ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಸೋನಿಯಾ

ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸವೀತಿ ಬೂರಾಗೆ ನಿರಾಸೆ
Published : 19 ನವೆಂಬರ್ 2018, 19:49 IST
ಫಾಲೋ ಮಾಡಿ
Comments

ನವದೆಹಲಿ: ಅಂತಿಮ ಸುತ್ತಿನಲ್ಲಿ ಬಿರುಸಿನ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಸೋನಿಯಾ ಚಾಹಲ್‌, ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ 57 ಕೆ.ಜಿ.ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೋನಿಯಾ 3–2ರಿಂದ ಬಲ್ಗೇರಿಯಾದ ಸ್ಟಾನಿಮಿರಾ ಪೆಟ್ರೋವಾ ಅವರನ್ನು ಪರಾಭವಗೊಳಿಸಿದರು.

2014ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ 54 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದ ಪೆಟ್ರೋವಾ ಮೊದಲ ಸುತ್ತಿನಲ್ಲಿ ಪಾರಮ್ಯ ಮೆರೆದು ಮುನ್ನಡೆ ಗಳಿಸಿದರು. 21 ವರ್ಷ ವಯಸ್ಸಿನ ಭಾರತದ ಬಾಕ್ಸರ್‌ ಇದರಿಂದ ಎದೆಗುಂದಲಿಲ್ಲ. ಎರಡನೇ ಸುತ್ತಿನಲ್ಲಿ ಮಿಂಚಿದ ಸೋನಿಯಾ, ಮೂರನೇ ಸುತ್ತಿನಲ್ಲೂ ಮೋಡಿ ಮಾಡಿದರು.

ಎದುರಾಳಿಯ ತಲೆ, ಮುಖ ಮತ್ತು ದವಡೆಗೆ ಬಲಿಷ್ಠ ಪಂಚ್‌ಗಳನ್ನು ಮಾಡಿದ ಅವರು ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮಿಸಿದರು.

ಹರಿಯಾಣದ ಸೋನಿಯಾ, 2016ರಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಹೋದ ವರ್ಷ ನಡೆದಿದ್ದ ಸರ್ಬಿಯಾ ಕಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಅವರು ಈ ವರ್ಷ ಜರುಗಿದ್ದ ಅಹ್ಮತ್‌ ಕೋಮರ್ಟ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಮಂಗಳವಾರ ನಡೆಯುವ ಎಂಟರ ಘಟ್ಟದ ಹಣಾಹಣಿಯಲ್ಲಿ ಸೋನಿಯಾ, ಕೊಲಂಬಿಯಾದ ಅರಿಯಾಸ್‌ ಕ್ಯಾಸ್ಟೆನಾಡ ಯೆನಿ ಮಾರ್ಷೆಲಾ ವಿರುದ್ಧ ಸೆಣಸಲಿದ್ದಾರೆ.

ಸವೀತಿಗೆ ನಿರಾಸೆ: 75 ಕೆ.ಜಿ. ವಿಭಾಗದಲ್ಲಿ ‘ರಿಂಗ್‌’ಗೆ ಇಳಿದಿದ್ದ ಸವೀತಿ ಬೂರಾ ಮೊದಲ ಸುತ್ತಿನಲ್ಲೇ ನಿರಾಸೆ ಕಂಡರು.

2014ರ ಚಾಂಪಿಯನ್‌ಷಿಪ್‌ನ 81 ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿದ್ದ ಸವೀತಿ, ಪೋಲೆಂಡ್‌ನ ಎಲಿಜಬೆತ್‌ ವೋಜ್‌ಸಿಕ್‌ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT