ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರಾ’ ‍ಪಂದ್ಯಲ್ಲಿ ಪ್ರಜ್ಞಾನಂದ–ಕರುವಾನ

ಚೆಸ್‌ ವಿಶ್ವಕಪ್‌ ಸೆಮಿಫೈನಲ್‌: ಕಾರ್ಲ್‌ಸನ್‌ಗೆ ಮುನ್ನಡೆ
Published 19 ಆಗಸ್ಟ್ 2023, 17:54 IST
Last Updated 19 ಆಗಸ್ಟ್ 2023, 17:54 IST
ಅಕ್ಷರ ಗಾತ್ರ

ಬಾಕು (ಅಜರ್‌ಬೈಜಾನ್‌): ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು ವಿಶ್ವಕಪ್‌ ಚೆಸ್‌ ಟೂರ್ನಿಯ ಸೆಮಿಫೈನಲ್‌ನ ಮೊದಲ ಪಂದ್ಯದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಜೊತೆ ಪಾಯಿಂಟ್‌ ಹಂಚಿಕೊಂಡರು. ಸುದೀರ್ಘವಾಗಿ ನಡೆದ ಈ ಪಂದ್ಯದ 78ನೇ ನಡೆಯಲ್ಲಿ ಇಬ್ಬರೂ ‘ಡ್ರಾ’ಕ್ಕೆ ಸಹಿಹಾಕಿದರು.

ಹದಿಹರೆಯದ ಪ್ರಜ್ಞಾನಂದ ಅವರ ನಿರ್ಭಿಡೆಯ ಆಟ ಮತ್ತು ಇಟಲಿ ಮೂಲದ ಗ್ರ್ಯಾಂಡ್‌ಮಾಸ್ಟರ್‌ ಕರುವಾನ ಅವರ ಅನುಭವದ ನಡುವಣ ಸೆಣಸಾಟ ಎನಿಸಿರುವ ಈ ಪಂದ್ಯ ಕುತೂಹಲ ಕೆರಳಿಸಿದರೂ, ಯಾರೊಬ್ಬರೂ ನಿರ್ಣಾಯಕ ಮೇಲುಗೈ ಸಾಧಿಸಲಿಲ್ಲ. ಭಾನುವಾರ ನಡೆಯುವ ಎರಡನೇ ಪಂದ್ಯದಲ್ಲಿ ಚೆನ್ನೈನ ಪ್ರಜ್ಞಾನಂದ ಬಿಳಿ ಕಾಯಿಗಳಲ್ಲಿ ಆಡುವ ಅನುಕೂಲ ಪಡೆದಿದ್ದಾರೆ.

ಪ್ರಜ್ಞಾನಂದ ಅವರು, ವಿಶ್ವಕಪ್‌ ಚೆಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ ಭಾರತದ ಎರಡನೇ ಆಟಗಾರ ಎನಿಸಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್ ಮೊದಲ ಆಟಗಾರ. ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್‌ ಲಾರೆನ್‌ ಅವರಿಗೆ ಸವಾಲು ಹಾಕುವ ಆಟಗಾರನನ್ನು ನಿರ್ಧರಿಸಲು ನಡೆಯಲಿರುವ ಕ್ಯಾಂಡಿಡೇಟ್ಸ್‌ ಟೂರ್ನಿಗೂ ಪ್ರಜ್ಞಾನಂದ ಅವರು ಅರ್ಹತೆ ಪಡೆದಿದ್ದಾರೆ.

ಕಾರ್ಲ್‌ಸನ್‌ಗೆ ಜಯ:
ಇನ್ನೊಂದು ಸೆಮಿಫೈನಲ್‌ನ ಮೊದಲ ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌, ಸ್ಥಳೀಯ ಆಟಗಾರ ನಿಜತ್‌ ಅಬಸೋವ್ ವಿರುದ್ಧ ಜಯಗಳಿಸಿ ಮಹತ್ವದ ಮುನ್ನಡೆ ಸಾಧಿಸಿದರು. ಕ್ಲಾಸಿಕಲ್‌ ಮಾದರಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.

ಅಬಸೋವ್ ವಿರುದ್ಧ ಪಂದ್ಯದಲ್ಲಿ 39ನೇ ನಡೆಯಲ್ಲೇ ಕಾರ್ಲ್‌ಸನ್‌ ಗೆಲುವಿನ ಅವಕಾಶ ಹೊಂದಿದ್ದರು. ಆ ಅವಕಾಶದಲ್ಲಿ ತಪ್ಪು ಮಾಡಿದರೂ, ಮೂರು ನಡೆಗಳ ನಂತರ ಗೆಲುವನ್ನು ಪಡೆದರು.

ನಾರ್ವೆಯ ಕಾರ್ಲ್‌ಸನ್‌ ಮೊದಲ ಬಾರಿ ವಿಶ್ವಕಪ್‌ ಗೆಲ್ಲುವ ಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT