ಪ್ಯಾರಿಸ್ : ವಿನೇಶಾ ಫೋಗಟ್ ಅವರು ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ಬರೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್‌ನಲ್ಲಿ ವಿನೇಶಾ 5–0
ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದರು. ಚಿನ್ನ ಜಯಿಸುವ ಅವಕಾಶ ಈಗ ಅವರ ಮುಂದಿದೆ. ಫೈನಲ್‌ನಲ್ಲಿ ಸೋತರೂ ಅವರಿಗೆ ಬೆಳ್ಳಿ ಪದಕ ಲಭಿಸುವುದು ಖಚಿತ.
ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಪ್ರಥಮ ಮಹಿಳಾ ಕುಸ್ತಿಪಟು ಅವರಾಗಿದ್ದರು. ಆತ್ಮವಿಶ್ವಾಸ ಮತ್ತು ಪರಾಕ್ರಮ ಮೇಳೈಸಿದ್ದ ಅವರ ಪಟ್ಟುಗಳಿಗೆ ಪ್ರತ್ಯುತ್ತರ ನೀಡಲು ಕ್ಯೂಬಾ ಕುಸ್ತಿಪಟುವಿಗೆ ಸಾಧ್ಯವಾಗಲಿಲ್ಲ.
ವಿನೇಶಾ ಅವರು ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ಪಾರಮ್ಯ ಮೆರೆದಿದ್ದು ವಿಶೇಷ. ಅದರಲ್ಲೂ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಅವರು ವಿಶ್ವ ಚಾಂಪಿಯನ್ ಮತ್ತು ಹೋದ ಒಲಿಂಪಿಕ್ಸ್‌ನ ಚಿನ್ನದ ಪದಕ ವಿಜೇತ ಕುಸ್ತಿಪಟು, ಜಪಾನಿನ ಯುಯಿ ಸುಸಾಕಿಯನ್ನು ಸೋಲಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರ ಸವಾಲನ್ನು 7–5 ರಿಂದ ಗೆದ್ದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸುಸಾಕಿ ಅವರು ಎದುರಾಳಿಗಳಿಗೆ ಒಂದೂ ಪಾಯಿಂಟ್ ಕೊಡದೇ ಚಿನ್ನ ಗೆದ್ದಿದ್ದರು. ಪ್ಯಾರಿಸ್‌ನಲ್ಲೂ ಅವರು ಚಿನ್ನಕ್ಕೆ ನೆಚ್ಚಿನ ಸ್ಪರ್ಧಿ ಆಗಿದ್ದರು. ಆದರೆ ಈ ಕ್ರೀಡೆಗಳ ಮೊದಲ ಸೆಣಸಾಟದಲ್ಲೇ 2–3 ರಿಂದ ಅನಿರೀಕ್ಷಿತ ರೀತಿ ಸೋತರು. ಅಗ್ರ ಶ್ರೇಯಾಂಕದ ಸುಸಾಕಿ ಅವರಿಗೆ ಇದು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಎದುರಾದ ಮೊದಲ ಸೋಲು ಕೂಡ. ಇದು ವಿನೇಶಾ ಆತ್ಮವಿಶ್ವಾಸವನ್ನು ಇಮ್ಮಡಿಸಿತು. ಅದರಿಂದಾಗಿ ಕ್ವಾರ್ಟರ್‌ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ಜಯದ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
ವಿನೇಶಾ ಮನೆಯ ಕಪಾಟಿನಲ್ಲಿ ಇತರೆಲ್ಲಾ ಸ್ಪರ್ಧೆಗಳಲ್ಲಿ ಗೆದ್ದ ಪದಕಗಳಿವೆ. ಮೂರು ಬಾರಿ ಕಾಮನ್
ವೆಲ್ತ್ ಕ್ರೀಡೆಗಳ ಚಾಂಪಿಯನ್, ಒಂದು ಏಷ್ಯನ್ ಗೇಮ್ಸ್ ಚಿನ್ನ, ಎಂಟು ಬಾರಿ ಏಷ್ಯನ್ ಚಾಂಪಿಯನ್
ಷಿಪ್ ಪದಕ, ಎರಡು ವಿಶ್ವ ಚಾಂಪಿಯನ್‌ಷಿಪ್ ಕಂಚು ಗೆದ್ದಿದ್ದಾರೆ. ಆದರೆ ಈ ಹಿಂದಿನ ಎರಡು ಒಲಿಂಪಿಕ್ಸ್ ಗಳಲ್ಲಿ ಯಶಸ್ಸು ದೊರೆತಿರಲಿಲ್ಲ.
ವಿನೇಶಾ ಅವರು ಬುಧವಾರ ರಾತ್ರಿ ಫೈನಲ್‌ನಲ್ಲಿ ಅಮೆರಿಕದ ಸೆರಾ ಹಿಲ್ದಿಬ್ರೇಟ್ ಅವರನ್ನು
ಎದುರಿಸಲಿದ್ದಾರೆ. ಸೆರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ.
ಭಾರತದ ವಿನೇಶಾ ಫೋಗಟ್ (ಕೆಂಪು) ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ (ನೀಲಿ) ವಿರುದ್ಧ ಸೆಣಸಿದರು
ಪ್ರಜಾವಾಣಿ ಚಿತ್ರ: ಕೆ.ಎನ್. ಶಾಂತಕುಮಾರ್
ಎರಡು ಬಾರಿ ನಿರಾಸೆ: 2016ರ ರಿಯೊ ಕ್ರೀಡೆಗಳಲ್ಲಿ ಅವರಿಗೆ ಮಂಡಿನೋವಿನಿಂದ ಸಮಸ್ಯೆಯಾಗಿತ್ತು. 2021ರ ಟೋಕಿಯೊ ಕ್ರೀಡೆಗಳಲ್ಲಿ ಅವರು ಅನಿರೀಕ್ಷಿತವಾಗಿ ಬೇಗ ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.