ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಪ್ರಶಸ್ತಿಗೆ ಅಗ್ನೆಸ್; ಇಥಿಯೋಪಿಯಾದ ಬೆಲಿಹು ಪ್ರಥಮ

ಬೆಂಗಳೂರು ವಿಶ್ವ ಟೆನ್‌–ಕೆ: ಸಂಜೀವನಿ, ಕರಣ್ ಸಿಂಗ್ ಗೆ ಚಿನ್ನ
Last Updated 19 ಮೇ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ಆಗಸದಲ್ಲಿ ರವಿಯು ಮೊಗವ ತೋರುವ ಮುನ್ನವೇ ಸಾವಿರ ಸಾವಿರ ಸಂಖ್ಯೆಯಲ್ಲಿ ಕಂಠೀರವ ಕ್ರೀಡಾಂಗಣಕ್ಕಿಳಿದ ಬೆಂಗಳೂರು ಜನತೆ, ಮುಖದ ತುಂಬಾ ಉತ್ಸಾಹದ ಚಿಲುಮೆ ಪುಟಿಯುತ್ತಿತ್ತು. ರಂಗುರಂಗಿನ ಜೆರ್ಸಿ ತೊಟ್ಟವರು ರಸ್ತೆಗಳಿಗೆ ಲಗ್ಗೆ ಇಟ್ಟರು. ಡಿಜೆ ಸಂಗೀತದ ಹಿನ್ನೆಲೆಯು ಭಾನುವಾರದ ಬೆಳಗಿಗೆ ಬಿಸಿಯೇರಿಸಿತು.

ಈ ಎಲ್ಲ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟಿದ್ದು 12ನೇ ಆವೃತ್ತಿಯ ಟಿಸಿಎಸ್ ವಿಶ್ವ ಟೆನ್‌–ಕೆ ಓಟದ ಹಬ್ಬ. ಈ ಉತ್ಸವದಲ್ಲಿ ಇಥಿಯೊಪಿಯಾದ ಆ್ಯಂಡ್‌ಮಾಕ್ ಬೆಲಿಹು ಮತ್ತು ಕೀನ್ಯಾದ ಆಗ್ನೆಸ್ ಟೈರಪ್ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿಯ ಸಿಹಿ ಸವಿದರು.

ಪುರುಷರ ವಿಭಾಗದಲ್ಲಿ ಕಠಿಣ ಪೈಪೋಟಿಯನ್ನು ಎದುರಿಸಿದ ಇಥಿಯೊಪಿಯಾದ ಬೆಲಿಹು 27 ನಿಮಿಷ, 56 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಉಗಾಂಡಾದ ಮಾಂಡೆ ಬುಷೆಂಡಿಚ್ (28ನಿ,03ಸೆ) ಮತ್ತು ಇಥಿಯೊಪಿಯಾದ ಬಿರ್ಹಾನು ಲೆಗೆಸ್ (28ನಿ, 23ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ದಾಖಲೆ ಬರೆದ ಆಗ್ನೆಸ್: ಕೀನ್ಯಾದ ಓಟಗಾರ್ತಿ ಆಗ್ನೆಸ್ ಹೋದ ವರ್ಷವೂ ಚಾಂಪಿಯನ್ ಆಗಿದ್ದರು. 12 ವರ್ಷಗಳ ಇತಿಹಾಸವಿರುವ ಬೆಂಗಳೂರು 10ಕೆ ಓಟದಲ್ಲಿ ಎರಡನೇ ಪ್ರಶಸ್ತಿ ಗೆದ್ದ ಏಕೈಕ ಅಥ್ಲೀಟ್‌ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು 33:55 ನಿಮಿಷಗಳ ಅವಧಿಯಲ್ಲಿ ಅವರು ನಿಗದಿತ ಗುರಿ ತಲುಪಿದರು. ಇದು ಹೋದ ವರ್ಷ ಅವರು ದಾಖಲಿಸಿದ್ದ ಕೂಟ ದಾಖಲೆಗಿಂತ ಎರಡು ನಿಮಿಷಗಳ ಹೆಚ್ಚು ಸಮಯ ತೆಗೆದುಕೊಂಡರು.

ಈ ವಿಭಾಗದ ದ್ವಿತೀಯ ಸ್ಥಾನವು ಇಥಿಯೋಪಿಯಾದ ಲೆಟೆಸನ್‌ಬೆಟ್‌ ಗಿಡಿ ಅವರ ಪಾಲಾಯಿತು. ಆಗ್ನೆಸ್‌ ಟೈರಪ್‌ರಷ್ಟೇ (33:55) ಸಮಯವನ್ನು ಅವರು ತೆಗೆದುಕೊಂಡರೂ ಮಿಲಿ ಸೆಕೆಂಡ್‌ನಲ್ಲಿ ಅಂತರವಿತ್ತು. ಇಥಿಯೋಪಿಯಾದವರೇ ಆದ ಸೆನ್ಬೆರೆ ಟೆಪೆರಿ ಮೂರನೇ ಸ್ಥಾನವನ್ನು ಪಡೆದರು. ಅಪಾರ ಭರವಸೆ ಮೂಡಿಸಿದ್ದ ಬಹ್ರೇನ್‌ನ ರೋಸ್‌ ಚೆಲಿಮೊ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅವರು 35:08 ನಿಮಿಷಗಳ ಸಮಯ ತೆಗೆದುಕೊಂಡರು.

ಸಂಜೀವನಿ, ಕರಣ್ ಪ್ರಥಮ

ಭಾರತೀಯರ ವಿಭಾಗದ ಓಟದಲ್ಲಿ ಸಂಜೀವನಿ ಜಾಧವ್ ಮತ್ತು ಕರಣ್ ಸಿಂಗ್ ಅವರು ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಸಂಜೀವನಿ ಅವರು ಒಟ್ಟು 35 ನಿಮಿಷ, 10 ಸೆಕೆಂಡುಗಳಲ್ಲಿ ಗುರಿ ತಲುಪಿದರು.ಈ ವಿಭಾಗದಲ್ಲಿ ಸತತ ಎರಡನೇ ಸಲ ಪ್ರಶಸ್ತಿ ಗೆದ್ದ ಸಾಧನೆಯನ್ನೂ ಅವರು ಮಾಡಿದರು. 2017ರ ಏಷ್ಯನ್‌ ಚಾಂಪಿಯನ್‌ಷಿಪ್‌ನ ಐದು ಸಾವಿರ ಮೀಟರ್ಸ್‌ ಓಟದಲ್ಲಿ ಅವರು ಕಂಚಿದ ಪದಕ ಗೆದ್ದಿದ್ದರು. ಪಾರುಲ್‌ ಚೌಧರಿ ದ್ವಿತೀಯ ಹಾಗೂ ಚಿಂತಾ ಯಾದವ್‌ ತೃತೀಯ ಸ್ಥಾನ ಪಡೆದರು.

ಮುಕ್ತ ಸ್ಪರ್ಧೆಯಲ್ಲಿ 16,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಸಮಾಜವು ತಮ್ಮನ್ನು ಸಮಾನತೆಯ ದೃಷ್ಟಿಯಿಂದ ನೋಡಬೇಕೆಂಬ ದೃಷ್ಟಿಯಿಂದ ತೃತೀಯ ಲಿಂಗಿಗಳೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. 10 ಕಿಲೋಮೀಟರ್ಸ್‌ನ ಪೊಲೀಸ್‌ ಕಪ್‌ , 4.2 ಕಿ.ಮೀ.ನ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸ್ಪರ್ಧೆ ಹಾಗೂ ಮಜಾ ರನ್‌ ವಿಭಾಗಗಳ ಸ್ಪರ್ಧೆಗಳು ಗಮನ ಸೆಳೆದವು.

ಸ್ಪೇನ್‌ನ ಟೆನಿಸ್‌ ಪಟು ಹಾಗೂ ಬೆಂಗಳೂರು 10ಕೆ ಪ್ರಚಾರ ರಾಯಭಾರಿ ಅರಾಂತಾ ಸ್ಯಾಂಚೇಜ್‌ ವಿಕಾರಿಯೊ, ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್‌ ಅವರು ಓಟಕ್ಕೆ ಚಾಲನೆ ನೀಡಿದರು.

ಫಲಿತಾಂಶಗಳು (ಮೊದಲ 6 ಸ್ಥಾನಗಳು)

ಪುರುಷರ ಎಲೀಟ್ ಸ್ಪರ್ಧೆ: ಅಂಡಮಾಕ್‌ ಬೆಲಿಹು (ಇಂಥಿಯೋಪಿಯಾ) –1, ಕಾಲ: 27ನಿಮಿಷ, 56ಸೆಕೆಂಡುಗಳು. ಮಾಂಡೆ ಬುಷೆಂಡಿಚ್‌ (ಉಗಾಂಡಾ)–2, ಬಿರ್ಹಾನು ಲೆಗೆಸ್‌(ಇಥಿಯೋಪಿಯಾ) –3. ಜೆಫ್ರಿ ಕೋಯಿಚ್‌ (ಕೀನ್ಯಾ) –4, ಮ್ಯಾಥ್ಯು ಕಿಮೆಲಿ (ಕೀನ್ಯಾ)–5, ಪಾಲ್‌ ತಾನುಯಿ (ಕೀನ್ಯಾ) –6.

ಭಾರತ ವಿಭಾಗ: ಕರಣ್‌ ಸಿಂಗ್‌ –1, ಕಾಲ: 29ನಿಮಿಷ, 55ಸೆಕೆಂಡು. ಲಕ್ಷ್ಮಣನ್‌ ಗೋವಿಂದನ್‌ –2. ಅವಿನಾಶ್ ಸಬಲೆ –3, ಶ್ರೀನು ಬುಗತಾ_4, ದಿನೇಶ್‌ –5, ದುರ್ಗಾ ಬಹಾದ್ದೂರ್‌ ಬುಧಾ –6

ಮಹಿಳೆಯರು: ಅಗ್ನೆಸ್‌ ಟೈರಪ್‌ (ಕೀನ್ಯಾ) –1, ಕಾಲ: 33:55. ಸೆನ್ಬೆರೆ ಟೆಫೆರಿ (ಇಥಿಯೋಪಿಯಾ)–2, ಲೆಟ್ಸೆನ್‌ಬೆಟ್‌ ಗಿಡಿ (ಇಥಿಯೋಪಿಯಾ) –3, ನೆಟ್‌ಸಾನೆಟ್‌ ಗುಡೆಟಾ (ಇಥಿಯೋಪಿಯಾ)–4, ಡೆರಾ ಡಿಡಾ( ಇಥಿಯೋಪಿಯಾ) –5, ಶೆಯ್‌ ಗೆಮೆಚು (ಇಥಿಯೋಪಿಯಾ) –6.

ಭಾರತ ವಿಭಾಗ: ಸಂಜೀವನಿ ಜಾಧವ್‌ –1, ಕಾಲ: 35ನಿಮಿಷ, 10ಸೆಕೆಂಡು, ಪಾರುಲ್‌ ಚೌಧರಿ –2, ಚಿಂತಾ ಯಾದವ್‌ –3, ಕಿರಣ್‌ –4, ಮಂಜು ಯಾದವ್‌ –5, ಜ್ಯೋತಿ ಚೌಹಾನ್‌ –6.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT