ಬಾಕು (ಅಜರ್‌ಬೈಜಾನ್): ಭಾರತದ ಡಿ.ಗುಕೇಶ್ ಜೊತೆ ವಿಶ್ವಕಪ್ ಚೆಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನ ಎರಡನೇ ಪಂದ್ಯವನ್ನು ಬುಧವಾರ ‘ಡ್ರಾ’ ಮಾಡಿಕೊಳ್ಳುವಲ್ಲಿ ಯಶಸ್ವಿ ಆದ ಮಾಜಿ ವಿಶ್ವ ಚಾಂಪಿಯನ್ ಮಾಗ್ನಸ್ ಕಾರ್ಲ್‌ಸನ್ ಅವರು 1.5–0.5 ಅಂತರದ ಗೆಲುವಿನೊಡನೆ ಸೆಮಿಫೈನಲ್ ತಲುಪಿಸಿದರು.
ಮಂಗಳವಾರ ಕಪ್ಪುಕಾಯಿಗಳಲ್ಲಿ ಆಡಿದ ಕಾರ್ಲ್‌ಸನ್ ಮೊದಲ ಪಂದ್ಯ ಜಯಿಸಿದ್ದರು. ಭಾರತದ ವಿದಿತ್ ಸಂತೋಷ್ ಗುಜರಾತಿ ಕೂಡ ಹೊರಬಿದ್ದರು. ಸ್ಥಳೀಯ ಫೆವರೀಟ್ ನಿಜತ್ ಅಬಸೋವ್ ಅವರು 1.5–0.5 ಅಂತರದಿಂದ ವಿದಿತ್ ಅವರನ್ನು ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 97ನೇ ಸ್ಥಾನದಲ್ಲಿರುವ ಅಬಸೋವ್ ಈ ಟೂರ್ನಿಯಲ್ಲಿ ‘ಜೈಂಟ್ ಕಿಲ್ಲರ್’ ಎನಿಸಿದ್ದಾರೆ. ಅನಿಶ್ ಗಿರಿ (ನೆದರ್ಲೆಂಡ್ಸ್), ಪೀಟರ್ ಸ್ವಿಡ್ಲರ್ ನಂತರ ಈಗ ವಿದಿತ್ ಅವರನ್ನೂ ಅಚ್ಚರಿಗೊಳಿಸಿದ್ದಾರೆ.
ಅಬಸೋವ್ ಮುಂದಿನ ಸುತ್ತಿನಲ್ಲಿ ಕಾರ್ಲ್‌ಸನ್ ಅವರನ್ನು ಎದುರಿಸಲಿದ್ದಾರೆ. ಕಾರ್ಲ್‌ಸನ್ ಈ ಟೂರ್ನಿಯನ್ನು ಒಮ್ಮೆಯೂ ಗೆದ್ದಿಲ್ಲ.
ಪ್ರಜ್ಞಾನಂದ ಆರ್. ಅವರು ಭಾರತೀಯರೇ ಇದ್ದ ಇನ್ನೊಂದು ಕ್ವಾರ್ಟರ್‌ಫೈನಲ್‌ನ ಎರಡನೇ ಪಂದ್ಯದಲ್ಲಿ ಅರ್ಜುನ್ ಎರಿಗೇಶಿ ಅವರನ್ನು ಸೋಲಿಸಿದರು. ಈಗ ಸ್ಕೋರ್ 1–1 ಆಗಿದ್ದು, ಗುರುವಾರ ಇವರಿಬ್ಬರ ನಡುವೆ ರ‍್ಯಾಪಿಡ್ ಪಂದ್ಯಗಳು ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.