ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತವರಿನಲ್ಲಿ ಅದ್ದೂರಿ ಸ್ವಾಗತ; ಅಭಿಮಾನ ಕಂಡು ಕಣ್ಣೀರು ಸುರಿಸಿದ ವಿನೇಶ್ ಫೋಗಟ್

Published 17 ಆಗಸ್ಟ್ 2024, 9:35 IST
Last Updated 17 ಆಗಸ್ಟ್ 2024, 9:35 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಿಸ್‌ನಿಂದ ಭಾರತಕ್ಕೆ ಮರಳಿದ ಕುಸ್ತಿಪಟು ವಿನೇಶ್‌ ಫೋಗಟ್‌ ಅವರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದ ನೂರಾರು ಅಭಿಮಾನಿಗಳು ನೋಟು ಹಾಗೂ ಹೂವಿನ ಹಾರ ಹಾಕಿ, ಬೆಂಬಲದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಭಾವುಕರಾದ ಫೋಗಟ್‌ ಕಣ್ಣೀರು ಸುರಿಸಿದರು.

ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯ ಫೈನಲ್‌ನಿಂದ ಅನರ್ಹಗೊಂಡು ಆಘಾತ ಅನುಭವಿಸಿದ್ದ ಫೋಗಟ್‌ ಅವರನ್ನು, ಕುಸ್ತಿಪಟುಗಳಾದ ಬಜರಂಗ್‌ ಪುನಿಯಾ, ಸಾಕ್ಷಿ ಮಲಿಕ್‌ ಸೇರಿದಂತೆ ಸಾಕಷ್ಟು ಮಂದಿ ಆದರದಿಂದ ಬರಮಾಡಿಕೊಂಡರು.

ತೆರೆದ ಜೀಪ್‌ನಲ್ಲಿ ನಿಂತು ಎಲ್ಲರಿಗೂ ಕೈಮುಗಿದ ವಿನೇಶ್‌, 'ಇಡೀ ದೇಶಕ್ಕೆ ಧನ್ಯವಾದ ಹೇಳುತ್ತೇನೆ' ಎಂದರು.

ನಿಗದಿಗಿಂತ 100 ಗ್ರಾಂ ಅಧಿಕ ಹೊಂದಿದ್ದಾರೆ ಎಂದು ಫೋಗಟ್‌ ಅವರನ್ನು ಫೈನಲ್‌ನಿಂದ ಅನರ್ಹಗೊಳಿಸಲಾಗಿತ್ತು. ಸದ್ಯ ಭಾರತಕ್ಕೆ ಬಂದಿರುವ ಅವರಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ದೆಹಲಿಯ ದ್ವಾರಕ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಫೋಗಟ್‌, ತಮ್ಮ ಊರು ಹರಿಯಾಣದ ಬಲಾಲಿಗೆ ಪ್ರಯಾಣ ಬೆಳೆಸಿದರು. ಮಾರ್ಗಮಧ್ಯೆ, ಅಲ್ಲಲ್ಲಿ ವಾಹನ ನಿಲ್ಲಿಸಿ ಅಭಿಮಾನಿಗಳನ್ನು ಭೇಟಿಯಾದರು. 50 ಜನ ಅಭಿಮಾನಿಗಳ ಗುಂಪು ಅವರನ್ನು ಹಿಂಬಾಲಿಸಿದೆ.

ಪ‍್ಯಾರಿಸ್‌ನಲ್ಲೇ ಉಳಿದಿದ್ದ ವಿನೇಶ್‌
ಫೈನಲ್‌ ಹಣಾಹಣಿಯಿಂದ ತಮ್ಮನ್ನು ಹೊರಗಿಟ್ಟದ್ದನ್ನು ಪ್ರಶ್ನಿಸಿ ಹಾಗೂ ತಮಗೂ ಜಂಟಿ ಬೆಳ್ಳಿ ಪದಕ ನೀಡುವಂತೆ ಕೋರಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಗೆ (ಸಿಎಎಸ್) ವಿನೇಶ್‌ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ, ಪ್ಯಾರಿಸ್‌ನಲ್ಲೇ ಉಳಿದಿದ್ದರು. ಅವರ ಮನವಿ ಬುಧವಾರ ತಿರಸ್ಕೃತಗೊಂಡಿತ್ತು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತ ತಂಡದ ಷೆಫ್ ಡಿ ಮಿಷನ್‌ (ಸಿಡಿಎಂ) ಆಗಿದ್ದ ಗಗನ್‌ ನಾರಂಗ್‌ ಅವರೂ ವಿನೇಶ್‌ ಜೊತೆ ದೆಹಲಿಗೆ ಆಗಮಿಸಿದ್ದಾರೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ನಾರಂಗ್‌, ಪ್ಯಾರಿಸ್‌ ವಿಮಾನ ನಿಲ್ದಾಣದಲ್ಲಿ ವಿನೇಶ್‌ ಜೊತೆಗಿರುವ ಚಿತ್ರವನ್ನು ಟ್ವಿಟರ್‌/ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

'ಅವರು (ವಿನೇಶ್‌ ಫೋಗಟ್‌) ಚಾಂಪಿಯನ್‌ ರೀತಿಯಲ್ಲೇ ಮೊದಲ ದಿನ ಕ್ರೀಡಾಗ್ರಾಮಕ್ಕೆ ಬಂದಿದ್ದರು. ಕೆಲವೊಮ್ಮೆ ಕೋಟ್ಯಂತರ ಜನರ ಕನಸುಗಳನ್ನು ಪ್ರೇರೇಪಿಸಲು ಕೆಲವರಿಗೆ ಒಲಿಂಪಿಕ್‌ ಪದಕ ಬೇಕಾಗುವುದಿಲ್ಲ. ವಿನೇಶ್‌ ಫೋಗಟ್‌ ಒಂದು ತಲೆಮಾರಿಗೆ ಸ್ಫೂರ್ತಿಯಾಗಿದ್ದಾರೆ. ನಿಮ್ಮ ಸ್ಥೈರ್ಯಕ್ಕೆ ನಮನ' ಎಂದು ಬರೆದುಕೊಂಡಿದ್ದಾರೆ.

ಸಾಕ್ಷಿ ಮಲಿಕ್‌ ಅವರು, 'ವಿನೇಶ್‌ ಬಹುದಿನಗಳ ನಂತರ ದೇಶಕ್ಕೆ ಮರಳಿದ್ದಾರೆ. ತುಂಬಾ ಭಾವುಕರಾಗಿದ್ದಾರೆ. ಕುಟುಂಬದೊಂದಿಗೆ ಕೆಲ ಸಮಯ ಕಳೆದು, ತಮ್ಮನ್ನು ತಾವು ಸಮಾಧಾನಪಡಿಸಿಕೊಳ್ಳಲಿದ್ದಾರೆ. ಮಹಿಳೆಯರಿಗಾಗಿ ವಿನೇಶ್‌ ಏನೆಲ್ಲ ಮಾಡಿದ್ದಾರೋ ಅದು ಪ್ರಶಂಸನೀಯವಾದದ್ದು. ಅವರು ಪದಕ ಗೆಲ್ಲದೇ ಇರಬಹುದು. ಆದರೆ, ಆಕೆ ನಮ್ಮೆಲ್ಲರ ಪಾಲಿಗೆ ಚಾಂಪಿಯನ್' ಎಂದಿದ್ದಾರೆ.

'ವಿನೇಶ್‌ಗೆ ಸ್ವಾಗತ ಕೋರಲು ನಮ್ಮ ಹಳ್ಳಿಯ ಜನರು ಕಾಯುತ್ತಿದ್ದಾರೆ. ಆಕೆಯನ್ನು ಭೇಟಿ ಮಾಡಲು ಮತ್ತು ಹುರಿದುಂಬಿಸಲು ಉತ್ಸುಕರಾಗಿದ್ದಾರೆ' ಎಂದು ಸಹೋದರ ಹರ್ವಿಂದರ್‌ ಫೋಗಟ್‌ ಹೇಳಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಮರುದಿನವೇ ವಿನೇಶ್ ಅವರು ಕುಸ್ತಿಗೆ ವಿದಾಯ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT