ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: 400 ಮೀ ಹರ್ಡಲ್ಸ್‌ – ಅಲಿಸನ್‌ಗೆ ಚಿನ್ನ

1500 ಮೀಟರ್ಸ್‌ನಲ್ಲಿ ವೈಟ್‌ಮನ್‌ ಮಿಂಚು
Last Updated 20 ಜುಲೈ 2022, 13:39 IST
ಅಕ್ಷರ ಗಾತ್ರ

ಯೂಜೀನ್‌, ಅಮೆರಿಕ: ಫೆವರೀಟ್‌ ಅಥ್ಲೀಟ್‌ ಕರ್ಸ್ಟನ್‌ ವರೋಮ್‌ ಅವರ ಸವಾಲು ಮೀರಿದ ಬ್ರೆಜಿಲ್‌ನ ಅಲಿಸನ್‌ ಡಾಸ್‌ ಸ್ಯಾಂಟೊಸ್‌ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಅವರು 46.29 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ ಅಲಿಸನ್‌ ಅವರು 1993ರಲ್ಲಿ ಅಮೆರಿಕದ ಕೆವಿನ್ ಯಂಗ್‌ (47.18 ಸೆ.), ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಥಾಪಿಸಿದ್ದ ಕೂಟ ದಾಖಲೆಯನ್ನು ಅಳಿಸಿಹಾಕಿದರು. ಅಲ್ಲದೆ ಮೂರನೇಸಾರ್ವಕಾಲಿಕ ಶ್ರೇಷ್ಠ ಸಾಧನೆ ದಾಖಲಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ನಾರ್ವೆಯ ಕರ್ಸ್ಟನ್‌ ಇಲ್ಲಿ 48.42 ಸೆಕೆಂಡುಗಳಲ್ಲಿ ಗುರಿ ತಲುಪಿ ಏಳನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು. ಅವರು ಗಾಯದಿಂದ ಚೇತರಿಸಿಕೊಂಡು ಇಲ್ಲಿ ಕಣಕ್ಕಿಳಿದಿದ್ದರು. ಅಮೆರಿಕದ ರಾಯ್ ಬೆಂಜಮಿನ್‌ (46.89 ಸೆ.) ಮತ್ತು ಟ್ರೆವರ್‌ ಬಾಸಿಟ್‌ (47.39) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಒಲಿಂಪಿಕ್ ಚಾಂಪಿಯನ್‌ಗೆ ವೈಟ್‌ಮನ್ ಆಘಾತ: ಸ್ಕಾಟ್ಲೆಂಡ್‌ನ ಜೇಕ್‌ ವೈಟ್‌ಮನ್‌ ಅವರು ಒಲಿಂಪಿಕ್ ಚಾಂಪಿಯನ್‌, ನಾರ್ವೆಯ ಜೇಕಬ್‌ ಇಂಗಬ್ರಿಸನ್‌ ಅವರನ್ನು ಹಿಂದಿಕ್ಕಿ ಪುರುಷರ 1500 ಮೀಟರ್ಸ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು.

ವೈಟ್‌ಮನ್‌ 3 ನಿಮಿಷ 29.23 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇಂಗಬ್ರಿಸನ್‌ (3 ನಿ. 29.47 ಸೆ.) ಬೆಳ್ಳಿ ಮತ್ತು ಸ್ಪೇನ್‌ನ ಮೊಹಮ್ಮದ್ ಕತಿರ್ (3 ನಿ. 29. 90 ಸೆ.) ಕಂಚು ಜಯಿಸಿದರು. ವೈಟ್‌ಮನ್ ಅವರ ತಂದೆ ಜೆಫ್‌ ಈ ಚಾಂಪಿಯನ್‌ಷಿಪ್‌ನಲ್ಲಿ ಕಮೆಂಟೇಟರ್ ಆಗಿದ್ದಾರೆ.

ಎಲೆನೊರ್‌ಗೆ ಹೈಜಂಪ್ ಚಿನ್ನ: ಆಸ್ಟ್ರೇಲಿಯಾದ ಎಲೆನೊರ್‌ ಪ್ಯಾಟರ್ಸನ್‌ ಅವರು ಮಹಿಳೆಯರ ಹೈಜಂಪ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಅವರು 2.02 ಮೀಟರ್ಸ್ ಸಾಧನೆ ಮಾಡಿದರು. ಉಕ್ರೇನ್‌ನ ಯರೋಸ್ಲಾವ್‌ ಮಹುಚಿಕ್‌ ಬೆಳ್ಳಿ ಮತ್ತು ಇಟಲಿಯ ಎಲೆನಾ ವಲ್ಲೊರ್ಟಿಗಾರ ಕಂಚು ಜಯಿಸಿದರು.

ಪುರುಷರ ಡಿಸ್ಕಸ್‌ ಥ್ರೊನಲ್ಲಿ ಸ್ಲೊವೇನಿಯಾದ ಕ್ರಿಸ್ಟಿಯನ್‌ ಸೆಹ್‌ (71.13 ಮೀ.) ಚಿನ್ನ ಗೆದ್ದರು. ಲಿಥುವೇನಿಯಾದ ಮಿಕೊಲಸ್‌ ಅಲೆಕ್ನಾ (69. 27 ಮೀ.) ಮತ್ತು ಆ್ಯಂಡ್ರಿಯಸ್‌ ಗುಜಿಯಸ್‌ (67.55 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT