ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Year Ender 2022 | ಕ್ರೀಡಾ ಜಗತ್ತನ್ನು ದಿಗ್ಭ್ರಮೆಗೆ ತಳ್ಳಿದ ಸಾವುಗಳಿವು

2022ರಲ್ಲಿ ವಿಧಿಗೆ ಶರಣಾದ ಕ್ರೀಡಾಪಟುಗಳ ಸಂಕ್ಷಿಪ್ತ ವಿವರ
Last Updated 28 ಡಿಸೆಂಬರ್ 2022, 6:34 IST
ಅಕ್ಷರ ಗಾತ್ರ

2022 ಅಂತ್ಯವಾಗುತ್ತಿದೆ. ಹಲವು ನೆನಪು, ಸಿಹಿ–ಕಹಿಗಳನ್ನು ಉಣಬಡಿಸಿ, ವಿದಾಯ ಹೇಳಲು ಸಜ್ಜಾಗುತ್ತಿದೆ. ಮರೆಯಲಾದ ದುಃಖ, ಸದಾ ನೆನಪಲ್ಲಿರುವ ಖುಷಿಗಳು ಈ ವರ್ಷ ಜತೆಯಾಗಿವೆ. ಕೊರೊನಾ ಬಳಿಕ ಕ್ರೀಡೆ ಮತ್ತೆ ಪುಟಿದೆದ್ದಿದ್ದು, ಅಭಿಮಾನಿಗಳಿಗೆ ಹರ್ಷ ನೀಡಿದರೆ, ಹಲವು ದಿಗ್ಗಜ ಆಟಗಾರರ ಅಕಾಲಿಕ ಮರಣ ಕ್ರೀಡಾ ಜಗತ್ತಿಗೆ ದಿಗ್ಭ್ರಮೆ ಉಂಟು ಮಾಡಿದೆ. 2022ರಲ್ಲಿ ನಮ್ಮಿಂದ ಅಗಲಿದ ಖ್ಯಾತ ಆಟಗಾರರ ಸಂಕ್ಷಿಪ್ತ ವಿವರ ಇಲ್ಲಿದೆ.

ಶೇನ್‌ ವಾರ್ನ್‌

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ, ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌ ಅವರ ಅಕಾಲಿಕ ಮರಣ ಇಡೀ ಕ್ರಿಕೆಟ್‌ ಜಗತ್ತನ್ನು ದುಃಖಕ್ಕೆ ತಳ್ಳುವಂತೆ ಮಾಡಿತು. ಥೈಲೆಂಡ್‌ನ ರೆಸಾರ್ಟ್‌ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಅವರ ದೇಹ ‍ಪತ್ತೆಯಾಗಿತ್ತು. ವಿಚಿತ್ರ ತಿರುವು ಪಡೆದುಕೊಳ್ಳುತ್ತಿದ್ದ ಸ್ಪಿನ್‌ ಬೌಲಿಂಗ್‌ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದ ವಾರ್ನ್‌, ತಮ್ಮ 52ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಮಾರ್ಚ್‌ 4 ರಂದು ಅವರು ಮೃತಪಟ್ಟಿದ್ದರು. ಮರಣೋತ್ತರ ವರದಿಯಲ್ಲಿ ಸಹಜ ಸಾವಿ ಎಂದು ತಿಳಿದು ಬಂತು.

ಆಂಡ್ರ್ಯೂ ಸೈಮಂಡ್ಸ್

ಬ್ಯಾಟಿಂಗ್‌, ಬೌಲಿಂಗ್‌, ಅದ್ಭುತ ಫೀಲ್ಡಿಂಗ್‌ ಮೂಲಕ ಕ್ರಿಕೆಟ್‌ ಪ್ರೇಮಿಗಳ ಮನಸ್ಸಲ್ಲಿ ಭದ್ರವಾಗಿದ್ದ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಅವರು ಕಾರು ಅಪಘಾತಕ್ಕೆ ಬಲಿಯಾಗಿ ದಾರುಣ ಅಂತ್ಯ ಕಂಡರು. ಶೇನ್‌ ವಾರ್ನ್‌ ಸಾವಿಗೀಡಾದ ಎರಡನೇ ತಿಂಗಲ್ಲಿ ಸೈಮಂಡ್ಸ್‌ ಅವರು ಮೃತಪಟ್ಟಿದ್ದು, ಕ್ರಿಕೆಟ್‌ ಜಗತ್ತಿಗೆ ದಿಗ್ಭ್ರಮೆ ಉಂಟು ಮಾಡಿತು. ಮೇ 14 ರಂದು ಅವರು ಕಾಲವಾದರು. ಅವರಿಗೆ 46 ವರ್ಷವಾಗಿತ್ತು.

ಬಿಲ್‌ ರೆಸೆಲ್‌

11 ಚಾಂಪಿಯನ್‌ಶಿಪ್‌ ಗೆದ್ದು ದಾಖಲೆ ಬರೆದಿರುವ ಖ್ಯಾತ ಬಾಸ್ಕೆಟ್‌ ಬಾಲ್‌ ಆಟಗಾರ ಬಿಲ್‌ ರೆಸೆಲ್‌ ಅವರು ಈ ವರ್ಷ ಕಾಲವಾದರು. ಜುಲೈ 31 ರಂದು ತಮ್ಮ 88 ನೇ ವಯಸ್ಸಿನಲ್ಲಿ ಅವರು ಸಾವಿಗೀಡಾದರು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ನಾಗರಿಕ ಹಕ್ಕುಗಳ ಕಾರ್ಯಕರ್ತನಾಗಿಯೂ ಹಲವು ಚಳವಳಿಯಲ್ಲಿ ಭಾಗಿಯಾಗಿದ್ದರು. ಅವರ ಮರಣದೊಂದಿಗೆ ಅದ್ಭುತ ಬಾಸ್ಕೆಟ್ ಬಾಲ್ ಆಟಗಾರ ಮಾತ್ರವಲ್ಲ, ಉತ್ತಮ ಮಾನವೀಯ ಮೌಲ್ಯ ಇರುವ ವ್ಯಕ್ತಿಯೊಬ್ಬರ ಅಂತ್ಯವಾಯ್ತು.

ಅಸದ್ ರವೂಫ್‌

ಐಸಿಸಿ ಪ್ಯಾನಲ್‌ ಎಲೈಟ್ ಅಂಪೈರ್ ಆಗಿದ್ದ ಪಾಕಿಸ್ತಾನದ ಅಸದ್ ರವೂಫ್‌ ಅವರು ಸೆಪ್ಟೆಂಬರ್‌ 14 ರಂದು ಹೃದಯಾಘಾತಕ್ಕೆ ಬಲಿಯಾದರು. ಕೋವಿಡ್‌ನಿಂದಾಗಿ ಆದಾಯದ ಮೂಲ ಕಳೆದುಕೊಂಡಿದ್ದ ಅವರು, ಪಾದರಕ್ಷೆಗಳನ್ನು ಮಾರಾಟ ಮಾಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೆಲವೇ ದಿನಗಳಲ್ಲಿ ಅವರು ಮೃತಪಟ್ಟ ಸುದ್ದಿ ಬಂತು. ಲಾಹೋರ್‌ನಲ್ಲಿ ಅವರು ಕಾಲವಾದರು. 64 ಟೆಸ್ಟ್‌ ಪಂದ್ಯ, 139 ಏಕದಿನ ಪಂದ್ಯ ಹಾಗೂ 28 ಟಿ–20 ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು. 2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದ ಬಳಿಕ ಅವರಿಗೆ ಐದು ವರ್ಷ ನಿಷೇಧ ಹೇರಲಾಗಿತ್ತು. ಅಂಪೈರ್‌ ಆಗುವುದಕ್ಕೂ ಮುನ್ನ ಅವರು ಪ್ರಥಮ ದರ್ಜೆ ಕ್ರಿಕೆಟ್‌ ಆಟಗಾರರಾಗಿದ್ದರು.

ನಿಕ್‌ ಬೊಲ್ಲಾಟ್ಟಿರಿ


ಮರಿಯಾ ಶರಪೋವಾ, ಆಂಡ್ರೆ ಅಗಸಿ ಹಾಗೂ ಮೋನಿಕಾ ಮುಂತಾದ ಜಗತ್‌ ವಿಖ್ಯಾತ ಟೆನ್ನಿಸ್‌ ತಾರೆಗಳ ಕೋಚ್‌ ಆಗಿದ್ದ ನಿಕ್‌ ಬೊಲ್ಲಾಟ್ಟಿರಿ ಡಿಸೆಂಬರ್‌ 4 ರಂದು, ತಮ್ಮ 91ನೇ ವಯಸ್ಸಿನಲ್ಲಿ ವಿಧಿವಶರಾದರು. ಇವರ ತರಬೇತಿಯಲ್ಲಿ ಪಳಗಿದ 6 ಮಂದಿ ಟೆನ್ನಿಸ್‌ ಆಟಗಾರರು ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ರಾಡ್‌ ಮಾರ್ಶ್‌

‘ಐರನ್ ಗ್ಲೌಸ್‌‘ ಎಂದೇ ಖ್ಯಾತರಾಗಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ರಾಡ್‌ ಮಾರ್ಶ್‌ ಅವರು ಮಾರ್ಚ್‌ 4 ರಂದು ವಿಧಿಯ ಮುಂದೆ ಶರಣಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. 1970ರಲ್ಲಿ ಕ್ರಿಕೆಟ್ ವೃತ್ತಿ ಆರಂಭಿಸಿದ್ದ ಅವರು, ಆಸ್ಟ್ರೇಲಿಯಾ ಪರ 92 ಏಕದಿನ ಪಂದ್ಯಗಳನ್ನು ಆಡಿದ್ದರು. ಪಾಕಿಸ್ತಾನದ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಕ್ರಿಕೆಟಿಗ ಎನ್ನುವ ಅಗ್ಗಳಿಕೆ ಇವರದ್ದು. ಅಡಿಲೇಡ್‌ನ ಆಸ್ಪತ್ರೆಯೊಂದರಲ್ಲಿ ಇವರು ಮೃತರಾದರು.

ರೂಡಿ ಕರ್ಜನ್‌

ದಕ್ಷಿಣ ಆಫ್ರಿಕಾ ಮೂಲದ ಕ್ರಿಕೆಟ್‌ ಅಂಪೈರ್ ರೂಡಿ ಕರ್ಜನ್‌ ಅವರು, ಆಗಸ್ಟ್‌ 9 ರಂದು ಗಾಲ್ಫ್‌ ಆಟವಾಡಿ ಮನೆಗೆ ಮರಳುತ್ತಿದ್ದ ವೇಳೆ ಕಾರು ಅಪಘಾತ ಸಂಭವಿಸಿ ಮೃತಪಟ್ಟರು. ನಿಧಾನವಾಗಿ ಕೈ ಎತ್ತಿ ಔಟ್‌ ನೀಡುತ್ತಿದ್ದ ಅವರ ಶೈಲಿ ಭಾರಿ ಹೆಸರು ಪಡೆದಿತ್ತು. ಕ್ರಿಕೆಟ್‌ ಜಗತ್ತಿನಲ್ಲಿ ಆ ಶೈಲಿಗೆ ‘ಸ್ಲೋ ಫಿಂಗರ್‌ ಟು ಡೆತ್‌‘ ಎನ್ನುವ ಹೆಸರಿತ್ತು.

ಚರಣ್‌ಜಿತ್‌ ಸಿಂಗ್‌

1964ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಹಾಕಿ ತಂಡದ ನಾಯಕನಾಗಿದ್ದ ಚರಣ್‌ಜಿತ್‌ ಸಿಂಗ್ ಅವರು ಜನವರಿ 27 ರಂದು ಹೃದಯಾಘಾತಕ್ಕೆ ಬಲಿಯಾದರು. ಆ ಕಾಲದಲ್ಲಿ ಭಾರತೀಯ ಕ್ರೀಡಾಪಟುಗಳ ಪೈಕಿ ಅತೀ ಹೆಚ್ಚು ಪ್ರಚಲಿತದಲ್ಲಿ ಇದ್ದರು. 1960ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹಾಕಿ ತಂಡದಲ್ಲೂ ಚರಣ್‌ಜಿತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT