ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ಮೌಲ್ಯ ನಮ್ಮೆಲ್ಲರ ಅಗತ್ಯ

Last Updated 20 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಶಿಕ್ಷಣ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಅದು ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಬಲ್ಲದು. ಆದರೆ ಇತ್ತೀಚೆಗೆ, ಎಷ್ಟೆಲ್ಲ ಓದಿ ಏನೆಲ್ಲ ಕಲಿತರೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಕಡಿಮೆಯಾಗುತ್ತಿದೆ. ಸಮಾಜದಲ್ಲಿ ಎಲ್ಲೆಲ್ಲೂ ಲಂಚಕೋರತನ,  ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನೆಲ್ಲ ನಿಗ್ರಹಿಸಲು ದೇಶದಲ್ಲಿ ಲೋಕಪಾಲ್ ಮಸೂದೆಯಂತಹ ಬಲಿಷ್ಠ ಕಾನೂನನ್ನು ಜಾರಿಗೆ ತರಬೇಕು ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಪಟ್ಟು ಹಿಡಿದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಹೆಚ್ಚು ಕಲಿತವರು ಕೂಡ  ಸುಲಭವಾಗಿ ಭ್ರಷ್ಟರಾಗುತ್ತಿದ್ದಾರೆ. ಅವರಲ್ಲಿ ನೈತಿಕ ಮೌಲ್ಯಗಳು ಇಲ್ಲದಿರುವುದೇ ಇಂತಹ ಬೆಳವಣಿಗೆಗೆ ಪ್ರಮುಖ ಕಾರಣ. ಆದ್ದರಿಂದ ಶಾಲೆಯಿಂದ ಕಾಲೇಜು ಹಂತದವರೆಗೂ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ನೀಡಬೇಕು ಎಂಬ ಮಾತು ಶಿಕ್ಷಣ ವಲಯದಲ್ಲಿ ಕೇಳಿ ಬರುತ್ತಿದೆ.

ಹೀಗೆ ನೈತಿಕ ಮೌಲ್ಯದ ಮಹತ್ವ ಮನಗಂಡು, ಕೇಂದ್ರ ಲೋಕ­ಸೇವಾ ಆಯೋಗ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಆಡಳಿತಾತ್ಮಕ ಪರೀಕ್ಷೆಗಳ ಬದಲಾದ ಪಠ್ಯಕ್ರಮದಲ್ಲಿ ‘ಆಡಳಿತಾತ್ಮಕ ನೈತಿಕತೆ’ಯನ್ನು (ಅಡ್ಮಿನಿಸ್ಟ್ರೇಷನ್ ಎಥಿಕ್ಸ್) ಒಂದು ವಿಷಯವನ್ನಾಗಿ ಅಳವಡಿಸಲಾಗಿದೆ. ನಾಗರಿಕ ಸೇವೆಗಳಲ್ಲಿ ತೇರ್ಗಡೆ ಹೊಂದಿ ಜಿಲ್ಲೆಯ ಆಡಳಿತ ಅಥವಾ ಪೊಲೀಸ್‌ ಇಲಾಖೆಯ ಚುಕ್ಕಾಣಿ ಹಿಡಿಯುವ ಉನ್ನತ ಅಧಿಕಾರಿಗಳಿಗಂತೂ ನೈತಿಕ ಮೌಲ್ಯಗಳು ಬೇಕೇ ಬೇಕು. ಕಾನೂನು ಕಟ್ಟಳೆಯ ನಡುವೆಯೂ ಸಾರ್ವಜನಿಕರಿಗೆ, ಅಸಹಾಯಕರಿಗೆ, ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮಾನವೀಯತೆಯನ್ನು ಅವರು ತೋರಬೇಕಾಗುತ್ತದೆ.

ಉನ್ನತ ಅಧಿಕಾರಿಯೊಬ್ಬನಿಗೆ ಇರಬೇಕಾದ ಮಾನವೀಯ ಮೌಲ್ಯಗಳನ್ನು ಈ ಪರೀಕ್ಷೆಗಳಲ್ಲಿ ಅಳೆಯಲಾಗುತ್ತದೆ. ನೈತಿಕತೆ ಹೊಂದಿದ ಅಧಿಕಾರಿ ತನ್ನ ಅಧಿಕಾರ­ದಿಂದ ಮತ್ತೊಬ್ಬರಿಗೆ ಕೆಡುಕು ಉಂಟು ಮಾಡದೆ ತನ್ನ ಪರಿಮಿತಿಯಲ್ಲಿ ಸಮಾಜಕ್ಕೆ ಆದಷ್ಟೂ ಒಳಿತನ್ನು ಮಾಡುವ ಮನೋಭಾವ ಹೊಂದಿರಬೇಕು. ಇಂತಹ ಆಶ­ಯವೇ ನಾಗರಿಕ ಸೇವೆಗಳಲ್ಲಿ ನೈತಿಕತೆಯ ವಿಷಯ ಅಳವಡಿಕೆಗೆ ಮೂಲ ಕಾರಣ.

ಆಧುನಿಕ ಶಿಕ್ಷಣ ವಿಧಾನಗಳಾದ ಎಂಜಿನಿಯರಿಂಗ್, ವೈದ್ಯಕೀಯ, ಬಿಸಿನೆಸ್, ಮ್ಯಾನೇಜ್‌ಮೆಂಟ್, ವಿಜ್ಞಾನ, ತಂತ್ರಜ್ಞಾನ ಯಾವುದೇ ಇರಲಿ ಮತ್ತು ತೀರಾ ಇತ್ತೀಚಿನ ತಂತ್ರಜ್ಞಾನ ವಲಯಕ್ಕೆ ಸೇರುವ ಜೈವಿಕ ತಂತ್ರಜ್ಞಾನದ ಭಾಗಗಳಾದ ಕುಲಾಂತರಿ ತಂತ್ರಜ್ಞಾನ (ರೀ ಕಾಂಬಿನೆಂಟ್ ಡಿ.ಎನ್.ಎ. ಟೆಕ್ನಾಲಜಿ), ತದ್ರೂಪಿ ತಳಿ ತಂತ್ರಜ್ಞಾನ (ಕ್ಲೋನಿಂಗ್), ಡಿಸೈನರ್ ಬೇಬಿ ತಂತ್ರಜ್ಞಾನ ಇತ್ಯಾದಿಗಳ ದುರ್ಬಳಕೆ ಪರಿಹಾರವಿಲ್ಲದ ಜಾಗತಿಕ ಸಮಸ್ಯೆಗಳನ್ನು ಹುಟ್ಟು ಹಾಕಬಲ್ಲದು.

ಅಂದರೆ, ಯಾವುದೇ ಒಂದು ತಂತ್ರಜ್ಞಾನದ ಒಳಿತು ಮತ್ತು ಕೆಡುಕು ಅದರ ಬಳಕೆಯ ವಿಧಾನವನ್ನು ಅವಲಂಬಿಸಿರುತ್ತದೆ.
ಒಬ್ಬ ವಿಜ್ಞಾನಿಗೆ ತನ್ನ ಸಂಶೋಧನಾ ಜ್ಞಾನದಷ್ಟೇ ನೈತಿಕ ಮೌಲ್ಯಗಳೂ ಅವಶ್ಯಕ. ಇಲ್ಲವಾದರೆ ಆತ ಜಗತ್ತಿಗೆ ಮಾರಕವಾಗಬಲ್ಲ. ಇದಕ್ಕೆ ಜೈವಿಕ ಯುದ್ಧಗಳಿಗಿಂಥ ಘೋರ ಉದಾಹರಣೆ ಮತ್ತೊಂದಿಲ್ಲ.

ಕುಲಾಂತರಿ ತಂತ್ರಜ್ಞಾನದ (ರೀ ಕಾಂಬಿನೆಂಟ್ ಡಿ.ಎನ್.ಎ. ಟೆಕ್ನಾಲಜಿ) ಕೂಸಾದ ಈ ತಂತ್ರಜ್ಞಾನವು ದಶಕದ ಹಿಂದೆ ಭಯೋ­ತ್ಪಾದಕರ ಕೈ ಸೇರಿ ಸಾರ್ಸ್, ಆಂರ್ಥಾಕ್‌್ಸಗಳಂತಹ, ಸುಲಭಕ್ಕೆ ವಾಸಿಯಾಗದ ಮಹಾಮಾರಿಗಳಾಗಿ ಸಾವಿರಾರು ಅಮೂಲ್ಯ ಜೀವಗಳ ಮಾರಣ ಹೋಮಕ್ಕೆ  ಕಾರಣವಾಗಿದ್ದು ನಮಗೆಲ್ಲ ತಿಳಿದಿದೆ.

ಕುಲಾಂತರಿ ತಂತ್ರಜ್ಞಾನ ಮತ್ತು ತದ್ರೂಪಿ ತಳಿ ತಂತ್ರಜ್ಞಾನವನ್ನು (ಕ್ಲೋನಿಂಗ್) ಅನೇಕ ಉಪಯೋಗಿ ಪ್ರಾಣಿಗಳು, ಸಸ್ಯಗಳು, ಸೂಕ್ಷ್ಮ ಜೀವಿಗಳು, ಔಷಧಿಗಳು, ಪ್ರೊಟೀನ್‌ಗಳು ಮತ್ತು ಇತರ ವಾಣಿಜ್ಯ ಉತ್ಪನ್ನಗಳನ್ನು ಪಡೆಯುವ ಸಲುವಾಗಿ ಅಭಿವೃದ್ಧಿಪಡಿಸಲಾಗಿದೆ. ಅವುಗಳನ್ನು ಅಗತ್ಯವಿದ್ದಷ್ಟು ಮಾತ್ರವೇ ಮಾನವನ ಒಳಿತಿಗಾಗಿ ಬಳಸುವ ಮನೋಭಾವವನ್ನು ಕೇವಲ ವಿಜ್ಞಾನಿಗಳಷ್ಟೇ ಅಲ್ಲದೆ, ಈ ತಂತ್ರಜ್ಞಾನವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳೂ ಬೆಳೆಸಿಕೊಳ್ಳಬೇಕು.

ಇಲ್ಲವಾದರೆ ಹಣದ ಆಮಿಷಕ್ಕೆ ಒಳಗಾಗಿ ಅಥವಾ ಮತ್ಯಾರದೋ ಒತ್ತಡಕ್ಕೆ ಮಣಿದು ಅಂತಹ ತಂತ್ರಜ್ಞಾನವನ್ನು ಮಿತಿ ಮೀರಿ ಬಳಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಗ ಪ್ರಾಣಿ ಪಕ್ಷಿ ಹಾಗೂ ಸಸ್ಯ ಸಂಕುಲಗಳು ಕೇವಲ ಮಾನವನ ಅತಿಯಾದ ಅವಶ್ಯಕತೆಯನ್ನು ತೀರಿಸುವ ಸರಕಿನಂತೆ ಭಾಸವಾಗುತ್ತವೆ. ಇದರಿಂದ ಪರಿಸರದಲ್ಲಿ ಸಮತೋಲನ ತಪ್ಪಿ, ಅನೇಕ ಜಾಗತಿಕ ತೊಂದರೆಗಳಿಗೆ ದಾರಿಯಾಗುತ್ತದೆ.

ಕ್ಲೋನಿಂಗ್ ಮತ್ತು ಟರ್ಮಿನೇಟಿಂಗ್ ಜೀನ್ ತಂತ್ರಜ್ಞಾನಗಳ ಅನ್ವೇಷಣೆ­ಯಿಂದ ಮಾನವ ತಾನೇ ಭೂಮಿಯ ಸೃಷ್ಟಿಕರ್ತ ಎಂಬಂತೆ ವರ್ತಿಸುತ್ತಾ ಇತರ ಜೀವಿಗಳ ಮೇಲೆ ಹಿಡಿತ ಹೊಂದಲು ಯತ್ನಿಸುತ್ತಿರುವುದಂತೂ ತೀರಾ ಕಳವಳ­ಕಾರಿ ಅಂಶ.

‘ನೀವೂ ಬದುಕಿ, ಇತರರನ್ನೂ ಬದುಕಲು ಬಿಡಿ’ ಎನ್ನುತ್ತದೆ ಆಂಗ್ಲ ಉಕ್ತಿಯೊಂದು. ಆದರೆ ತನ್ನ ಅವಶ್ಯಕತೆ ಮತ್ತು ದುರಾಸೆಗಳಿಂದ ಮನುಷ್ಯ ಇತರ ಎಲ್ಲ ಜೀವಿಗಳನ್ನೂ ತನ್ನದೇ ಸ್ವತ್ತು ಎನ್ನುವಂತೆ ಬಳಸುವುದು ಅನೇಕ ಪರಿಹಾರ ರಹಿತ ನೈತಿಕ ಪ್ರಶ್ನೆಗಳ ಉದ್ಭವಕ್ಕೆ ನಾಂದಿ ಆಗಬಲ್ಲದು. ‘ಡಿಸೈನರ್ ಬೇಬಿ’ ತಂತ್ರಜ್ಞಾನ ಕೂಡ ಇದಕ್ಕೆ ಹೊರತಾಗಿಲ್ಲ. ಇದರಿಂದ ಮುಂದೆ ಸಮಾಜದಲ್ಲಿ ಬಡವ ಹಾಗೂ ಶ್ರೀಮಂತರ ನಡುವೆ ದೊಡ್ಡ ಕಂದರವೇ ನಿರ್ಮಾಣ ಆಗಬಲ್ಲದು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಹೊಂದಿರುವ ‘ಕ್ಲಿನಿಕಲ್ ರಿಸರ್ಚ್‌’ನಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳು ನೈತಿಕ ಮೌಲ್ಯಗಳ ಹಿನ್ನೆಲೆಯಲ್ಲೇ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ. ಹಣದ ಆಮಿಷಕ್ಕೆ ಒಳಗಾಗಿ ಯಾವುದೇ ಅನೈತಿಕವಾದ ಪ್ರಯೋಗವನ್ನು ಅವರು ನಡೆಸುವಂತಿಲ್ಲ. ಜೈವಿಕ ತಂತ್ರಜ್ಞಾನ ಮತ್ತು ಅದಕ್ಕೆ ಸಂಬಂಧಿಸಿದ ವಲಯಗಳಲ್ಲಿ ಸಂಶೋಧನೆ ಕೈಗೊಳ್ಳುವವರಿಗೆ ಹಾಗೂ  ವಿದ್ಯಾರ್ಥಿಗಳಿಗೆ ‘ಬಯೊ ಎಥಿಕ್ಸ್’ ಅನ್ನು ಬೋಧಿಸಲಾಗುತ್ತದೆ. ವೈದ್ಯರಿಗೂ ‘ಎಥಿಕ್ಸ್ ಇನ್ ಮೆಡಿಸಿನ್’ ಬೋಧಿಸಲಾಗುತ್ತದೆ.

‘ವ್ಯಾಪಾರಂ ದ್ರೋಹ ಚಿಂತನಂ’ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಲಾಭ ಗಳಿಕೆಯೊಂದೇ ಗುರಿಯಾಗಬಾರದು. ಖರೀದಿದಾರರು ಹಾಗೂ ಗ್ರಾಹಕರಿಂದ ಪಡೆದ ಹಣಕ್ಕೆ ತಕ್ಕ ಸೇವೆ ಒದಗಿಸುವುದು ವ್ಯಾಪಾರಿಯ/ ಮಾರಾಟಗಾರನ ಕರ್ತವ್ಯವೂ ಹೌದು. ಬಿಸಿನೆಸ್, ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲೂ ನೈತಿಕತೆಯ ಅಗತ್ಯ ಇದೆ. ಹೀಗಾಗಿ ಅದನ್ನು ‘ಬಿಸಿನೆಸ್ ಎಥಿಕ್ಸ್’ ಎಂದು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ.

ನೈತಿಕ ಮೌಲ್ಯಗಳು ದೇಶದಿಂದ ದೇಶಕ್ಕೆ ವಿಭಿನ್ನವಾಗಿದ್ದು, ಕಾಲಕಾಲಕ್ಕೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಇದಕ್ಕೆ ಕಾರಣ ಅವರ ವಿಭಿನ್ನ ಸಂಸ್ಕೃತಿಗಳು. ಏನೇ ಆದರೂ ನಾವೆಲ್ಲ ಮಾನವರಾಗಿಯೇ ಉಳಿಯಬೇಕಾದರೆ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಅದಕ್ಕಾಗೇ ಪುಟ್ಟ ಮಕ್ಕಳಿಗೆ ಶಾಲೆ ಹಾಗೂ ಮನೆಗಳಲ್ಲಿ ಕಥೆ ಮತ್ತು ದೃಷ್ಟಾಂತಗಳ ಮೂಲಕ ನೈತಿಕ ಮೌಲ್ಯಗಳನ್ನು ಕಲಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT