ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿನಿಕಲ್ ರಿಸರ್ಚ್: ಹೊಸ ವಲಯದ ಉದಯ...

Last Updated 4 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನದ ಇತ್ತೀಚಿನ ಬೆಳವಣಿಗೆಗಳು ಜಗತ್ತಿನಾದ್ಯಂತ ಇರುವ ಸಾವಿರಾರು ಹೆಲ್ತ್‌ಕೇರ್ ಕಂಪೆನಿಗಳಿಗೆ ಒಂದು ವರವಾಗಿ ಪರಿಣಮಿಸಿದೆ. ಐಟಿ ವಲಯದಲ್ಲಿನ ಉದ್ಯೋಗಗಳಿಗಿರುವಂತೆಯೇ ಕ್ಲಿನಿಕಲ್ ರಿಸರ್ಚ್ ಉದ್ಯೋಗಗಳಿಗೂ ಭಾರತ ಒಂದು ಹೊರಗುತ್ತಿಗೆಯ ಮೂಲವಾಗಿ ಅಭಿವೃದ್ಧಿ ಹೊಂದುತ್ತಿದೆ.

 ವೈದ್ಯಕೀಯ ಔಷಧಿಗಳ(ಮೆಡಿಕಲ್ ಡ್ರಗ್ಸ್) ಪರಿಣಾಮವನ್ನು ಕಲ್ಪನಾ ಶೋಧನೆ ಪ್ರಯೋಗ(ಡಿವೈಸ್ ಟ್ರೈಯಲ್ಸ್)ಗಳಲ್ಲಿ ನಿಷ್ಕರ್ಷಿಸಲು  ಕ್ಲಿನಿಕಲ್ ರಿಸರ್ಚ್ ಅನ್ನು ವಿವಿಧ ಹಂತಗಳಲ್ಲಿ  ನಡೆಸಲಾಗುವುದು. ಪ್ರಾಣಿಗಳ ಮೇಲಿನ ಪ್ರಯೋಗಗಳಿಂದ ಹಿಡಿದು, ಆರೋಗ್ಯವಂತ ಸ್ವಯಂ ಸೇವಕರು ಮತ್ತು ನಿರ್ದಿಷ್ಠ ರೋಗಗಳಿಂದ ಬಾಧಿಸಲ್ಪಡುತ್ತಿರುವ ವ್ಯಕ್ತಿಗಳ ಮೇಲೆ ಸಹ ಪ್ರಯೋಗಗಳನ್ನು ನಡೆಸಲಾಗುವುದು.

ಉದಯವಾಗುತ್ತಿರುವ ಅಸಂಖ್ಯಾತ ಕೌಶಲ್ಯ ಭರಿತ ಉದ್ಯೋಗಗಳು ಮತ್ತು ಜಗತ್ತಿನಾದ್ಯಂತ ಏರುಪೇರಾಗುತ್ತಿರುವ ಆರ್ಥಿಕತೆಯಿಂದಾಗಿ ಅತ್ಯಧಿಕ ಅಂತರರಾಷ್ಟ್ರೀಯ ಕಂಪೆನಿಗಳು ಹೊರಗುತ್ತಿಗೆಗಾಗಿ ಭಾರತದತ್ತ ಮುಖ ಮಾಡಿವೆ.

ಇದೊಂದು ರೀತಿಯ ಪ್ರಯೋಗವಾಗಿದ್ದು, ಮಾನವರ ಮೇಲೆ ಔಷಧಿಯ ಬಳಕೆ ಮತ್ತು ಅವುಗಳ ಪರಿಣಾಮದ ಅಧ್ಯಯನವನ್ನೊಳಗೊಂಡಿವೆ. ಯಾವುದಾದರೊಂದು ಕಾಯಿಲೆಯಿಂದ ನರಳುತ್ತಿರುವವರಿಗೆ ಆ ಕಾಯಿಲೆಯನ್ನು ಗುಣಪಡಿಸಬಲ್ಲ ಸೂಕ್ತ ಔಷಧಿಗಳ ಸಂಶೋಧನೆಯನ್ನು ಮಾಡಿ ಆ ಔಷಧಿ ಕಾಯಿಲೆ ಗುಣಪಡಿಸುವಲ್ಲಿ ಸಮರ್ಥವಾಗಿದೆಯೆಂದು ದೃಢೀಕರಿಸಿದ ನಂತರವಷ್ಟೇ ಅಂಗೀಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಅಮೆರಿಕಾ ಮತ್ತು ಇಂಗ್ಲೆಂಡ್‌ನ ಹಲವು ಕಂಪೆನಿಗಳು ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ಸ್ ನಡೆಸುವುದರಿಂದ ಶೇ 50 ರಷ್ಟು ವೆಚ್ಚ ಉಳಿತಾಯ ಮಾಡುತ್ತವೆ. ವೈವಿಧ್ಯ ಮಾನವ ಸಂಪನ್ಮೂಲ ಹೊಂದಿರುವ ಭಾರತ ಹಲವಾರು ರೋಗರುಜಿನಗಳ ತಾಣವೂ ಹೌದು.

ಅನೇಕ ತರದ ರೋಗಗಳಿಗೀಡಾದ ವ್ಯಕ್ತಿಗಳೂ ಇಲ್ಲಿ ಕಂಡುಬರುತ್ತಾರೆ. ಕ್ಯಾನ್ಸರ್‌ನಿಂದ ಹಿಡಿದು ಮಧುಮೇಹದವರೆಗೆ ನೂರಾರು ರೀತಿಯ ರೋಗಗಳು ಇಲ್ಲಿ ಕಾಣಸಿಗುತ್ತದೆ.

ಭಾರತೀಯರ ಈ ರೋಗ ವೈವಿಧ್ಯವೇ ಇಲ್ಲಿ ಕ್ಲಿನಿಕಲ್ ರಿಸರ್ಚ್ ಟ್ರಯಲ್‌ಗಳಿಗೆ ಅವಕಾಶದ ಬಾಗಿಲು ತೆರೆಯಲು ಕಾರಣವಾಗಿದೆ. ಆದ್ದರಿಂದ ವಿದೇಶಿ ಕಂಪೆನಿಗಳು ಪ್ರಯೋಗಗಳನ್ನು ಭಾರತದಲ್ಲಿ ನಡೆಸಿ, ಅಮೇರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸುತ್ತವೆಯಾದ್ದರಿಂದ, ಅತ್ಯಂತ ಸೂಕ್ಷ್ಮ ಮತ್ತು ನಿಖರವಾಗಿ ಪರಿಣಾಮಗಳನ್ನು ಗಮನಿಸಿ ಅಭ್ಯಾಸ ಮಾಡಿದ ನಂತರವಷ್ಟೇ ಪ್ರಾಯೋಗಿಕ ಫಲಿತಾಂಶವನ್ನು ನೀಡಬೇಕಾಗುತ್ತದೆ. ಕಂಪೆನಿ ನಿರ್ದೇಶಿಸಿದ ವಿಧಿವಿಧಾನಗಳಲ್ಲಿಯೇ  ಪ್ರಯೋಗಗಳನ್ನು ನಡೆಸಬೇಕಾಗುತ್ತದೆ.

ಹೊರಗುತ್ತಿಗೆಯಾಧರಿಸಿದರೆ ಕ್ಲಿನಿಕಲ್ ಟ್ರಯಲ್‌ಗಳ ಗುಣಮಟ್ಟವೇ ಒಂದು ಸವಾಲು. ಆದ್ದರಿಂದ ಉತ್ತಮ ಗುಣಮಟ್ಟವನ್ನು ನೀಡುವ ಸಂಸ್ಥೆಗಳಿಗೆ ಅತೀ ಹೆಚ್ಚು ಪ್ರಾಜೆಕ್ಟ್‌ಗಳು ದೊರೆಯಬಲ್ಲವು.

ಶೈಕ್ಷಣಿಕ ಅರ್ಹತೆ: ಜೀವಶಾಸ್ತ್ರ ವಿಷಯವನ್ನೊಳಗೊಂಡ ವಿಜ್ಞಾನ ಪದವಿ ಅಥವಾ ವೈದ್ಯಕೀಯ ಪದವಿ ಹೊಂದಿರುವವರು ಕ್ಲಿನಿಕಲ್ ರಿಸರ್ಚ್ ಕೋರ್ಸ್‌ಗೆ ಸೇರಲು ಅರ್ಹರು. ಇತರ ಜೀವ ವಿಜ್ಞಾನ ಪದವಿಗಳಾದ ಫಾರ್ಮಾಕಾಲಜಿ, ಫಾರ್ಮಸಿ, ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ, ಇಮ್ಯೂನಾಲಾಜಿ, ಫಿಸಿಯಾಲಾಜಿ, ನರ್ಸಿಂಗ್ ಪದವಿ ಗಳಿಸಿದ ಅಭ್ಯರ್ಥಿಗಳು ಕೂಡಾ ಪ್ರವೇಶ ಪಡೆಯಬಹುದು.

ಕ್ಲಿನಿಕಲ್ ರಿಸರ್ಚ್‌ನಲ್ಲಿ ಪಿ.ಜಿ. ಡಿಪ್ಲೊಮಾ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ಲಭ್ಯವಿವೆ. ಇದಕ್ಕಾಗಿ ಹಲವಾರು ಕ್ಲಿನಿಕಲ್ ರಿಸರ್ಚ್ ಸಂಸ್ಥೆಗಳು ತಲೆಎತ್ತಿವೆ. ಅವುಗಳಲ್ಲಿ ಐ.ಸಿ.ಆರ್.ಐ.( ಇಂಡಿಯನ್ ಕ್ಲಿನಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ) ಕೂಡಾ ಒಂದು.
ಕ್ಲಿನಿಕಲ್ ರಿಸರ್ಚ್‌ನಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳು ನೈತಿಕತೆಯ ಮೌಲ್ಯಗಳ ಹಿನ್ನೆಲೆಯಲ್ಲಿಯೇ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ.

ಹಣದ ಆಮಿಷಕ್ಕೊಳಗಾಗಿ ಯಾವುದೇ ಅನೈತಿಕವಾದ ಪ್ರಯೋಗವನ್ನು ಆತ ನಡೆಸುವಂತಿಲ್ಲವಾದ್ದರಿಂದ, ಸ್ವಯಂ ಶಿಸ್ತಿನ, ಆತ್ಮವಿಶ್ವಾಸವುಳ್ಳ, ಸ್ವಯಂ ಪ್ರೇರಣಾ ಮನೋಭಾವದ ಮಾನವ ದೇಹದ ಕುರಿತು ಸಂಶೋಧನೆಯಲ್ಲಿ ಆಸಕ್ತಿಯುಳ್ಳ ಯುವಜನರು ಈ ಕ್ಷೇತ್ರವನ್ನು ಪ್ರವೇಶಿಸಬಹುದು.

ಹಾಗೆಯೇ ಉದ್ಯೋಗ ನೀಡುವ ಕಂಪೆನಿಗಳೂ ಕೂಡ ತಂಡದಲ್ಲಿ ಉತ್ತಮವಾಗಿ ಯಾರದೇ ಮೇಲ್ವಿಚಾರಣೆ ಇಲ್ಲದೆ ಸ್ವತಂತ್ರ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬಲ್ಲ ಕೌಶಲಭರಿತ ವ್ಯಕ್ತಿಗಳನ್ನೇ ಆಯ್ಕೆ ಮಾಡಲು ಇಚ್ಛಿಸುತ್ತವೆ.

ಉದ್ಯೋಗಾವಕಾಶಗಳು: ಹಲವು ಉದ್ಯೋಗಗಳು ಈ ವಲಯದಲ್ಲಿವೆ. ಔಷಧಿ ಕಂಪೆನಿಗಳಲ್ಲಿ ಕ್ಲಿನಿಶಿಯನ್ಸ್, ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್,  ಕ್ಲಿನಿಕಲ್ ಡ್ಯಾಟಾ ಮೇನೇಜರ್ಸ್‌, ಪ್ರೋಗ್ರಾಮರ್ಸ್‌, ಸ್ಟಾಟಿಸ್ಟೀಶಿಯನ್ಸ್ ಮತ್ತು ಮೆಡಿಕಲ್ ರೈಟರ್ಸ್‌ ಹೀಗೆ ಅನೇಕ ಪಾತ್ರಗಳಲ್ಲಿ ಕಾರ್ಯನಿರ್ವಹಿಸಬಹುದು.

ಅಸೋಸಿಯೇಟೆಡ್ ಛೇಂಬರ್ಸ್‌ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ ಆಫ್ ಇಂಡಿಯಾ (ಅಸೋಚಾಮ್) ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ಕ್ಲಿನಿಕಲ್ ರಿಸರ್ಚ್  ಔದ್ಯೋಗಿಕ ಕ್ಷೇತ್ರದಲ್ಲಿ ಸುಮಾರು 50,000 ವೃತ್ತಿಪರರಿಗೆ ಉದ್ಯೋಗಗಳು ಹುಟ್ಟಿಕೊಳ್ಳಲಿವೆ. ಈ ವಲಯದಲ್ಲಿ ಜಗತ್ತಿನಾದ್ಯಂತ ಹೂಡಿಕೆ ನಲವತ್ತೈದು ಬಿಲಿಯನ್ ಡಾಲರ್. ಇದು ಶೇ 15 ರಷ್ಟು ಪ್ರಯೋಗಗಳನ್ನು ಭಾರತದಲ್ಲಿ ನಡೆಸುತ್ತದೆ.

ಮತ್ತು ಭಾರತದ ಕಂಪೆನಿಗಳಿಗೆ ಹತ್ತು ವರ್ಷ ತೆರಿಗೆ ವಿನಾಯಿತಿ ನೀಡಲಾಗುವುದರಿಂದ ಈ ಉದ್ಯಮವನ್ನು ಹೊಸದಾಗಿ ಆರಂಭಿಸಲು ಸೂಕ್ತ ಪ್ರೇರಣೆ ದೊರೆತಂತಾಗಿದೆ. ಜಗತ್ತಿನ ಫಾರ್ಮಾಸ್ಯುಟಿಕಲ್ಸ್‌ನ ದೈತ್ಯ ಎಂದೇ ಹೆಸರಾದ  ಎಲಿ ಲಿಲಿ  ಕಂಪೆನಿಯ ಹಲವಾರು ಪ್ರಾಜೆಕ್ಟ್‌ಗಳು ಭಾರತದಲ್ಲಿನ ಆಸ್ಪತ್ರೆಗಳಲ್ಲಿ, ಕ್ಲಿನಿಕಲ್ ರಿಸರ್ಚ್ ಸೆಂಟರ್‌ಗಳಲ್ಲಿ ನಡೆಯುತ್ತಿವೆ.

ಫೈಜರ್ ಕೂಡ ಒಂದು  ವಿದೇಶಿ ಔಷಧೀಯ ಕಂಪೆನಿಯಾಗಿದ್ದು, ಭಾರತದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಕ್ಲಿನಿಕಲ್ ಟ್ರಯಲ್ ಗಳನ್ನು ಕೈಗೊಂಡಿದೆ. ಗ್ಲಾಕ್ಸೋ, ಸ್ಮಿತ್ ಕ್ಲೈನ್, ಆಸ್ತ್ರಜನಿಕ, ನಿಕೋಲಸ್ ಪಿರ್ ಮಲ್, ರೋಚಿ ನಾವಾರ್ಟಿಸ್, ಎಸ್. ಐ. ಆರ್ ಓ. ಕ್ಲಿನ್ ಫಾರ‌್ಮ, ವೆಲ್ ಕ್ವೆಸ್ಟ್ ಇತ್ಯಾದಿ ಕಂಪೆನಿಗಳು ಕ್ಲಿನಿಕಲ್ ರಿಸರ್ಚ್‌ಗಾಗಿ ಭಾರತವನ್ನು ತಮ್ಮ ನೆಚ್ಚಿನ ತಾಣವನ್ನಾಗಿಸಿಕೊಂಡಿವೆ.

ಯಾವುದೇ ವಿಜ್ಞಾನದ ವಿದ್ಯಾರ್ಥಿಯಾಗಿದ್ದು, ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಅತೀವ ಆಸಕ್ತಿ ಇದ್ದು, ಸಮಾಜಕ್ಕೆ ಆರೋಗ್ಯವಲಯದಲ್ಲಿ ಔಷಧಿಗಳ ಮೂಲಕ ರೋಗಗಳನ್ನು ತಡೆಗಟ್ಟಿ ಅತ್ಯುತ್ತಮವಾದ ಕೊಡುಗೆ ನೀಡುವ ಉತ್ಕಟ ಅಭಿಲಾಷೆ ನಿಮ್ಮದಾಗಿದ್ದಲ್ಲಿ ಈ ವಲಯ ನಿಮ್ಮನ್ನು ತೆರೆದ ಬಾಹುಗಳೊಂದಿಗೆ ಆಹ್ವಾನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT