತಾಯಿ ಗಣೇಶ ಮತ್ತು ನೇತ್ರಾ. ‘ನಿತ್ಯ ಕೃಷಿ ಕಾಯಕದಲ್ಲಿ ನಿರತರಾಗಿರುವ ನಮಗೆ ಕ್ರೀಡೆ ರಾಜ್ಯ ರಾಷ್ಟ್ರಮಟ್ಟದ ಕಲ್ಪನೆಯಿಲ್ಲ. ಮೊದಲಿಗೆ ಆಟೋಟಗಳು ಬೇಡ ಓದುವುದರ ಕಡೆ ಗಮನ ಕೊಡು ಎಂದು ಹೇಳುತ್ತಿದೆವು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT