ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ನಿರ್ವಹಣೆ ಕೋರ್ಸ್

Last Updated 17 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಭಾ ರತ ಮೂಲತಃ ಹಳ್ಳಿಗಳ ರಾಷ್ಟ್ರ. ಗ್ರಾಮಗಳ ಏಳ್ಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬ ಮಹಾತ್ಮ ಗಾಂಧಿಯವರ ಆಶಯದಂತೆ, ಗ್ರಾಮ ಸ್ವರಾಜ್ಯದ ಕನಸು ಹೊತ್ತು ರೂಪುಗೊಂಡ ಕಾರ್ಯಕ್ರಮಗಳು ನೂರಾರು. ಆದರೆ ಸಂಪೂರ್ಣವಾಗಿ ಸಫಲವಾದವು ಕೆಲವು ಮಾತ್ರ.

ಗ್ರಾಮೀಣ ಪ್ರದೇಶದಲ್ಲಿ ಉದ್ಯಮಶೀಲತೆ, ಸರ್ಕಾರೇತರ ಸಂಘ ಸಂಸ್ಥೆಗಳ ಸಂಘಟನೆ ಮತ್ತು ಚಟುವಟಿಕೆಗಳು, ಸ್ವಯಂ ಉದೋಗ, ಸ್ವಯಂ ಸೇವಾ ಗುಂಪುಗಳ ರಚನೆ ಹಾಗೂ ನಿರ್ವಹಣೆ ರಾಷ್ಟ್ರದ ಆರ್ಥಿಕತೆಯ ಮೇಲೆ ಸಚೇತನ ಪರಿಣಾಮವನ್ನುಂಟು ಮಾಡುತ್ತದೆ. ಇದಕ್ಕಾಗಿ ಈ ವಲಯದಲ್ಲಿ ತರಬೇತಿ ಹೊಂದಿದ ವ್ಯಕ್ತಿಗಳ ಅವಶ್ಯಕತೆ ದೇಶದೆಲ್ಲೆಡೆ ಇದೆ. ಗ್ರಾಮೀಣ ಕೈಗಾರಿಕೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಸರ್ಕಾರಿ ವಲಯದಲ್ಲಿ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲದ ಸದ್ಬಳಕೆ ಗ್ರಾಮೀಣ ಪ್ರದೇಶದಲ್ಲಿ ಕ್ರಾಂತಿಯ ಅಲೆಯನ್ನೇ ತರಬಲ್ಲದು. 

ಪಂಚಾಯತ್ ರಾಜ್‌ನ ಪುನರ್ ಜಾಗೃತಿ, ಬದಲಾಗುತ್ತಿರುವ ಸಹಕಾರಿ ಸಂಘಗಳ ಉದ್ದೇಶಗಳು ಮತ್ತು ಸ್ವತಂತ್ರ ಆರ್ಥಿಕ ಬೆಳವಣಿಗೆಗಳು ಇಂದು ಗ್ರಾಮೀಣ ಶಿಕ್ಷಣ ಅಧ್ಯಯನದ ಪ್ರಾಮುಖ್ಯವನ್ನು ಎತ್ತಿ ಹಿಡಿದಿವೆ. ಗ್ರಾಮೀಣ ಅಭಿವೃದ್ಧಿ ಹಾಗೂ ನಿರ್ವಹಣೆಯ ಕೋರ್ಸ್‌ಗಳನ್ನು ಕೆಲವು ವಿವಿಗಳು ಆರಂಭಿಸಿವೆ.

ಗ್ರಾಮೀಣಾಭಿವೃದ್ಧಿಯ ಮೂಲ ಉದ್ದೇಶದಿಂದ ಆರಂಭವಾದ ಈ ವಿಶಿಷ್ಟ ವಿಷಯದ ಅನುಷ್ಠಾನದಲ್ಲಿ ಕೂಡ ವಿಶಿಷ್ಟತೆ ಇದೆ. ಸಾಮಾನ್ಯವಾಗಿ ಈ ವಿಷಯಗಳನ್ನು ಬೋಧಿಸುವ ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಆವರಣವನ್ನು ಗ್ರಾಮೀಣ ಪರಿಸರದ ಪರಿಕಲ್ಪನೆಯ ಆಧಾರದ ಮೇಲೆ ನಿರ್ಮಿಸಲಾಗಿದ್ದು,  ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು, ಹಳ್ಳಿಗಳ ಸಾಮಾಜಿಕ ಮತ್ತು ಆರ್ಥಿಕಾಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುವುದು.

ಕಾಲೇಜಿನ ಆವರಣವನ್ನು (ಕ್ಯಾಂಪಸ್) ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಗೆ ಅನುಕೂಲವಾಗುವಂತೆ, ವಿಶೇಷವಾದ ಸ್ಥಳವನ್ನು ಆಯ್ಕೆ ಮಾಡಿ ನಿರ್ಮಿಸಲಾಗುತ್ತದೆ. ಆ ಸ್ಥಳೀಯ ಪ್ರದೇಶದ ಬೇಡಿಕೆಗನುಗುಣವಾಗಿ ಮತ್ತು ಅಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಿಗನು ಗುಣವಾಗಿ ವಿದ್ಯಾರ್ಥಿಗಳ ತರಬೇತಿಗೆ ಹೆಚ್ಚಿನ ಮಹತ್ವ ನೀಡಲಾಗುವುದು.

 ಈ ರೂರಲ್ ಡೆವಲಪ್‌ಮೆಂಟ್ ಕ್ಯಾಂಪಸ್‌ನ ಪ್ರಮುಖ ಉದ್ದೇಶ ಸ್ಥಳೀಯ ಪ್ರದೇಶದ ಸೂಕ್ಷ್ಮ ಅವಲೋಕನ, ಅಧ್ಯಯನ ಮತ್ತು ವೈಜ್ಞಾನಿಕ ಸಂಶೋಧನೆಯ ಮೂಲಕ ಸ್ಥಳೀಯ ಮಟ್ಟದಲ್ಲಿ ಅವುಗಳ ಅನುಷ್ಠಾನ. ಇತ್ತೀಚಿಗೆ ನಡೆದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾಗಿ ಆಯ್ಕೆಯಾದ ಹೆಚ್ಚಿನ ಯುವಕ ಯುವತಿಯರು ಕೆಲಸ ನಿರ್ವಹಿಸಲಾಗದೇ ತೊಳಲಾಡುತ್ತಿರುವುದಕ್ಕೆ ಮತ್ತು ರಾಜೀನಾಮೆ ನೀಡುತ್ತಿರುವುದಕ್ಕೆ ಕಾರಣ ಈ ವಲಯದಲ್ಲಿ ಪ್ರಾಯೋಗಿಕ ಜ್ಞಾನವಿಲ್ಲದಿರುವುದೇ ಆಗಿದೆ.

 ಗುಜರಾತ್‌ನ ವೀರ್ ನರ್ಮದ ಸೌತ್ ಗುಜರಾತ್ ಯುನಿವರ್ಸಿಟಿಯಲ್ಲಿ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ, ಅಭಿವೃದ್ಧಿ ಮತ್ತು ಆಡಳಿತ, ರಚನಾಕ್ರಮ, ಪುನರ್ ನಿರ್ಮಾಣ, ಸಹಕಾರಿ ಸಂಘಗಳ ರಚನೆ ಇತ್ಯಾದಿ ವಿಷಯಗಳನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದು. 

ಈ ಶೈಕ್ಷಣಿಕ ಸಾಲಿನಿಂದ ಬೆಂಗಳೂರು ವಿಶ್ವವಿದ್ಯಾಲಯ ಹೊಸದಾಗಿ, ಗ್ರಾಮೀಣ ನಿರ್ವಹಣೆ (ರೂರಲ್ ಮ್ಯಾನೇಜ್ ಮೆಂಟ್) ಯಲ್ಲಿ ಪಿ.ಜಿ.ಡಿಪ್ಲೊಮ ಕೋರ್ಸ್ ಅನ್ನು ಆರಂಭಿಸುತ್ತಿದ್ದು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಒಂದು ವರ್ಷಾವಧಿಯ  ಈ ಕೋರ್ಸಿಗೆ ಸೇರಲು ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಹರಿರುತ್ತಾರೆ. 2011ನೇ ಸಾಲಿನಿಂದ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ  ತರಗತಿಗಳು ಪ್ರಥಮ ಬಾರಿಗೆ ಆರಂಭವಾಗಲಿವೆ.  

 ಅಸಕ್ತರು ಅರ್ಜಿಗಳನ್ನು ಜ್ಞಾನ ಜ್ಯೋತಿ ಆಡಿಟೋರಿಯಂ, ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಬೆಂಗಳೂರಿನಿಂದ ಪಡೆದು ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ:  080-22961746 ಅನ್ನು ಸಂಪರ್ಕಿಸಬಹುದು.
 
ವಾಸ್ತವತಾ ಪ್ರವೃತ್ತಿ:   ಈ ಶೈಕ್ಷಣಿಕ ವಿಷಯದ ಉದ್ದೇಶ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧಿಸುವುದಾದರೂ ಸಹ, ಸಾಮಾಜಿಕ ಕಾರ್ಯ ಮತ್ತು ವೃತ್ತಿಪರತೆ ಗ್ರಾಮೀಣ ಪ್ರಾಂತ್ಯಗಳ ಅಭಿವೃದ್ಧಿ ಮತ್ತು ನಿರ್ವಹಣೆಯೆಡೆಗೆ ವಿಶೇಷವಾದ ಒತ್ತು ನೀಡುವುದಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ಸಂಸ್ಥೆಯ ವತಿಯಿಂದ ಗ್ರಾಮಗಳ ಅಭಿವೃದ್ಧಿ ಮತ್ತು ವಿಕಾಸಕ್ಕಾಗಿ ಪ್ರಾಯೋಗಿಕ ಕಾರ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈ ಕಾಲೇಜುಗಳು ಕೇವಲ ಕಲಿಕೆ ಹಾಗೂ ಸಂಶೋಧನೆಯ ಕೇಂದ್ರಗಳಲ್ಲದೇ, ಸಾರ್ವಜನಿಕರಿಗೆ ಸೇವೆಯನ್ನು, ಸಲಹೆ ಸೂಚನೆಗಳನ್ನು ಜೊತೆಗೆ ಕಲಿಕಾ ಹಾಗೂ ಬೋಧನಾ ಸಾಮಗ್ರಿಗಳನ್ನು ಒದಗಿಸುತ್ತವೆ.
 
ಬೋಧನೆ ಮತ್ತು ವ್ಯಾಸಂಗಕ್ರಮ: ಈ ಕೋರ್ಸ್‌ಗಳ ಬೋಧನಾ ಕ್ರಮವು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಸಮರ್ಪಕವಾಗಿ ರೂಪಿಸುವೆಡೆಗೆ ಸಂಪೂರ್ಣವಾಗಿ ಕೇಂದ್ರೀಕೃತವಾಗಿರುತ್ತದೆ. ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ, ಸರ್ಕಾರಿ ಹಾಗೂ ಸ್ವಯಂ ಸೇವಾ ವಲಯದೆಡೆ ವ್ಯವಸ್ಥಿತವಾದ ರೀತಿಯಲ್ಲಿ ನಿರ್ವಹಣೆ ಮತ್ತು ಸಾರ್ವಜನಿಕ ಸಂಪರ್ಕ ಕೌಶಲ್ಯವನ್ನು ವೃದ್ಧಿಸುವುದನ್ನೊಳಗೊಂಡಂತೆ, ಮಾನವ ಸಂಪನ್ಮೂಲದ ಸದ್ಬಳಕೆಗೆ ಒತ್ತು ನೀಡಲಾಗುವುದು.

ಸಂಶೋಧನಾ ಕ್ರಮ:
 ಗ್ರಾಮೀಣ ಅಧ್ಯಯನದ ಅತೀ ಮುಖ್ಯವಾದ ಅಂಶ ಸಂಶೋಧನೆ, ವಿದ್ಯಾರ್ಥಿಗಳು ಉಪನ್ಯಾಸಕರ ನೆರವಿನೊಂದಿಗೆ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿ, ಅಲ್ಲಿನ ಸಮಸ್ಯೆಗಳ ಕುರಿತ ಸಂಪೂರ್ಣ ಸಮೀಕ್ಷೆಯನ್ನು ನಡೆಸಿದ ನಂತರ, ಸಮಸ್ಯೆಯ ನಿರ್ವಹಣೆ ಮತ್ತು ಪರಿಹಾರಕ್ಕೆ ಸೂಕ್ತ ಯೋಜನೆಯನ್ನು ರೂಪಿಸಿ, ಅವುಗಳನ್ನು ಪ್ರಾಯೋಗಿಕವಾಗಿ ಬಳಕೆಗೆ ತಂದು, ಅದು ಸಫಲವಾದರೆ, ಅಂಕಿ ಅಂಶಗಳನ್ನು ಗಮನಿಸಿ, ಅಂತಹ ಕಾರ್ಯಕ್ರಮಗಳನ್ನು ಸರ್ಕಾರದ ವತಿಯಿಂದ, ನಮ್ಮ ದೇಶದಲ್ಲಿನ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲು ಶಿಫಾರಸ್ಸು ಮಾಡಲಾಗುತ್ತದೆ. ಇದರಿಂದ ಅಲ್ಲಿನ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಪರಿಹಾರ ಸಾಧ್ಯ  ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಪ್ರಾಯೋಗಿಕ ಜ್ಞಾನ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಪರಿಹಾರ ಕಾರ್ಯದಲ್ಲಿ ಭಾಗವಹಿಸುವಿಕೆ: ಈ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಪರಿಹಾರ ಕಾರ್ಯಗಳಲ್ಲಿ  ಭಾಗವಹಿಸಲು ಕರೆ ಬಂದಾಗ, ನೆರವು ಅಗತ್ಯವಿರುವೆಡೆಗೆ ಧಾವಿಸ ಬೇಕಾಗುತ್ತದೆ. ತಾವು ಅಧ್ಯಯನ ಕೈಗೊಂಡ ವಿಷಯಗಳನ್ನು ಚಟುವಟಿಕೆಗಳ ರೂಪದಲ್ಲಿ ವಿಸ್ತರಿಸಲು ಇದಕ್ಕಿಂತ ಉತ್ತಮ ವೇದಿಕೆ ಮತ್ತೊಂದಿರದು.

ನೈಸರ್ಗಿಕ, ಸಾಮಾಜಿಕ ಸಂದಿಗ್ಧ ಪರಿಸ್ಥಿತಿಗಳಲ್ಲಿ, ಸಾಕ್ಷರತಾ ಶಿಬಿರಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕಾಗುತ್ತದೆ. ಏಕೆಂದರೆ, ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಸಾಮಾಜಿಕ ಹೊಣೆಗಾರಿಕೆಯ ಅರಿವು ಸರಿಯಾಗಿ ಮೂಡಲು ಸಾಧ್ಯ.
ಸಾಮಾಜಿಕ ಹೊಣೆಗಾರಿಕೆ, ತಮ್ಮ ಕರ್ತವ್ಯಗಳ ಪರಿಪಾಲನೆಯ ಸರಿಯಾದ ಅರಿವು ಯುವಕರಲ್ಲಿ ಮೂಡಬಲ್ಲದು. 

 ಇತರರ ಒತ್ತಡಕ್ಕೆ ಮಣಿದು ಇಷ್ಟವಿರದ ಯಾವುದೋ ಶೈಕ್ಷಣಿಕ ಕೋರ್ಸ್‌ಗಳಿಗೆ ಪ್ರವೇಶ ಪಡೆದು ತಮ್ಮನ್ನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾರದೆ ತೊಳಲಾಡುವ ಬದಲು ಯುವಕರು, ಗ್ರಾಮೀಣ ಕ್ರಾಂತಿಗೆ, ದೇಶದ ಪ್ರಗತಿಗೆ ಪೂರಕವಾಗಬಲ್ಲ ಗ್ರಾಮೀಣಾಭಿವೃದ್ಧಿ ಹಾಗೂ ನಿರ್ವಹಣೆ ವಿಷಯವನ್ನು ಅಧ್ಯಯನಕ್ಕಾಯ್ದು ಕೊಂಡರೆ, ನಮ್ಮ ರಾಷ್ಟ್ರಪಿತ ಗಾಂಧೀಜಿಯವರು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸು ನನಸಾಗುವ ದಿನಗಳು ದೂರವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT